Advertisement

ಮೋದಿ ಯೋಜನೆಗಳಿಂದ ದೇಶದಲ್ಲಿ ಆರ್ಥಿಕ ಸುರಕ್ಷೆ

11:29 AM Apr 16, 2019 | Team Udayavani |

ಪುತ್ತೂರು: ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಅಂತಾರಾಷ್ಟ್ರೀಯ ಸುರಕ್ಷತೆ ಮಾತ್ರವಲ್ಲ, ದೇಶದೊಳಗೆ ಆರ್ಥಿಕ ಸುರಕ್ಷತೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.

Advertisement

ಪುತ್ತೂರಿನಲ್ಲಿ ಸೋಮವಾರ ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌ ಪರ ಆಯೋಜಿಸಲಾದ ಬೃಹತ್‌ ಚಪಾದಯಾತ್ರೆ ಪ್ರಚಾರ ಜಾಥಾದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ದೇಶದ ವಿಕಾಸದ ಜತೆಗೆ ಎಲ್ಲರನ್ನೂ ಅಭಿವೃದ್ಧಿಯೆಡೆಗೆ ಕೊಂಡೊಯ್ಯವ ಕೆಲಸ ಮಾಡಿದ್ದಾರೆ. ಮಹಿಳೆಯರು, ಯುವಕರು, ಕೃಷಿಕರು, ಮೀನುಗಾರರು ಎಲ್ಲರ ಅಭಿವೃದ್ಧಿ ಚಿಂತನೆಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜನರಲ್ಲಿರುವ ಇನ್ನಷ್ಟು ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಿದೆ ಎಂದು ಹೇಳಿದರು.

ವ್ಯಾಪಾರ, ಕೃಷಿ ನೀತಿ
ವ್ಯಾಪಾರ ಸ್ಪರ್ಧಿ ಚೀನಾದಿಂದ ನಮ್ಮ ಆಮದು ಪ್ರಮಾಣವೇ ಹೆಚ್ಚಾಗಿತ್ತು. ನಮ್ಮಲ್ಲಿಂದ ನಿರ್ಯಾತ ಪ್ರಮಾಣ ಕಡಿಮೆಯಾಗಿತ್ತು. ವ್ಯಾಪಾರ ಸಾಂಪ್ರದಾಯಿಕವಾಗಿದ್ದರೂ, ಈ ಶಕ್ತಿಯನ್ನು ನಮ್ಮಲ್ಲೇ ಉಳಿಸಿಕೊಂಡು ದೇಶಕ್ಕೆ ಬೇಕಾದಂತೆ ಬಳಸಿಕೊಳ್ಳಲು ನಿರ್ಧರಿಸಿದ ಮೋದಿ ಸ್ಟಾರ್ಟ್‌ ಆ್ಯಪ್‌ನಂತಹ ಪ್ರೋತ್ಸಾಹಕ ಕ್ರಮಗಳನ್ನು ಅನುಸರಿಸಿದ್ದಾರೆ. ಕೃಷಿ ನಿರ್ಯಾತ ನೀತಿ ಆರಂಭಿಸಿದ್ದೇವೆ. 5 ವರ್ಷಗಳಲ್ಲಿ ನಮ್ಮ ಅಭಿವೃದ್ಧಿಯ ವೇಗ ಮತ್ತು ಶಕ್ತಿ ಹೆಚ್ಚಾಗಿದೆ ಎಂದು ಹೇಳಿದರು.

ಸಂದೇಹವೇ ಇಲ್ಲ
ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸಿದ ಬಳಿಕ ಈಗ ಯಾರಲ್ಲೂ ಸಂದೇಹ ಉಳಿದಿಲ್ಲ. ಎಷ್ಟು ದೊಡ್ಡ ಅಂತರದ ಗೆಲುವು ಬಿಜೆಪಿಗೆ ಸಿಗಲಿದೆ ಎನ್ನುವುದು ಮಾತ್ರ ಉಳಿದಿರುವ ಪ್ರಶ್ನೆ ಎಂದು ಹೇಳಿದ ಅವರು, ದೇಶದ ವಿಕಾಸಕ್ಕಾಗಿ ನಮ್ಮ ಕಡೆಯಿಂದ ಎಷ್ಟು ತಾಕತ್ತು ಎನ್ನುವುದನ್ನು ಮಾತ್ರ ಜನರು ನಿರ್ಧಾರ ಮಾಡಬೇಕಿದೆ ಎಂದರು.

ನಳಿನ್‌ ಕುಮಾರ್‌ ಅವರು ಆಗಾಗ್ಗ ಬಂದು ರೈಲ್ವೇ, ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಾರೆ. ಅಭಿವೃದ್ಧಿಯ ಜತೆಗೆ ಮೋದಿ ಕೈಜೋಡಿಸಲು ಜಿಲ್ಲೆಯ ಜನತೆ ಮತ್ತೂಮ್ಮೆ ನಳಿನ್‌ ಕುಮಾರ್‌ಗೆ ಬೆಂಬಲ ನೀಡಬೇಕು ಎಂದು ಸುರೇಶ್‌ ಪ್ರಭು ವಿನಂತಿಸಿದರು.

Advertisement

ಸಜ್ಜನಿಕೆಯ ರಾಜಕಾರಣದ ಹೆಮ್ಮೆ

ದ.ಕ. ಜಿಲ್ಲಾ ಲೋಕಸಭಾ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಭಾರತದ ರಕ್ಷಣೆಯ ಜತೆ ಉತ್ತಮ ಆಡಳಿತ ನೀಡುವುದಿದ್ದರೆ ಅದು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಈ ಕಾರಣದಿಂದಲೇ ಸೀಮಿತ ಅವಧಿಯಲ್ಲಿ ಜಗತ್ತಿನೆತ್ತರಕ್ಕೆ ಭಾರತ ಬೆಳೆದಿದೆ. ರಕ್ಷಣೆ, ಆಡಳಿತದ ಅಪರಿಮಿತ ಸಾಹಸಿಯಾಗಿ ನರೇಂದ್ರ ಮೋದಿ ಗುರುತಿಸಿಕೊಂಡಿದ್ದಾರೆ. ಅವರ ನೇತೃತ್ವದ ಸರಕಾರದಲ್ಲಿ ಸಜ್ಜನಿಕೆಯ ರಾಜಕಾರಣ ಮಾಡಿದ ಹೆಮ್ಮೆ ನನಗಿದೆ ಎಂದರು.

ಜಯಭೇರಿ ಖಚಿತ
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಶ್ಯಾಮ್‌ಪ್ರಸಾದ್‌ ಮುಖರ್ಜಿಯವರ ಕನಸನ್ನು ನನಸು ಮಾಡಲು ಮೋದಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ನಳಿನ್‌ ಕುಮಾರ್‌ ಕಟೀಲ್‌ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಖಚಿತವಾಗಿ ಜಯಭೇರಿ ಬಾರಿಸಲಿದ್ದಾರೆ ಎಂದರು.

ಕುಟುಂಬ ರಾಜಕಾರಣ ತೊಲಗಲಿ
ಮಾಜಿ ಶಾಸಕ ಮಲ್ಲಿಕಾ ಪ್ರಸಾದ್‌ ಮಾತನಾಡಿ, ಎಲ್ಲಿ ತನಕ ಕುಟುಂಬ ರಾಜಕಾರಣ ಇದೆಯೋ ಅಲ್ಲಿ ತನಕ ದೇಶದ ಉದ್ಧಾರ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ನಿರ್ನಾಮ ಮಾಡಬೇಕಾದ ಅಗತ್ಯವಿದೆ ಎಂದರು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ ಮಿಜಾರ್‌, ಜಿಲ್ಲಾ ಉಸ್ತುವಾರಿ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು. ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌ ವಂದಿಸಿದರು. ಪುಯಿಲ ಕೇಶವ ಗೌಡ ಹಾಗೂ ಗೌರಿ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next