ಅರ್ಥಶಾಸ್ತ್ರದ ಅರಿವಿನ ಕೊರತೆ ಅಭಿವೃದ್ಧಿಯ ವೇಗವನ್ನು ಪರೋಕ್ಷವಾಗಿ ಕೊಂಚ ಮಟ್ಟಿಗೆ ತಗ್ಗಿಸಿದೆ ಎನಿಸುತ್ತದೆ.
ಜೀವನದಲ್ಲಿ ಅರ್ಥಶಾಸ್ತ್ರ ಎಂಬುದು ಮುಖ್ಯ ಅಂಗ. ಬದುಕಿನಲ್ಲಿ ಹಣ, ಶ್ರಮ, ದುಡಿಮೆ, ಉಳಿತಾಯ ಇವೆಲ್ಲದರ ಬಗ್ಗೆ ಅರ್ಥಶಾಸ್ತ್ರ ಅರ್ಥವಾಗಿ ತಿಳಿಸಿಕೊಡುತ್ತದೆ. ಜೀವನದಲ್ಲಿ ಆರ್ಥಿಕ ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳಬೇಕಾದರೆ ನಮಗೆ ಅರ್ಥಶಾಸ್ತ್ರದ ಜ್ಞಾನ ಅಗತ್ಯ. ಕೋವಿಡ್ 19 ವೈರಸ್ ಕಾಣಿಸಿಕೊಂಡ ಅನಂತರ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಚರ್ಚೆಯಾಗಿದ್ದು ರಾಷ್ಟ್ರಗಳ ಆರ್ಥಿಕ ವೃದ್ಧಿ ದರ(ಜಿಡಿಪಿ)ದ ಬಗ್ಗೆ. ಭಾರತವು ಇದಕ್ಕೆ ಹೊರತಾಗಿಲ್ಲ . 2019-20ರ ಕೊನೆಯ ತ್ತೈಮಾಸಿಕದಲ್ಲಿ ಜಿಡಿಪಿ ದರ ಶೇ. 4.2ರಷ್ಟು ಕುಸಿತದೊಂದಿಗೆ ದಾಖಲಾಯಿತು. ಕಳೆದ 11 ವರ್ಷಗಳಲ್ಲಿಯೇ ದಾಖಲಾದ ಕನಿಷ್ಠ ಆರ್ಥಿಕ ವೃದ್ಧಿ ದರ ಇದಾಗಿದ್ದು, ಇದನ್ನು ಅನೇಕ ಆರ್ಥಿಕ ತಜ್ಞರು ಸಹ ವಿಶ್ಲೇಷಿಸಿದರು. ಆರ್ಥಿಕ ಬೆಳವಣಿಗೆ ಹಾಗೂ ರಾಷ್ಟ್ರದ ಅಭಿವೃದ್ಧಿಗೂ ನೇರ ಸಂಬಂಧವಿರುವುದನ್ನು ನಾವೆಷ್ಟು ಬಲ್ಲೆವು ಎಂಬುದನ್ನು ಮನಗಾಣಬೇಕಿದೆ.
ಭಾರತದಲ್ಲಿ ಜನಸಂಖ್ಯೆ 130 ಕೋಟಿಯನ್ನು ದಾಟಿ ಮುನ್ನುಗ್ಗುತ್ತಿರುವಾಗ ಶೀಘ್ರ ಅಭಿವೃದ್ಧಿ ಏಕೆ ಸಾಧ್ಯವಾಗುತ್ತಿಲ್ಲ? ಹೀಗೆ ಯೋಚಿಸುತ್ತ ಹೋದರೆ, ಅದರ ನಂಟು ಬಡತನದ ವಿಷವರ್ತುಲದೊಂದಿಗೆ ಬೆಸೆದುಕೊಳ್ಳುತ್ತದೆ. ಕಡಿಮೆ ಆದಾಯ, ಕಡಿಮೆ ಉಳಿತಾಯ, ಕಡಿಮೆ ಹೂಡಿಕೆ, ಕನಿಷ್ಠ ಮಟ್ಟದ ಉತ್ಪಾದನೆ-ಕನಿಷ್ಠ ಕೂಲಿ(ವೇತನ).. ಹೀಗೆ ಒಂದಕ್ಕೊಂದು ನೇರ ಸಂಬಂಧ ಹೊಂದಿರುತ್ತದೆ.
ಹಾಗಾದರೆ ಬಡತನ ನಿಯಂತ್ರಿಸುವುದು ಹೇಗೆ? ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡರೆ ಸಾಕೇ?. ಆರ್ಥಿಕ ಸ್ಥಿತಿಗತಿಗಳ ಕುರಿತು ಅರಿವು ಮೂಡಿಸುವುದು ಮುಖ್ಯ ಎಂದೇಕೆ ಅನಿಸುವುದಿಲ್ಲ. ಕೋವಿಡ್ 19 ಭಾರತಕ್ಕೆ ಕಾಲಿಟ್ಟ ಅನಂತರ ಭಾರತ ಸರಕಾರವು ಹಲವಾರು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿತು. ದಿನಕ್ಕೊಂದು ಆಥಿìಕ ಪರಿಭಾಷೆಗಳನ್ನು ತಿಳಿಸುವಾಗ ಜನರು, ವಿದ್ಯಾರ್ಥಿಗಳು ಗೊಂದಲಕ್ಕೀಡಾದರು. ಇವುಗಳ ಅರ್ಥ ಹುಡುಕಲು ಗೂಗಲ್ ಮೊರೆ ಹೋದರು. ಆಗಷ್ಟೇ ನೋಡಿ, ಮತ್ತೆ ಮರೆತೇಬಿಟ್ಟರು. ಆದರೆ ದೈನಂದಿನ ಜೀವನದಲ್ಲಿ ಕೆಲವು ಆರ್ಥಿಕ ಪರಿಭಾಷೆಗಳನ್ನು ಬಹುಮುಖ್ಯವಾಗಿ ತಿಳಿದಿರಬೇಕಾದುದು ಅಗತ್ಯ. ಆದರೆ ಸಾಮಾನ್ಯವಾದ ರೆಪೋ ದರ, ರಿವರ್ಸ್ ರೆಪೋ ದರಗಳ ಬಗ್ಗೆ ಕೂಡ ಸಾಮಾನ್ಯ ಜ್ಞಾನ ಇಲ್ಲದಿರುವ ಮಾತು ಕೇಳಿಬಂದಾಗ ಆಗ ಜನ ಸಾಮಾನ್ಯರಿಗೆ ಅರ್ಥಶಾಸ್ತ್ರ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಅರಿವಿನ ಕೊರತೆ ಇದೆ ಎಂದೆನಿಸುತ್ತದೆ.
17ಕ್ಕಿಂತಲೂ ಅಧಿಕ ಪಾಲನ್ನು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಕೃಷಿ ವಲಯದ ಕುರಿತು ಬಹುತೇಕ ಕೃಷಿಕರಿಗೆ, ಅಭಿವೃದ್ಧಿಯಲ್ಲಿ ತಮ್ಮ ಪಾಲು ಎಷ್ಟಿದೆ ಎಂಬುದರ ಅರಿವಿದ್ದಂತೆ ಕಾಣುವುದಿಲ್ಲ. ಹೊಟೇಲ್‌ನಲ್ಲಿ ಭಕ್ಷ್ಯ ಭೋಜನಗಳನ್ನು ಗ್ರಾಹಕರು ಕೂತಲ್ಲಿಗೆ ತಂದು ಬಡಿಸುವ ಒಬ್ಬ ಸಪ್ಲಯರ್‌ರಿಗೆ ತಾನು ಸೇವಾ ವಲಯದ ಭಾಗವೆಂಬುದು ತಿಳಿದಿರುವುದಿಲ್ಲ. ಮರಗೆಲಸ ಮಾಡುವ ಬಡಗಿಗೆ ತಾನೊಬ್ಬ ಸಂಪನ್ಮೂಲ ವ್ಯಕ್ತಿಯೆಂಬುದು ಇನ್ನೂ ತಿಳಿಯಬೇಕಿದೆ. ಇವರೆಲ್ಲರ ಅರಿವಿನ ಕೊರತೆ ಅಭಿವೃದ್ಧಿಯ ವೇಗವನ್ನು ಪರೋಕ್ಷವಾಗಿ ಕೊಂಚ ಮಟ್ಟಿಗೆ ತಗ್ಗಿಸಿದೆ ಎನಿಸುತ್ತದೆ. ಹುಂಡಿಯಲ್ಲಿ ಇಟ್ಟ ಕಾಸು ಅಕ್ಷಯ ವಾಗದು,”ನಡೆಯುತ್ತಿದ್ದರೆ ನಾಣ್ಯ’ ಅಂದರೆ ಹಣವು ಸದಾ ಚಲನಶೀಲತೆಯಿಂದಿದ್ದರೆ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಾಗಿದೆ. ಅರ್ಥಶಾಸ್ತ್ರ ವ್ಯಕ್ತಿಗತವಾಗಿ, ಸಮುದಾಯದ ಭಾಗವಾಗಿ ಬೆಸೆದು ಕೊಂಡಿರುವ ಬಗೆ ಯನ್ನು ಎಲ್ಲರೂ ಗುರುತಿಸಿ ಅಭಿವೃದ್ಧಿಗೆ ಕೈ ಜೋಡಿಸುವ ಅಗತ್ಯವಿದೆ.
ಶಕುಂತಲಾ ವಿನಯ್ ಬೆಂಗಳೂರು ವಿವಿ