Advertisement

ಸಂತೆಯಲ್ಲಿ ಅರ್ಥಶಾಸ್ತ್ರ

11:23 PM Jul 18, 2019 | sudhir |

ಮಾರುಕಟ್ಟೆ ಎನ್ನುವುದು ಒಂದು ಅದ್ಭುತ ಪರಿಕಲ್ಪನೆ. ಮಾನವ ನಾಗರಿಕನಾಗುತ್ತ ಸಾಗಿದಂತೆ ತಾನು ಕಂಡುಕೊಂಡ ಹೊಸ ವಿನಿಮಯ ಪದ್ಧತಿಯೇ ಮಾರುಕಟ್ಟೆ. ಇದು ಬಹಳ ಹಿಂದಿನ ಕಾಲದಿಂದಲೂ ಮಾನವ ನಾಗರೀಕತೆಯೊಂದಿಗೆ ಬೆಳೆದುಬಂದಿತ್ತು.

Advertisement

ಈ ಮಾರುಕಟ್ಟೆಯನ್ನು ಜನಸಾಮಾನ್ಯರು ಒಂದು ದೃಷ್ಟಿಕೋನದಿಂದ ನೋಡಿದರೆ ಅರ್ಥಶಾಸ್ತ್ರದ ವಿದ್ಯಾರ್ಥಿಗಳ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಏಕೆಂದರೆ, ನಮಗೆ ಮಾರುಕಟ್ಟೆ ಎನ್ನುವುದು ಒಂದು ವ್ಯವಹಾರ ನಡೆಯುವ ಜಾಗವಾಗಿ ಕಾಣದೆ ಅದೊಂದು ವಿಶ್ವವಿದ್ಯಾಲಯದ ರೀತಿ ಕಾಣುತ್ತದೆ.

ಏಕೆಂದರೆ, ಅರ್ಥಶಾಸ್ತ್ರ ಎನ್ನುವುದು ನಿಂತಿರುವುದೇ ವ್ಯವಹಾರದ ಪರಿಕಲ್ಪನೆಯ ಮೇಲೆ ಈ ಎಲ್ಲ ದೃಷ್ಟಿಕೋನದಿಂದ ಇದೇ ಕಳೆದ ಜುಲೈ 10ರಂದು ನಾವು ಹೆಬ್ರಿಯಲ್ಲಿನ ಮಾರುಕಟ್ಟೆಯನ್ನು ವಿಶ್ಲೇಷಣೆ ಮಾಡಲು ಹೊರಟೆವು.

ಅಂದು ನಾವು ಮಾರುಕಟ್ಟೆಯನ್ನು ನೋಡಿದ ರೀತಿ ಹಿಂದಿನ ದಿನಗಳಲ್ಲಿ ನೋಡಿದಂತೆ ಇರಲಿಲ್ಲ. ಅಂದು ನಮ್ಮ ಕಣ್ಣಿಗೆ ಹೆಬ್ರಿಯ ವಾರದ ಸಂತೆ ಒಂದು ಅರ್ಥ ಲೋಕದಂತೆ ಕಂಡಿತ್ತು. ಅಲ್ಲಿ ನಡೆಯುವ ಪ್ರತಿಯೊಂದು ವ್ಯಾಪಾರವನ್ನು ಅದರ ಹಿಂದಿನ ವ್ಯಾವಹಾರಿಕ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುವ ಹಂಬಲ ನಮ್ಮೆಲ್ಲರಲ್ಲಿತ್ತು.

ಹೆಬ್ರಿಯ ಮಾರುಕಟ್ಟೆಯನ್ನು ನಾವು ಅಂದು ಬಹಳ ಹೊತ್ತಿನವರೆಗೆ ಗಮನಿಸಿದೆವು. ಅಲ್ಲಿ ನಡೆಯುತ್ತಿದ್ದ ತರಕಾರಿಯ ವ್ಯಾಪಾರದಿಂದ ಹಿಡಿದು ಮೀನಿನ ವ್ಯಾಪಾರದವರೆಗೂ ನಮ್ಮ ಅರ್ಥ ದೃಷ್ಟಿ ಬೀರಿತ್ತು. ಅಲ್ಲಿನ ಪ್ರತಿಯೊಂದು ವಸ್ತುವಿನ ಬೇಡಿಕೆ ಯಾವ ಸಮಯದಲ್ಲಿ ಹೆಚ್ಚುತ್ತದೆ ಹಾಗೂ ಯಾವ ವಸ್ತುವಿನ ಬೇಡಿಕೆ ಎಂದು ಕುಸಿಯುತ್ತದೆ, ಅದರ ಬೆಲೆಯ ನಿರ್ಧಾರಕಗಳೇನು ಎನ್ನುವಂಥ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸಿದೆವು.

Advertisement

ಅದರೊಂದಿಗೆ ಹೆಬ್ರಿಯ ವಾರದ ಸಂತೆಯು ಹಲವು ಸಮಸ್ಯೆಗಳನ್ನು ಒಳಗೊಂಡಿತ್ತು ಹಾಗೂ ಆ ಮಾರುಕಟ್ಟೆ ನಮಗೆ ಒಂದು ಪರಿಪೂರ್ಣವಾದ ವ್ಯವಸ್ಥಿತವಾದ ಮಾರುಕಟ್ಟೆಯಂತೆ ಕಾಣಲಿಲ್ಲ.

ಅಲ್ಲಿ ಪ್ರಥಮವಾಗಿ ಸ್ವಚ್ಛತೆಗೆ ಯಾವುದೇ ರೀತಿಯ ವ್ಯವಸ್ಥೆಯನ್ನು ಕಂಡಂತಿರಲಿಲ್ಲ . ಅದರೊಂದಿಗೆ ಒಂದು ವ್ಯವಸ್ಥಿತವಾದ ಕಟ್ಟಡವಿರಲಿಲ್ಲ ಹಾಗೂ ಬಹುಪ್ರಮುಖವಾಗಿ ಸಂತೆಯು ಹೆಬ್ರಿಯ ಬಿ.ಸಿ.ಎಮ್‌ ಹಾಸ್ಟೆಲ್ನ ಅಂಗಳದಲ್ಲಿ ನೆರೆದಿತ್ತು. ಇದು ಎಷ್ಟು ದಿನದವರೆಗೆ ಎನ್ನುವ ಪ್ರಶ್ನೆ ನಮ್ಮಲ್ಲಿತ್ತು. ಅನೇಕ ವಿಚಾರಗಳನ್ನು ಸಂಗ್ರಹಿಸಿದೆವು. ಇದು ನಮಗೆ ಉತ್ತಮವಾದ ಕ್ಷೇತ್ರಕಾರ್ಯದ ಅನುಭವವನ್ನು ನೀಡಿತು.

ಈ ಎಲ್ಲ ವಿಷಯಗಳೊಡನೆ ಹಲವಾರು ವಿವರಗಳನ್ನು ತಿಳಿದು ಅಲ್ಲಿಂದ ಹೊರಬೀಳುವಾಗ ಹೆಬ್ರಿಯ ವಾರದ ಸಂತೆ ಒಂದು ಅದ್ಭುತವಾದ ಅರ್ಥಶಾಸ್ತ್ರದ ಕೃತಿಯನ್ನೇ ಓದಿ ಮುಗಿಸಿದ ಸಂತೃಪ್ತಿ ನಮ್ಮೆಲ್ಲರಲ್ಲಿತ್ತು.

– ವಿಷ್ಣುಧರನ್‌ ಶೆಟ್ಟಿ
ದ್ವಿತೀಯ ಬಿ. ಎ., ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next