Advertisement

Yakshagana: ಅರ್ಥಗಾರಿಕೆ ಮತ್ತು ಸಮಕಾಲೀನತೆ

01:43 AM Oct 01, 2023 | Team Udayavani |

ತಾಳಮದ್ದಲೆಯ ಅರ್ಥಗಾರಿಕೆ ಇಂದು ವಿಸ್ತಾರವಾಗಿ ಬೆಳೆದಿದೆ. ವಾಚಿಕ ಅಭಿವ್ಯಕ್ತಿಯ ಸೌಂದರ್ಯವು ಹೇಗಿರ ಬಹುದು ಎಂಬುದಕ್ಕೆ ದೃಷ್ಟಾಂತವಾಗಿದೆ. ಆದರೆ ಒಂದು ರಂಗಭೂಮಿ ಅಥವಾ ಕಲಾಮಾಧ್ಯಮವು ಸದಾ ಆಕರ್ಷಕ ವಾಗಿ, ಪ್ರೇಕ್ಷಕರನ್ನು ಸೆಳೆಯುತ್ತ ಇರಬೇಕಾದರೆ ಸೌಂದರ್ಯವಷ್ಟೇ ಸಾಕಾಗುವುದಿಲ್ಲ. ಪ್ರೇಕ್ಷಕನಿಗೆ ಅದ ರೊಂದಿಗೆ ಸ್ಪಂದಿಸುವ ಅವಕಾಶವೂ ಇರಬೇಕು. ತಾಳ ಮದ್ದಲೆಯ ಅರ್ಥಗಾರಿಕೆ ಇಂತಹ ಒಂದು ಅನುಕೂಲ ವನ್ನು ಕಲ್ಪಿಸಿಕೊಡುತ್ತದೆ. ಪ್ರೇಕ್ಷಕರಿಗೆ ಪೌರಾಣಿಕ ಆವರಣ ಎಂಬ ನಿನ್ನೆಯ ಒಳಗೆ ಸಮಕಾಲೀನತೆ ಎಂಬ ಇಂದನ್ನು ತುಂಬಿಕೊಡುತ್ತದೆ. ಪ್ರೇಕ್ಷಕನಿಗೆ ತನ್ನನ್ನು ಒಳಗೊಳ್ಳುವ ರಂಗಭೂಮಿಯು ತನ್ನದೇ ಎಂಬ ತಾದಾತ್ಮ  ಉಂಟಾದರೆ ಆ ರಂಗಭೂಮಿ ಸಾರ್ಥಕವಾಯಿತು ಎಂದರ್ಥ. ಇದು ಸಾಧ್ಯವಾಗುವುದು ಅರ್ಥಾತ್‌ ಸ್ಪಂದನಶೀಲತೆ ಕಾಣುವುದು ಮಾತಿನಲ್ಲೇ.

Advertisement

ಈ ಸಾಧ್ಯತೆಯೇ ದೊಡ್ಡ ಅಪಾಯ ವನ್ನು ಕೂಡ ಹೊಂದಿದೆ. ಯಾಕೆಂದರೆ ಸಮಕಾಲೀನ ವಿಚಾರ ಬರುವಾಗ ಆಧುನಿಕವಾದ ಭಾಷೆಯು ಬರುವ ಅವಕಾಶವಿದೆ. ಹಾಗೆ ಬಂದರೆ ಆಗ ಕಲೆಯು ನಿರ್ಮಿಸಿದ ಆವರಣವು ಭಗ್ನವಾಗುತ್ತದೆ. ಸಮಕಾಲೀನತೆ ಎಂಬುದು ವರ್ತಮಾನ ಪತ್ರಿಕೆಯ ಓದು ಅಥವಾ ಬೀದಿಯ ಮಾತು ಆಗಬಾರದು. ಅದು ಕಲೆಯಾಗಿಯೇ ಪ್ರಕಟವಾಗಬೇಕು. ಪುರಾಣದ ಪಾತ್ರವು ಹೊಂದಿದ ಅನುಭವವು ಸಾರ್ವ ಕಾಲಿಕ ಎಂಬುದನ್ನು ಕಲಾತ್ಮಕವಾಗಿ ಪ್ರಕಟಿಸುವುದು ಸಾಧ್ಯವಾಗಬೇಕು.

ಅದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಸುಲಭ ವಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಒಂದು ಅನುಭವವನ್ನು ವಿವರಿಸುತ್ತೇನೆ. ಉತ್ತರಕನ್ನಡದ ಒಂದು ಊರಿನಲ್ಲಿ “ವಾಮನ ಚರಿತ್ರೆ’ ಎಂಬ ಪ್ರಸಂಗ. ಅದರಲ್ಲಿ ನಾನು ಬಲಿಯ ಪಾತ್ರದಲ್ಲಿದ್ದೆ. ವಿದ್ವಾನ್‌ ಹಿರಣ್ಯ ವೆಂಕಟೇಶ್ವರ ಭಟ್ಟರು ಶುಕ್ರನ ಪಾತ್ರದಲ್ಲಿದ್ದರು. ಬೇಡುವುದಕ್ಕೆ ಬಂದ ವಾಮನನಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು, ಮೂರುಹೆಜ್ಜೆ ಭೂಮಿಯನ್ನು ದಾನ ಕೊಡಬೇಕು ಎಂಬುದು ಬಲಿಯ ನಿಲುವು. ಇಲ್ಲ, ಮಾತು ಮೀರಿದರೂ ಸರಿ, ಆಪತ್ತಿನಿಂದ ತಪ್ಪಿಸಿಕೊಳ್ಳಬೇಕು ಎಂಬುದು ಶುಕ್ರನ ನಿಲುವು. ಅದಕ್ಕಾಗಿ ಶಾಸ್ತ್ರವಾಕ್ಯದ ಮೂಲಕ ಸಮರ್ಥನೆ.

ವಾದ ಬೆಳೆದ ಸಂದರ್ಭದಲ್ಲಿ ನಾನು “ಮಾತು ತಪ್ಪುವುದು ಎಂದರೆ ವ್ಯಕ್ತಿತ್ವವನ್ನೇ ಕಳೆದುಕೊಂಡ ಹಾಗೆ. ಮಾತು ಕೊಡುವುದು ಎಂದರೆ ನನ್ನನ್ನೇ ಕೊಟ್ಟಂತೆ. ಅದಕ್ಕೆ ಎಂತಹ ಕಾರಣವನ್ನೇ ನೀಡಿ ತಪ್ಪಿದರೂ ಅದು ನನ್ನ ಚಾರಿತ್ರ್ಯದಲ್ಲಿ ಕಳಂಕವೆನಿಸುತ್ತದೆ. ಒಬ್ಬ ಆಳುವ ದೊರೆಯಾಗಿ, ಜನಸಂದೋಹದ ನಾಯಕನಾಗಿ ನಾನು ಚಾರಿತ್ರ್ಯ ಹೀನನಾಗಲೆ? ಆಳುವವನೇ ಸುಳ್ಳುಗಾರ, ವಂಚಕ ಎಂದಾದರೆ ಪ್ರಜೆಗಳು ಅದನ್ನೇ ಅನುಸರಿಸುವುದಿಲ್ಲವೆ? ಎಂತಹ ವಿಪತ್ತೇ ಉಂಟಾಗಲಿ, ಆಳುವವನು ಮೌಲ್ಯವನ್ನು ಗೌರವಿಸುವುದು ಮತ್ತು ಚಾರಿತ್ರ್ಯವಂತನಾಗಿರುವುದು ಎಲ್ಲಕ್ಕಿಂತ ಮುಖ್ಯ’ ಎಂದು ಪ್ರತಿಪಾದಿಸಿದೆ.

ಶುಕ್ರಾಚಾರ್ಯರು, “ಮಾತು ತಪ್ಪುವುದು ಆಪತ್ತನ್ನು ತಪ್ಪಿಸುವುದಕ್ಕೆ. ಈ ಆಪತ್ತು ವ್ಯಕ್ತಿಯಾಗಿ ಬಲಿಯನ್ನು ಮಾತ್ರ ಬಾಧಿಸುವುದಲ್ಲ. ದಾನವರ ನಾಯಕನನ್ನೂ ಬಾಧಿ ಸುತ್ತದೆ. ಅರಸನೆಂದರೆ ಎಲ್ಲರೂ ಅದರಲ್ಲಿ ಸಮಾವೇಶ ಗೊಂಡಿದ್ದಾರೆ. ಹಾಗಾಗಿ ವ್ಯಷ್ಟಿಯ ಮೌಲ್ಯ ಈ ಸಮಷ್ಟಿ ಮೌಲ್ಯಕ್ಕಿಂತ ಹೆಚ್ಚಲ್ಲ. ಸಮಷ್ಟಿಯ ಉಳಿವಿಗಾಗಿ ವೈಯಕ್ತಿಕ ವಾದುದನ್ನು ಬಿಡುವುದು ಅನಿವಾರ್ಯ’ ಎಂದು ಪ್ರತಿ ಪಾದಿಸಿದರು. ಇಲ್ಲಿ ಆಳುವವನ ಚಾರಿ ತ್ರ್ಯ ಸಾರ್ವಜನಿಕವಾಗಿ ಸ್ವತ್ಛ ವಾಗಿರ ಬೇಕು ಎಂಬ ಒಂದು ಮೌಲ್ಯಕ್ಕೂ, ಬಂದಿರುವ ಆಪತ್ತು ನಾಯಕನನ್ನು ಮಾತ್ರವಲ್ಲದೆ ಪ್ರಜೆ ಗಳನ್ನೂ (ದೇಶವನ್ನೂ) ಬಾಧಿಸುವು ದರಿಂದ ಅದನ್ನು ನಿವಾರಿಸುವುದೇ ಮುಖ್ಯ ಎಂಬ ಮೌಲ್ಯಕ್ಕೂ ಸಂಘರ್ಷ ಇದೆ. ಬಲಿ ಮಾತ್ತು ಶುಕ್ರರ ನಡುವೆ ಮಾತ್ರ ಅಲ್ಲ. ವ್ಯಷ್ಟಿ ಮತ್ತು ಸಮಷ್ಟಿಗಳ ನಡುವಿನ ಸಂಘರ್ಷವೂ ಹೌದು.

Advertisement

ಈ ವಾದವು ಮತ್ತೂ ಮುಂದುವರಿದು, ವ್ಯಕ್ತಿ ಯಾವುದನ್ನು ಮಾರ್ಗದರ್ಶಕವಾಗಿ ಸ್ವೀಕರಿಸಬೇಕು ಎಂಬ ಪ್ರಶ್ನೆಗೆ ಅವಕಾಶ ಕಲ್ಪಿಸಿತು. ಬುದ್ಧಿಯು ಪ್ರಧಾನವೊ, ಅಲ್ಲ ಭಾವವೋ? ಬಲಿಯು ಭಾವನೆಗೆ ವಶನಾಗಿದ್ಧಾನೆ. ಶುಕ್ರನು ಬೌದ್ಧಿಕವಾಗಿ ಯೋಚಿಸುತ್ತಿದ್ದಾನೆ. ಬುದ್ಧಿಯ ಮಾತನ್ನು ಕೇಳಿದರೆ, ಅದನ್ನು ಆಚರಿಸಿದರೆ ಕ್ಷೇಮ. ಆದರೆ ಇದು ಬಲಿಗೆ ಅಷ್ಟು ಸರಳವಲ್ಲ. ಬಂದಿರುವವನು ವಿಷ್ಣು. ಅವನು ಬಂದಿರುವಾಗ ತಾನು ಭಾವುಕನಾಗದೇ ಇರಲು ಸಾಧ್ಯವೆ? ವ್ಯಕ್ತಿಯೊಬ್ಬನು ಭಾವನೆಗಳೇ ಇಲ್ಲದವನಾದರೆ ಜೀವನದಲ್ಲಿ ಸ್ವಾರಸ್ಯವೇನು? ಸಂಬಂಧಗಳು, ದಾಂಪತ್ಯ, ಸಮೂಹ ಜೀವನ ಎಲ್ಲವೂ ಭಾವನಾತ್ಮಕ. ಭಾವನೆಯನ್ನು ಮೀರಿದರೆ ಇವೆಲ್ಲ ಉಳಿಯಲಾರವು. ಇದು ಬಲಿಯ ನಿಲುವಾದರೆ ಶುಕ್ರನು ನೋಡುವುದು ಬೇರೆ ಕೋನದಿಂದ. ರಾಜನು ಭಾವನೆಗೆ ವಶನಾದರೆ ಅಪರಾಧಿಗೆ ಶಿಕ್ಷೆಯನ್ನು ವಿಧಿಸುವುದೂ ಕಷ್ಟವೇ. ಇದು ಬೌದ್ಧಿಕವಾಗಿ ವಿವೇಚಿಸ ಬೇಕಾದ ವಿಚಾರ. ರಾಜನು ಭಾವನೆಯನ್ನು ನಿಯಂತ್ರಿಸು ವುದು ಅತ್ಯಗತ್ಯ… ಹೀಗೆ.

ಇಲ್ಲಿ ನಾವು ಆಡಿದ ಮಾತುಗಳು ಇವತ್ತಿನ ಸಮಾಜಕ್ಕೆ ಸಂಬಂಧಿಸಿದವು. ಆದರೆ ಅದೇ ವೇಳೆಗೆ ಪೌರಾಣಿಕವಾದ ಆವರಣದ ಒಳಗೇ ಇದ್ದವು. ಭಾಷೆಯು ಆಧುನಿಕ ವಾಗಲಿಲ್ಲ. ಸಮಕಾಲೀನ ಸ್ಪಂದನವನ್ನು ಅರ್ಥಧಾರಿಯ ಮಾತಿನಲ್ಲಿ ಹೇಗೆ ತರಬಹುದು ಎಂಬುದಕ್ಕೆ ಒಂದು ಸಾಧ್ಯತೆಯಾಗಿ ಈ ಸಂವಾದವು ಕಾಣಿಸಿತು. ಕೇಳಿದವರು ಅದೇ ಅಭಿಪ್ರಾಯದಲ್ಲಿ ಪ್ರತಿಕ್ರಿಯಿಸಿದರು. ಅರ್ಥ ಧಾರಿಗಳಾಗಿ ನಮಗೂ ಸಮಾಧಾನ ಉಂಟಾಯಿತು. ಈ ರೀತಿಯ ಅಭಿವ್ಯಕ್ತಿಯನ್ನು ರಂಗಭೂಮಿ ಮತ್ತು ಪ್ರೇಕ್ಷಕರ ಸ್ಪಂದನ ಎರಡೂ ದೃಷ್ಟಿಯಿಂದ ಸ್ವೀಕರಿಸಬಹುದು ಎಂದು ತೋರುತ್ತದೆ.

ರಾಧಾಕೃಷ್ಣ ಕಲ್ಚಾರ್‌ ತಾಳಮದ್ದಲೆ ಅರ್ಥಧಾರಿ

Advertisement

Udayavani is now on Telegram. Click here to join our channel and stay updated with the latest news.

Next