ಹೊನ್ನಾವರ: ಕೋವಿಡ್-19 ಭಟ್ಕಳದಲ್ಲಿ ಕಾಣಿಸಿಕೊಂಡಾಗ ಈ ಪರಿ ಜಿಲ್ಲೆಯ ಜನ ತೊಂದರೆಗೆ ಒಳಗಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಕೋವಿಡ್ ಹೆಚ್ಚದಿರಲು ಆಡಳಿತ ಬಿಗಿಯಾಯಿತು. ಇನ್ನು ಮೂರೇ ದಿನ ಬಾಕಿ, ನಿಯಮಗಳು ಸಡಿಲಗೊಳ್ಳಲಿವೆ. ಈಗ ಕೋವಿಡ್ ಹರಡುವ ಸಂಭವ ಹೆಚ್ಚು. ಜನ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ.
ಒಂದು ತಿಂಗಳಿಂದ ಜಿಲ್ಲೆಯ ವಿವಿಧ ಪಕ್ಷದ ರಾಜಕಾರಣಿಗಳು ಅಭೂತ ಪೂರ್ವವಾಗಿ ಜನರ ಅನ್ನಸಂಕಟ ನಿವಾರಣೆಯಲ್ಲಿ ತೊಡಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಚುನಾವಣೆ ಕಾಲದಲ್ಲಿ 3 ವಾರ ಓಡಾಡಿದರೆ ಮತದಾನದ ದಿನ ಬರುತ್ತಿತ್ತು. ಈಗ ಆರು ವಾರಗಳಿಂದ ಓಡಾಡುತ್ತಿದ್ದರೂ ಜನರನ್ನು ತಲುಪಲಾಗುತ್ತಿಲ್ಲ. ಅನ್ನ ಸಂಕಟವೇನೋ ನಿವಾರಣೆಯಾಗಬಹುದು. ಇದೇ ಆಸಕ್ತಿಯನ್ನು ಜನರ ಆರ್ಥಿಕ ಸಂಕಟ ನಿವಾರಣೆಗೆ ತೋರಿಸಬೇಕಾದ ಅನಿವಾರ್ಯತೆ ಮುಂದಿನ ಮುಖ್ಯ ಸವಾಲಾಗಿದೆ.
ದುಡಿಮೆ 6 ತಿಂಗಳಿಗೆ ಸಾಕಾಗಿ ಇನ್ನಾರು ತಿಂಗಳಿಗೆ ಸರ್ಕಾರ ನಂಬಿದವರೇ ಹೆಚ್ಚು. ಅಡಕೆ, ತೆಂಗು ಬೆಳೆಗಾರರು ಸಾಲದಲ್ಲಿ ಮುಳುಗಿದ್ದಾರೆ. ಉತ್ತರ ಭಾರತದಲ್ಲಿ ಕೋವಿಡ್ ತೀವ್ರವಾಗಿರುವುದರಿಂದ ಉಗುಳುವುದನ್ನೂ, ಗುಟ್ಕಾ ತಿನ್ನುವುದನ್ನು ನಿಷೇಧಿಸಿರುವುದರಿಂದ ಅಡಕೆಗೆ ದರ ಬರುವುದು ಸಂಶಯ. ತೆಂಗನ್ನು ಬಳಸಿ ಚಾಕಲೇಟ್, ಬಿಸ್ಕತ್ ತಯಾರಿಸುತ್ತಿದ್ದ ಕಂಪನಿಗಳು ಸ್ಥಗಿತವಾಗಿರುವಾಗ ತೆಂಗಿಗೆ ಸದ್ಯ ಬೇಡಿಕೆ ಬರುವ ಲಕ್ಷಣ ಇಲ್ಲ. ಗೋಕರ್ಣ, ಮುಡೇìಶ್ವರ ಪ್ರವಾಸಿ ಕೇಂದ್ರವಾಗಿ ಗುರುತಿಸಲ್ಪಟ್ಟಿತ್ತು. ಇಲ್ಲಿನ ಸಾವಿರಾರು ಜನ ಇದೇ ಆದಾಯವನ್ನು ನಂಬಿದ್ದರು. ಮಳೆಗಾಲದಲ್ಲಿ ಪ್ರವಾಸಿಗರು ಬರುವುದಿಲ್ಲ. ಹಳ್ಳಿ ಜನ ಕೃಷಿ ಕಾರ್ಯದಲ್ಲಿ ತೊಡಗುವುದರಿಂದ ಪೇಟೆಗೆ ಬರುವುದಿಲ್ಲ. ಈ ವರ್ಷ ಕೃಷಿ ಸಾಲ ಎಷ್ಟು ಸಿಗಲಿದೆ ಎಂಬುದು ಗೊತ್ತಿಲ್ಲ. ಜನರನ್ನು ಅವಲಂಬಿಸಿದ ರಿಕ್ಷಾ ಟೆಂಪೋ, ಗೂಡ್ಸ್ ರಿಕ್ಷಾ, ಮೊದಲಾದ ವಾಹನಗಳಿಗೆ ಮಳೆಗಾಲದಲ್ಲಿ ಹೆಚ್ಚು ಕೆಲಸ ಕಾಣುವುದಿಲ್ಲ. ಜಿಲ್ಲೆಯ ಬಹುಪಾಲು ದುಡಿಯುವ ಯುವ ಜನಾಂಗ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗಾ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅನ್ನ ಕಂಡುಕೊಂಡಿದೆ.
ಜಿಲ್ಲೆಯ ಪ್ರಮುಖ ಆದಾಯ ಮನಿಯಾರ್ಡರುಗಳಿಂದ ಅಥವಾ ಗಲ್ಫ್ ರಾಷ್ಟ್ರಗಳ ಮನಿ ಟ್ರಾನ್ಸ್ ಫರ್ ಗಳಿಂದ ಬರಬೇಕು. ಅಲ್ಲಿಯ ಸ್ಥಿತಿ ಏನಾಗಿದೆಯೋ ಗೊತ್ತಿಲ್ಲ. ಹಣ್ಣುಹಂಪಲು ಗಳು ನೆಲಕಚ್ಚಿವೆ. ಅಡಕೆ ವರ್ಷಕ್ಕೊಂದು ಬೆಳೆ. ಬೇಸಿಗೆಯ ತರಕಾರಿ ಹಾಳಾಯಿತು. ಮಳೆಗಾಲದ ತರಕಾರಿ ಬರಲು ಇನ್ನೂ ನಾಲ್ಕು ತಿಂಗಳು ಬರಬೇಕು. ಜಿಲ್ಲೆಯ ಶೇ.90 ರಷ್ಟು ಜನರಿಗೆ ನಿಶ್ಚಿತ ಆದಾಯವಿಲ್ಲ. ಮಳೆ ಬೆಳೆ ಸಾಮಾಜಿಕ ವಾತಾವರಣಗಳಿಂದ ಆದಾಯ ನಿರ್ಧರಿತವಾಗುತ್ತದೆ.
ಹೇಳಿಕೊಳ್ಳುವಂತಹ ಕೈಗಾರಿಕೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಕುಸಿದ ರೈತರನ್ನು, ಶ್ರಮಜೀವಿಗಳನ್ನು, ಕಾರ್ಮಿಕರನ್ನು ಮೇಲೆತ್ತಲು ನಿರ್ದಿಷ್ಟ ಯೋಜನೆ ರೂಪಿಸುವ ಅಗತ್ಯವಿದೆ. ಜಿಲ್ಲೆಯ ಆರ್ಥಿಕ ಸಂಪತ್ತನ್ನು ಅವಲಂಬಿಸಿ ಲೀಡ್ ಬ್ಯಾಂಕ್‌ಗಳು ಯೋಜನೆ ರೂಪಿಸುತ್ತವೆ. ಸಮಾಜದ ವಿವಿಧ ವರ್ಗಗಳಿಗೆ ಸಾಲದ ಕೋಟಾ ನಿಗದಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಯಾವ ಯಾವ ವಲಯಕ್ಕೆ ಆದ್ಯತೆ ನೀಡಬೇಕು, ಎಂತಹ ಯೋಜನೆ ಮಳೆಗಾಲದಲ್ಲಿ ಜನರನ್ನು ಸುರಕ್ಷಿತವಾಗಿ ದಾಟಿಸಿ ದಡ ಸೇರಿಸಬಲ್ಲದು ಎಂಬುದನ್ನು ನಿರ್ಧರಿಸಬೇಕಾಗಿದೆ.
ಆರ್ಥಿಕ ಯೋಜನೆಯನ್ನು ತಂದು ಜನಪ್ರತಿನಿಧಿಗಳು ಪ್ರಸಿದ್ಧಿ ಪಡೆಯಬೇಕಾಗಿದೆ. ಇದು ಸವಾಲು, ಈ ಸವಾಲನ್ನು ಜಿಲ್ಲೆಯ ಜನಪ್ರತಿನಿಧಿಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
–ಜೀಯು, ಹೊನ್ನಾವರ