Advertisement
ಭಾರತ, ಬಾಂಗ್ಲಾದೇಶ, ಶ್ರೀಲಂಕ, ಪಾಕಿಸ್ಥಾನ ಈ ಮುಂತಾದ ದೇಶಗಳು ದಕ್ಷಿಣ ಏಷ್ಯಾದಲ್ಲಿ ಬರುತ್ತವೆ. ಈ ಪೈಕಿ 130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವೇ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಆರ್ಥಿಕ ಶಕ್ತಿ. 180 ಕೋಟಿ ಜನರು ದಕ್ಷಿಣ ಏಷ್ಯಾದಲ್ಲಿ ವಾಸವಾಗಿದ್ದಾರೆ ಮತ್ತು ಕೆಲವು ಅತಿ ಜನನಿಬಿಡ ನಗರಗಳು ಈ ದೇಶಗಳಲ್ಲಿವೆ. ಕೋವಿಡ್ ಪಶ್ಚಾತ್ ಪರಿಣಾಮ ಈ ದೇಶಗಳ ಮೇಲೆ ಹೆಚ್ಚಿರಲಿದೆ. ಪ್ರವಾಸೋದ್ಯಮ ಬಹುತೇಕ ನೆಲಕಚ್ಚಿದೆ. ಪೂರೈಕೆ ಸರಪಣಿ ಅಸ್ತವ್ಯಸ್ತಗೊಂಡಿದೆ. ಜವುಳಿ ಬೇಡಿಕೆ ಪಾತಾಳಕ್ಕಿಳಿದಿದೆ. ಬಳಕೆದಾರರ ಮತ್ತು ಹೂಡಿಕೆದಾರರ ವಿಶ್ವಾಸಾರ್ಹತೆ ಕುಸಿದಿದೆ. ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಈ ದೇಶಗಳಿಗೆ ದಶಕಗಳೇ ಬೇಕಾಗಬಹುದು. ಇದರ ಪರಿಣಾಮವಾಗಿ ಬಡತನ ಹೆಚ್ಚಲಿದೆ ಎನ್ನಲಾಗಿದೆ.
ದಕ್ಷಿಣ ಏಷ್ಯಾದ ಆರ್ಥಿಕ ಅಭಿವೃದ್ಧಿಯ ಮುಂಗಾಣ್ಕೆಯನ್ನು ವಿಶ್ವಬ್ಯಾಂಕ್ ಪರಿಷ್ಕರಿಸಿದೆ. ಶೇ. 2.8 ಇದ್ದ ಅಭಿವೃದ್ಧಿ ಮುಂಗಾಣ್ಕೆ ದರ ಶೇ. 1.8ಕೆ ಕುಸಿದಿದೆ. ವೈರಸ್ ಹಾವಳಿಗಿಂತ ಮುಂಚೆ ವಿಶ್ವಬ್ಯಾಂಕ್ ದಕ್ಷಿಣ ಏಷ್ಯಾ ಶೇ. 6.3 ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಅಂದಾಜಿಸಿತ್ತು. ಸಣ್ಣ ದ್ವೀಪಗಳ ಗುಚ್ಚವಾಗಿರುವ ಮಾಲ್ದೀವ್ಸ್‌ನ ಆರ್ಥಿಕತೆ ಇನ್ನಿಲ್ಲದಂತೆ ನೆಲಕಚ್ಚಲಿದೆ. ಪ್ರವಾಸೋದ್ಯಮ ಈ ದೇಶದ ಪ್ರಮುಖ ಆದಾಯ ಮೂಲ. ಈಗ ಪ್ರವಾಸೋದ್ಯಮ ಬಹುತೇಕ ಸ್ತಬ್ಧಗೊಂಡಿದ್ದು, ಅಲ್ಲಿಯ ಆರ್ಥಿಕತೆ ಶೇ. 13ರಷ್ಟು ಕುಸಿತ ಕಾಣಲಿದೆ ಎಂದು ಅಂದಾಜಿಸಿದೆ. ಭಾರತದ ಅಭಿವೃದ್ಧಿ ದರ ಹಾಲಿ ಹಣಕಾಸು ವರ್ಷದಲ್ಲಿ ಶೇ.5ರಿಂದ ಶೇ.1.3ಕ್ಕಿಳಿಯಲಿದೆ.