Advertisement

2025 ವೇಳೆಗೆ ಆರ್ಥಿಕ ಸಬಲತೆ ಖಚಿತ

01:18 AM Jul 07, 2019 | Team Udayavani |

ಬೆಂಗಳೂರು: ಮೋದಿ 2.0 ಸರ್ಕಾರದ ಭವಿಷ್ಯದ ಯೋಜನೆಗಳು ಉತ್ತಮವಾಗಿದ್ದು, ಅವುಗಳ ಯಶಸ್ವಿ ಅನುಷ್ಠಾನದಿಂದ ಭಾರತದ ಆರ್ಥಿಕತೆಯು 2025ರ ವೇಳೆಗೆ 5 ಲಕ್ಷ ಕೋಟಿ ಡಾಲರ್‌ಗೆ ಏರುವುದರಲ್ಲಿ ಅನುಮಾನವಿಲ್ಲ ಎಂಬ ಒಮ್ಮತ ಅಭಿಪ್ರಾಯ ಆರ್ಥಿಕ ತಜ್ಞರು, ತೆರಿಗೆ ಸಹಾಯಕರು ಹಾಗೂ ನೂರಾರು ಲೆಕ್ಕ ಪರಿಶೋಧಕರಿಂದ ವ್ಯಕ್ತವಾಯಿತು.

Advertisement

ನಗರದ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಎಸ್‌ಐಆರ್‌ಸಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ವತಿಯಿಂದ ಶನಿವಾರ ಕೇಂದ್ರ ಬಜೆಟ್‌-2019 ಕುರಿತ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಗೋಷ್ಠಿಯಲ್ಲಿ ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸರ್ವೀಸ್‌ನ ಚೇರ್ಮನ್‌ ಟಿ.ವಿ.ಮೋಹನ್‌ದಾಸ್‌ ಪೈ, ಅಂತಾರಾಷ್ಟ್ರೀಯ ತೆರಿಗೆ ಸಲಹೆಗಾರ ಎಸ್‌.ಕೃಷ್ಣನ್‌, ಇನ್‌ಕ್ಲೂಡ್‌ ಲ್ಯಾಬ್ಸ್ನ ಚೇರ್ಮನ್‌ ನಾರಾಯಣ್‌ ರಾಮಚಂದ್ರನ್‌, ಐಸಿಟ್‌ ಫೌಂಡೇಷನ್‌ ಸಹ ಸಂಸ್ಥಾಪಕ ಶರದ್‌ ಶರ್ಮಾ, ಹಿರಿಯ ವಕೀಲ ಉದಯ್‌ ಹೊಳ್ಳ ಭಾಗವಹಿಸಿ ಬಜೆಟ್‌ ಅಂಶಗಳನ್ನು ವಿಶ್ಲೇಷಿಸಿದರು.

ಹಿಂದಿನ ವರ್ಷಗಳ ಬಜೆಟ್‌ಗಳ ಗಾತ್ರ, ಬಜೆಟ್‌ನಲ್ಲಿ ವಿವಿಧ ವಲಯಗಳ ಪಾಲನ್ನು ವಿವರಿಸುತ್ತಾ ಭಾರತದ ಜಿಡಿಪಿಯನ್ನು ನೆರೆಯ ಚೀನಾ ಹಾಗೂ ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೇರಿಕಾದೊಂದಿಗೆ ಹೋಲಿಕೆ ಮಾಡುವ ಮೂಲಕ ಟಿ.ವಿ.ಮೋಹನ್‌ದಾಸ್‌ ಪೈ ಗೋಷ್ಠಿ ಪ್ರಾರಂಭಿಸಿದರು.

“ಸ್ವಾತಂತ್ರ ಬಂದ ಆರಂಭದ ದಿನಗಳಲ್ಲಿ ದೇಶಕ್ಕಾದ ಹಿನ್ನೆಡೆಯು ಇಂದು ಭಾರತವು ಚೀನಾಕ್ಕಿಂತ ಹಿಂದುಳಿಯುವಲ್ಲಿ ಪ್ರಮುಖ ಕಾರಣವಾಗಿದೆ. ಇಂದು ವಿಶ್ವಮಟ್ಟದಲ್ಲಿ ಭಾರತ ಮೂರನೇ ದೊಡ್ಡ ಆರ್ಥಿಕತೆ ಹೊಂದಿದೆ. 2014ರಲ್ಲಿ 1.85 ಲಕ್ಷ ಕೋಟಿ ಡಾಲರ್‌ ಇದ್ದ ಆರ್ಥಿಕತೆ ಸದ್ಯ 2.7 ಲಕ್ಷ ಕೋಟಿ ಡಾಲರ್‌ ತಲುಪಿದೆ. ಸದ್ಯ ಕೇಂದ್ರ ಸರ್ಕಾರ ಹೊಸ ಯೋಜನೆಗಳ ಮೂಲಕ ಸದ್ಯ ಇರುವ ಆರ್ಥಿಕತೆಯನ್ನು ಕೆಲವೇ ವರ್ಷಗಳಲ್ಲಿ 5 ಲಕ್ಷ ಕೋಟಿ ಡಾಲರ್‌ಗೆ ತಲುಪಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ. ಇನ್ನು ಈ ಗುರಿಯು ಭವಿಷ್ಯದಲ್ಲಿ ಅಮೇರಿಕಾ ಹಾಗೂ ಚೀನಾಕ್ಕೆ ಸಮನಾಗಿ ಭಾರತ ನಿಲ್ಲಲು ಮಾರ್ಗವಾಗಿಲಿದೆ ಎಂದರು.

ಇನ್‌ಕ್ಲೂಡ್‌ ಲ್ಯಾಬ್ಸ್ನ ಚೇರ್ಮನ್‌ ನಾರಾಯಣ್‌ ರಾಮಚಂದ್ರನ್‌ ಮಾತಾನಾಡಿ, ಯಾವುದೇ ಸರ್ಕಾರವು ತನ್ನ ಯೋಜನೆಗಳನ್ನು ಸಂಕೀರ್ಣ ಮಾಡಬಾರದು. ಜನರಿಗೆ ಸುಲಭವಾಗಿ ಕೈಗೆಟುಕುವಂತಿರಬೇಕು. ಆ ನಿಟ್ಟಿನಲ್ಲಿ ಈ ಬಾರಿ ಬಜೆಟ್‌ನ ಘೋಷಿಸಿರುವ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಿ, ಜಾರಿಗೊಳಿಸುವಾಗ ಸರಳೀಕರಣಕ್ಕೆ ಆದ್ಯತೆ ನೀಡಬೇಕು. ರೈತನ ಆತ್ಮಹತ್ಯೆ ಕಡಿಮೆ ಮಾಡಿ, ಸ್ವಾವಲಂಭಿಗಳಾಗಿಸುವ ನಿಟ್ಟಿನಲ್ಲಿ ಕೃಷಿಕ ಆದಾಯವನ್ನು ಐದು ಪಟ್ಟು ಹೆಚ್ಚಿಸುವ ಗುರಿ ಹೊಂದಿರುವುದು ಉತ್ತಮ ನಿರ್ಧಾರ.

Advertisement

ಆದರೆ, ವಾಸ್ತವವಾಗಿ ಚಿಂತನೆ ನಡೆಸಿದರೆ ಸಾಕಷ್ಟು ರೈತರ ಜಮೀನುಗಳ ದಾಖಲೆಗಳೇ ಇನ್ನು ಸರಿಯಾಗಿಲ್ಲ, ರೈತ ಪರ ಯೋಜನೆ ಜಾರಿ ಜತೆಗೆ ರೈತನ ವಾಸ್ತವ, ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದರು. ಐಸಿಟ್‌ ಫೌಂಡೇಷನ್‌ ಸಹ ಸಂಸ್ಥಾಪಕ ಶರದ್‌ ಶರ್ಮಾ ಮಾತನಾಡಿ, ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಕೊಂಡೊಯ್ಯುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರವು ಗುರಿ ತಲುಪಲು ಹಳೆಯ ಅಭಿವೃದ್ಧಿ ಚಿಂತನೆಗಳಿಗೆ ಗಂಟು ಬೀಳದೆ ಹೊಸ ಚಿಂತನೆಗಳಿಗೆ ಆದ್ಯತೆ ನೀಡಬೇಕು.

ಇನ್ನು ಯಾವುದೇ ಸರ್ಕಾರಕ್ಕೆ ಉತ್ತಮ ಆಲೋಚನೆಗಳಿದ್ದರೆ ಸಾಲದು. ಅಂತೆಯೇ ಅವುಗಳ ಅನುಷ್ಠಾನ ಮುಖ್ಯವಾಗಲಿದೆ. ಕೇಂದ್ರ ಸರ್ಕಾರದ ಯೋಜನೆಗಳು ಭವಿಷ್ಯದಲ್ಲಿ ಅತ್ಯುತ್ತಮ ಫ‌ಲ ನೀಡಲಿವೆ. ಆದರೆ, ಅವುಗಳನ್ನು ಬದ್ಧ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು. ಇಲ್ಲವಾದರೆ ಉತ್ತಮ ಆಲೋಚನೆ, ಕಳಪೆ ಅನುಷ್ಠಾನಕ್ಕೆ ಬಜೆಟ್‌ ಮಾದರಿಯಾಗಲಿದೆ ಎಂದು ಹೇಳಿದರು.

ಸ್ಟಾರ್ಟ್‌ ಅಫ್ಗೆ ಉತ್ತಮ ಪ್ರೋತ್ಸಾಹ ನೀಡಿರುವುದು ಉದ್ಯಮ ಬೆಳವಣಿಗೆಗೆ ಪೂರಕವಾಗಲಿದೆ.ಇನ್ನು ಮಧ್ಯಮ ವರ್ಗದವರ ಹೊರೆ ಇಳಿಸಿ ಶೀಮಂತರ ತೆರಿಗೆ ಹೆಚ್ಚಿಸಿ, ಎಫ್ಡಿಎ ನಿಯಮ ಸಡಿಲಗೊಳಿಸುವ ಮೂಲಕ ಆದಾಯಕ್ಕೆ ಉತ್ತಮ ಮಾರ್ಗ ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.

ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಮಾತನಾಡಿ, ಇಂದಿಗೂ ಜಿಎಸ್‌ಟಿ ಅಂಶಗಳು ಸಂಕೀರ್ಣವಾಗಿವೆ. ಕೆಲ ವಕೀಲರು ಹಾಗೂ ನ್ಯಾಯಾಧೀಶರಿಗೆ ಜಿಎಸ್‌ಟಿ ಅಂಶಗಳ ಕುರಿತು ಗೊಂದಲಗಳಿವೆ. ಹೀಗಾಗಿಯೇ, ಕೆಲ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ. ಜಿಎಸ್‌ಟಿ ಸರಳೀಕರಣಕ್ಕೆ ಆದ್ಯತೆ ನೀಡಿರುವುದು ಉತ್ತಮ ನಡೆಯಾಗಿದೆ.

ಸದ್ಯ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆ ಇದ್ದು, ಸರ್ಕಾರದ ಅಭಿವೃದ್ಧಿ ಕೆಲಸಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಗಳನ್ನು ಸೇರಿದಂತೆ ಸಾಕಷ್ಟು ವ್ಯಾಜ್ಯಗಳು ಇಂದಿಗೂ ತೀರ್ಮಾನವಾಗದೆ ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ನ್ಯಾಯಾಧೀಶರ ನೇಮಕಕ್ಕೆ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next