ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಿಂದಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಮುಚ್ಚುವ ಹಂತಕ್ಕೆ ಬಂದು ನಿಂತಿದೆ.
ಇಂದಿರಾ ಕ್ಯಾಂಟೀನ್ ಯೋಜನೆಗೆ ರಾಜ್ಯ ಸರ ಕಾರ ದಿಂದ ಸೂಕ್ತ ಅನುದಾನ ದೊರೆಯದ ಕಾರಣ ಮುಂದುವರಿಸಲು ಸಾಧ್ಯವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈ ಚೆಲ್ಲಿದೆ. ಅದೇ ರೀತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿನ ಇಂದಿರಾ ಕ್ಯಾಂಟೀನ್‌ಗೂ ರಾಜ್ಯ ಸರಕಾರದಿಂದಲೇ ಹಣಕಾಸು ನೆರವು ನೀಡಲಾಗುತ್ತಿದ್ದು, ಅವು ಸಹ ಮುಚ್ಚುವ ಸಾಧ್ಯತೆ ಇದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ಹೀಗಾಗಿ ಯೋಜನೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಆದರೆ ಕಾಂಗ್ರೆಸ್ ನಾಯ ಕರು ಮಾತ್ರ ಇಂದಿರಾ ಕ್ಯಾಂಟೀನ್ ಮುಚ್ಚಿ ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
2017-18ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ನಲ್ಲೂ ಬಡವರಿಗೆ ಕಡಿಮೆ ದರದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಒದಗಿಸಲು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿದ್ದರು.
ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಿಗೆ 2018-19ರಲ್ಲಿ ಸರಕಾರ 115 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಆದ ಖರ್ಚು 145 ಕೋಟಿ ರೂ.! ಉಳಿದ 21.67 ಕೋಟಿ ರೂ. ಬಿಬಿಎಂಪಿಯೇ ಭರಿಸಿತ್ತು. ಸೆ. 1ರಿಂದ ಅನುದಾನ ದೊರೆಯ ದಿದ್ದರೆ ಅಧಿಕೃತವಾಗಿ ಸ್ಥಗಿತಗೊಳಿಸುವ ಅನಿವಾರ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೂ ಸಕಾಲದಲ್ಲಿ ಹಣ ಪಾವತಿಯಾಗದೆ ಸಂಕಷ್ಟದಲ್ಲಿದ್ದಾರೆ.
ಇಂದಿರಾ ಕ್ಯಾಂಟೀನ್ ಯೋಜನೆಗೆ ವಾರ್ಷಿಕ 211 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು.
ಹೆಸರು ಬದಲಾವಣೆ?
ಈ ಯೋಜನೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರು ಇಟ್ಟಿರುವುದರಿಂದ ಈಗಿನ ಬಿಜೆಪಿ ಸರಕಾರ ಹೆಸರು ಬದಲಿಸಲು ಚಿಂತನೆ ನಡೆಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಅನ್ನಪೂರ್ಣ ಎಂದು ಮರು ನಾಮಕರಣ ಮಾಡುವ ಕುರಿತು ಚರ್ಚೆ ಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸರಕಾರದಿಂದ ಯಾವುದೇ ಆದೇಶ ಹೊರಬಿದ್ದಿಲ್ಲ. ಇನ್ನೊಂದೆಡೆ ಕ್ಯಾಂಟೀನ್ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಂಕೆಯಿಂದ
ಯಡಿಯೂರಪ್ಪ ತನಿಖೆಗೆ ಆದೇಶಿಸಿದ್ದರು.