ಹೊಸದಿಲ್ಲಿ: ಕೋವಿಡ್ ಸೋಂಕಿನಿಂದ ಒಂದು ಹಂತದಲ್ಲಿ ದೇಶದ ಅರ್ಥ ವ್ಯವಸ್ಥೆಗೆ ಕೊಂಚ ಹಿನ್ನಡೆ ಉಂಟಾಗಿದ್ದರೂ ಈಗ ಸುಧಾರಿಸಿದೆ.
ಇದಕ್ಕೆ ಪುರಾವೆ ಎಂಬಂತೆ 2021-22 ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಶೇ. 8.7ರಷ್ಟು ಬೆಳವಣಿಗೆ ದಾಖಲಿಸಿದೆ.
ಕಳೆದ ವಿತ್ತ ವರ್ಷದ ಕೊನೆಯ ತ್ತೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 4.1ರಷ್ಟು ಧನಾತ್ಮಕ ಬೆಳವಣಿಗೆ ಕಂಡಿದೆ. ಇದರಿಂದಾಗಿ ಜಿಡಿಪಿ ಬೆಳವಣಿಗೆ ಕೊರೊನಾ ಸೋಂಕು ಕರಾಳ ಹಸ್ತವನ್ನು ಚಾಚುವುದಕ್ಕೆ ಮೊದಲಿನ ಅವಧಿಯನ್ನು ಸರಿಗಟ್ಟಿದಂತಾಗಿದೆ.
ಸರಕಾರ ಮಂಗಳವಾರ ಈ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. 2020-21 ವಿತ್ತೀಯ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಜಿಡಿಪಿ ಶೇ. 2.5ರಷ್ಟು ಬೆಳವಣಿಗೆ ದಾಖಲಿಸಿತ್ತು. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಒ) ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ ಮುನ್ನೋಟ ವರದಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ. 8.9ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದಿತ್ತು.
ಇದಕ್ಕೆ ಪೂರವಾಗಿ ಅರ್ಥವ್ಯವಸ್ಥೆಯ ಅಭಿವೃದ್ಧಿಗೆ ನೆರವಾಗುವ ಪ್ರಮುಖ ಎಂಟು ಕ್ಷೇತ್ರಗಳಲ್ಲಿ ಶೇ. 8.4ರಷ್ಟು ಬೆಳವಣಿಗೆ ದಾಖಲಾಗಿದೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಈ ಎಂಟು ಕ್ಷೇತ್ರಗಳಾಗಿವೆ.
ಜಿಎಸ್‌ಟಿ: ಕರ್ನಾಟಕಕ್ಕೆ 8,633 ಕೋಟಿ ರೂ.
ಜಿಎಸ್‌ಟಿ ಪೈಕಿ ರಾಜ್ಯಗಳಿಗೆ ನೀಡ ಬೇಕಾಗಿರುವ ಪಾಲನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕಕ್ಕೆ 8,633 ಕೋಟಿ ರೂ. ಲಭಿಸಿದೆ. ಪ್ರಸಕ್ತ ವರ್ಷದ ಮಾ. 31ರ ಮುಕ್ತಾಯದ ವರೆಗೆ ರಾಜ್ಯಗಳಿಗೆ ದೊರಕಬೇಕಾಗಿರುವ ಪಾಲು ಇದು. ರಾಜ್ಯಗಳು ಮತ್ತು ಕೇಂದ್ರಾಡ ಳಿತ ಪ್ರದೇಶಗಳಿಗೆ 86,912 ಕೋ.ರೂ. ಮೊತ್ತವನ್ನು ಜಿಎಸ್‌ಟಿ ಪರಿಹಾರ ಮೊತ್ತ ವಾಗಿ ನೀಡಲಾಗಿದೆ. ಮಹಾ ರಾಷ್ಟ್ರಕ್ಕೆ 14,145 ಕೋಟಿ ರೂ., (ಮೊದಲ ಸ್ಥಾನ), ತಮಿಳುನಾಡಿಗೆ 9,602 ಕೋಟಿ ರೂ. (ದ್ವಿತೀಯ ಸ್ಥಾನ) ಸಿಕ್ಕಿದೆ.