Advertisement

ಪ್ರಧಾನಿ ಮೋದಿಯವರಿಂದ  ದೇಶದಲ್ಲಿ  ಆರ್ಥಿಕ ಕ್ರಾಂತಿ : ನಳಿನ್‌ 

07:25 AM Jul 31, 2017 | Team Udayavani |

ಬಂಟ್ವಾಳ: ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಧ್ಯೇಯದೊಂದಿಗೆ ಜನ್‌ಧನ್‌, ಒಂದು ದೇಶ ಒಂದು ತೆರಿಗೆ, ಪ್ರಧಾನಿ ಅವಾಜ್‌ ಯೋಜನೆ, ಉಜ್ವಲ ಯೋಜನೆ, ರೂಪೇ ಕಾರ್ಡ್‌, ನಗದುರಹಿತ ವ್ಯವಹಾರ  ಕಾರ್ಯಕ್ರಮಗಳ ಮೂಲಕ ದೇಶದಲ್ಲಿ ಆರ್ಥಿಕ ಕ್ರಾಂತಿಯ ಪರಿವರ್ತನೆ ತಂದಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದಲ್ಲಿ ಆರ್ಥಿಕ ಸಮೃದ್ಧಿಯ  ಜಾಗೃತಿ ಮೂಡಿಸಿದ್ದಾರೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು  ಬಾಳ್ತಿಲ ಗ್ರಾ.ಪಂ. ಸುವರ್ಣ ಸೌಧ ಸಭಾಂಗಣದಲ್ಲಿ  ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು, ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿ. ಕಲ್ಲಡ್ಕ,  ಬಾಳ್ತಿಲ ಗ್ರಾಮ ವ್ಯಾಪ್ತಿಯ ಸಂಘದ ಸದಸ್ಯರಿಗೆ ಮತ್ತು ಗ್ರಾಹಕರಿಗಾಗಿ ಹಮ್ಮಿಕೊಳ್ಳಲಾದ  ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ನಗದುರಹಿತ ವಹಿವಾಟಿನ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಮೂಲಕ ರಾಷ್ಟ್ರವು ಈ ವರ್ಷ ಆರ್ಥಿಕ ಕ್ರಾಂತಿಯತ್ತ ಮುಖ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳ ಮೂಲಕ ರಾಷ್ಟ್ರ ಭವ್ಯ ಭಾರತವಾಗಿ ಮೂಡಿಬರಲಿದೆ ಎಂದರು.

ಆರ್ಥಿಕ ಜಾಗೃತಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ ದ.ಕ.ಜಿಲ್ಲೆಯ 92 ಸಾವಿರ ಸಾಲಗಾರ ರೈತರಿಗೆ ಈಗಾಗಲೇ 72 ಸಾವಿರ ರೂಪೇ ಕಾರ್ಡ್‌ ವಿತರಿಸುವ ಮೂಲಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಎರಡು ವರ್ಷಗಳ ಹಿಂದೆಯೇ ನಗದು ರಹಿತ ವ್ಯವಹಾರಕ್ಕೆ ಚಾಲನೆ ನೀಡಿದೆ ಎಂದರು.

ಬಾಳ್ತಿಲ ಗ್ರಾಮವನ್ನು ಬ್ಯಾಂಕ್‌ ಮತ್ತು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಮೂಲಕ ದತ್ತು ಸ್ವೀಕರಿಸಿ ಇಲ್ಲಿನ ಕೃಷಿ ಸಾಲಗಾರ 900ಕ್ಕೂ ಅಧಿಕ ರೈತರಿಗೆ  ನಗದು ರಹಿತ ವಹಿವಾಟಿನ ಮಾಹಿತಿ ನೀಡುವ ಕಾರ್ಯಾಗಾರ ನಡೆಸುತ್ತಿರುವುದಾಗಿ ತಿಳಿಸಿದರು.

Advertisement

ರಾಜ್ಯ ಸರಕಾರ ಪ್ರಸ್ತುತ ಸಹಕಾರಿ ಸಂಸ್ಥೆಗೆ ನಗದು ರಹಿತ ವಹಿವಾಟಿಗಾಗಿ ಪ್ರಸ್‌ ಮೆಷಿನ್‌ ನೀಡುವ ಚಿಂತನೆ ನಡೆಸುತ್ತಿದೆ. ಆದರೆ ಇಡೀಯ ದೇಶದಲ್ಲಿ ಮೊತ್ತಮೊದಲ ಬಾರಿಗೆ ಸಹಕಾರಿ ರಂಗದ ಮೂಲಕ ಅದನ್ನು ಅನುಷ್ಠಾನಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ತಂದಿತ್ತು ಎಂಬುದನ್ನು ಸ್ಮರಿಸಿದರು.

ವಾಣಿಜ್ಯ ಬ್ಯಾಂಕ್‌ಗಳಿಗಿಂತ ಮೊದಲು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಹಿಳೆಯರಿಗೆ ನವೋದಯ ಸ್ವಸಹಾಯ ಸಂಘದ ಮೂಲಕ ಡಿಸಿಸಿ ಬ್ಯಾಂಕ್‌ ಪ್ರಾಧಾನ್ಯತೆ ನೀಡಿದ್ದು ಅವರಿಗೆ ಖಾತೆ ತೆರೆದು ವ್ಯವಹಾರ ನಡೆಸಲು ಅವಕಾಶ ಮಾಡಿಕೊಟ್ಟಿದೆ.  ರೈತರಿಗೆ ಕಿಸಾನ್‌ ರೂಪೇ ಕಾರ್ಡ್‌ ವಿತರಿಸಿ ದೇಶದ ಎಲ್ಲಿಯೇ ಆದರೂ ಹಣದ ವ್ಯವಹಾರಕ್ಕೆ ಅವಕಾಶ ಮಾಡಿದೆ ಎಂದು ತಿಳಿಸಿದರು.

ಸಾಲ ಮನ್ನಾ ಸೌಲಭ್ಯ 347 ಕೋಟಿ ರೂ.
ಅವಿಭಜಿತ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಯ ಮೂಲಕ ರೈತರಿಗೆ 347 ಕೋಟಿ ರೂ. ಸಾಲ ಗಳ ಮನ್ನಾ ಸೌಲಭ್ಯ ದೊರೆಯಲಿದೆ. ಅದರಲ್ಲಿ 67 ಕೋಟಿ ರೂ. ಸಾಲಕಟ್ಟಿದ ರೈತರಿದ್ದಾರೆ. ರಾಜ್ಯದಲ್ಲಿ ದ.ಕ. ಜಿಲ್ಲೆ ಸಕಾಲಿಕವಾಗಿ  ಸಾಲ ಮರುಪಾವತಿಸಿದ ಪ್ರಥಮ ಜಿಲ್ಲೆಯಾಗಿದೆ. ಬೆಳಗಾಂ ನಂತರದ ಸ್ಥಾನದಲ್ಲಿದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ರೈತರಿಗೂ ಸಾಲಮನ್ನಾ ಪ್ರಯೋಜನ ಸಿಗುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ ಎಂದರು.
ಗ್ರಾಮಾಂತರ ಮಟ್ಟದಲ್ಲಿ  ನಗದು ರಹಿತ ವಹಿವಾಟು ಜಾರಿಗೆ ತರಲು ವಾಣಿಜ್ಯ ಬ್ಯಾಂಕ್‌ಗಳಿಂದ ಸಾಧ್ಯವಿಲ್ಲ. ಅದು ಸಹಕಾರಿ ಸಂಸ್ಥೆಗಳಿಂದ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟರು.

ವೇದಿಕೆಯಿಂದ  ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ರಾಜಾರಾಮ ಭಟ್‌ ಟಿ.ಜಿ., ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಠಲ ನಾಯ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ, ಸ್ಕ್ಯಾಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ, ಬಾಳ್ತಿಲ ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ,  ಸಹಕಾರಿ ಸಂಘದ ನಿರ್ದೇಶಕರಾದ ಗೋಪಾಲಕೃಷ್ಣ ಭಟ್‌, ಪೂವಪ್ಪ ಗೌಡ, ಲೋಕಾನಂದ , ಗಿರಿಯಪ್ಪ ಗೌಡ, ಜಯರಾಮ ರೈ, ಕೊರಗಪ್ಪ ನಾಯ್ಕ, ಮೃಣಾಲಿನಿ ಸಿ. ನಾೖಕ್‌, ಮೀನಾಕ್ಷಿ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್‌ ಕೆ., ವಲಯ ಮೇಲ್ವಿಚಾರಕ ಕೇಶವ ಕಿಣಿ ಎಚ್‌. ಉಪಸ್ಥಿತರಿದ್ದರು.
ಸಭೆಯಲ್ಲಿ ಸಾಂಕೇತಿಕವಾಗಿ ರೂಪೇ ಕಾರ್ಡ್‌ ವಿತರಣೆಯನ್ನು ನಡೆಸಲಾಯಿತು.

ಜ್ಞಾನಜ್ಯೋತಿ ಟ್ರಸ್ಟ್‌ ಹಿರಿಯ ಸಮಾಲೋಚಕ ಜಯಂತ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ನಗದು ರಹಿತ ವಹಿವಾಟಿನ ಮಾಹಿತಿ ಶಿಬಿರ ನಡೆಸಿಕೊಟ್ಟರು.

ಕಲ್ಲಡ್ಕ ರೈ.ಸೇ.ಸ.ಸಂಘ ನಿ. ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಸುಧಾಕರ ರೈ ಪ್ರಸ್ತಾವನೆ ನೀಡಿದರು. ನಿರ್ದೇಶಕ ವೆಂಕಟ್ರಾಯ ಪ್ರಭು ವಂದಿಸಿದರು. ರಾಜೇಶ್‌ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next