Advertisement

ಆರ್ಥಿಕ ಚಟುವಟಿಕೆ ಚೇತರಿಕೆಯ ಅಗತ್ಯ

10:46 AM Sep 22, 2017 | |

2016-17ನೇ ಸಾಲಿನಲ್ಲಿ ಶೇ.7.1 ಇದ್ದ ಜಿಡಿಪಿ ದರ ಈಗ ಶೇ.5.7ಕ್ಕೆ ಇಳಿದಿರುವುದು ಸರಕಾರವನ್ನು ಚಿಂತೆಗೀಡು ಮಾಡಿದೆ. ಮೋದಿ ಪ್ರಧಾನಿಯಾದ ಬಳಿಕ ದಾಖಲಾಗಿರುವ ಅತ್ಯಂತ ಕನಿಷ್ಠ ಜಿಡಿಪಿ ಅಭಿವೃದ್ಧಿ ದರವಿದು. ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ಆರ್ಥಿಕತೆ ಎಂಬ ಹಿರಿಮೆಗೆ ಪಾತ್ರವಾಗಿದ್ದ ಭಾರತ ಈಗ ಅತ್ಯಂತ ವೇಗವಾಗಿ ಕುಸಿಯುತ್ತಿರುವ ಆರ್ಥಿಕತೆ ಎಂಬ ಕಳಂಕ ಹೊತ್ತುಕೊಳ್ಳಬೇಕಾದ ಪರಿಸ್ಥಿತಿಗೆ ಹಲವಾರು ಕಾರಣಗಳಿದ್ದರೂ ಪ್ರಧಾನವಾಗಿ ಕಾಣಿಸುವುದು ಕಳೆದ ವರ್ಷ ಕೈಗೊಂಡ ನೋಟು ರದ್ದು ನಿರ್ಧಾರ ಮತ್ತು ಅನಂತರ ಜಾರಿಯಾಗಿರುವ ಜಿಎಸ್‌ಟಿ ತೆರಿಗೆ ಪದ್ಧತಿ. ಸರಕಾರವನ್ನು ಹಣಿಯಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ವಿಪಕ್ಷಗಳಿಗೆ ಜಿಡಿಪಿ ಕುಸಿತ ಅತ್ಯುತ್ತಮ ಅಸ್ತ್ರ ಒದಗಿಸಿದೆ. ಮೋದಿಯ ಆರ್ಥಿಕ ನೀತಿಗಳಿಂದಾಗಿ ದೇಶ ದಿವಾಳಿಯಾಗುತ್ತಿದೆ ಎಂಬರ್ಥದಲ್ಲಿ ಟೀಕೆಗಳು ಕೇಳಿ ಬರುತ್ತಿವೆ. ಸರಕಾರ ಎಷ್ಟೇ ಸಮರ್ಥಿಸಿಕೊಂಡರೂ ಕೆಲ ಸಮಯದಿಂದ ಜಿಡಿಪಿ ಕುಸಿಯುತ್ತಿದೆ ಎನ್ನುವುದನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಸಂಶೋಧನಾ ವರದಿ ಖಚಿತಪಡಿಸಿದೆ. ಸರಕಾರದ್ದೇ ಅಂಗವಾಗಿರುವ ಬ್ಯಾಂಕ್‌ ಈ ಮಾತು ಹೇಳಿರುವುದರಿಂದ ಜಿಡಿಪಿ ಕುಸಿತ ಹಾಗೂ ಅದರ ಪರಿಣಾಮವಾಗಿ ಆರ್ಥಿಕ ಚಟುವಟಿಕೆಗಳು ಮಂದವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳದೆ ಗತ್ಯಂತರವಿಲ್ಲ. ನೋಟು ರದ್ದು ಮತ್ತು ಜಿಎಸ್‌ಟಿ ಕ್ರಾಂತಿಕಾರಕ ನಿರ್ಧಾರಗಳೇ ಆಗಿದ್ದರೂ ಅವುಗಳನ್ನು ಜಾರಿಗೊಳಿಸುವಾಗ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿತ್ತೆಂದು ಸರಕಾರಕ್ಕೆ ಅರಿವಾಗಿರಬಹುದು. ಅದರಲ್ಲೂ ನೋಟು ರದ್ದು ಮಾಡಿದ ಪರಿಣಾಮದ ಬಿಸಿ ಆರುವ ಮೊದಲೇ ಜಿಎಸ್‌ಟಿ ಜಾರಿಗೆ ಬಂದಿರುವುದರಿಂದ ಕೆಳ ಸ್ತರ ಮತ್ತು ಮಧ್ಯದ ಸ್ತರದ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. 

Advertisement

ಆರ್ಥಿಕ ಅಭಿವೃದ್ಧಿಯ ಪ್ರೇರಕ ಅಂಶಗಳಾಗಿರುವ ಬಂಡವಾಳ ಹೂಡಿಕೆ, ರಫ್ತು ವಹಿವಾಟು, ಗ್ರಾಹಕರ ಖರೀದಿ ಸಾಮರ್ಥ್ಯ ಕುಸಿದಿರುವುದರಿಂದ ಸಹಜವಾಗಿ ಆರ್ಥಿಕತೆಯ ಅಭಿವೃದ್ಧಿ ನಿಧಾನಗೊಂಡಿದೆ. ನಿರ್ಮಾಣ ಮತ್ತು ಚಿಲ್ಲರೆ ವ್ಯಾಪಾರವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿರುವುದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ತಟ್ಟಿದೆ. ಕೈಯಲ್ಲಿ ಹಣ ಓಡಾಡದಿರುವುದರಿಂದ ಖರೀದಿ ಸಾಮರ್ಥ್ಯ ಕುಂಠಿತವಾಗಿದ್ದು, ಇದು ಉಳಿದೆಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಿದೆ. ಸ್ಟೇಟ್‌ ಬ್ಯಾಂಕ್‌ ವರದಿ ಪ್ರಕಾರ ಖರೀದಿ ಸಾಮರ್ಥ್ಯ ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಗ್ರಾಮೀಣ ಭಾಗಗಳೂ ಇದರಿಂದ ಹೊರತಾಗಿಲ್ಲ ಎನ್ನುವುದು ಹೆಚ್ಚು ಕಳವಳಕಾರಿಯಾಗಿರುವ ವಿಷಯ. ಕೃಷಿ ಉತ್ಪನ್ನಗಳ ಬೆಲೆ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗದ ಆರ್ಥಿಕ ಚಟುವಟಿಕೆಗಳು ಮಂದವಾಗಿದೆ. ಹಾಗೆಂದು ಜಿಡಿಪಿ ಕುಸಿತ ತತ್‌ಕ್ಷಣದ ವಿದ್ಯಮಾನ ಅಲ್ಲ. 2016ರಿಂದಲೇ ಕುಸಿತ ಮೊದಲ್ಗೊಂಡಿತ್ತು ಎನ್ನುವುದನ್ನು ವರದಿ ಬೆಟ್ಟು ಮಾಡಿ ತೋರಿಸಿದೆ. ಜಿಡಿಪಿ ಕುಸಿತ ತಾತ್ಕಾಲಿಕ ವಿದ್ಯಮಾನ ಎನ್ನುತ್ತಿದ್ದ ಸರಕಾರದ ವಾದ ಪೊಳ್ಳು ಎನ್ನುವುದು ಇದರಿಂದ ಸಾಬೀತಾಗುತ್ತದೆ. ಇದೀಗ ಸರಕಾರಕ್ಕೆ ಆರ್ಥಿಕ ಚಟುವಟಿಕೆ ಕುಸಿತದ ಬಿಸಿ ತಟ್ಟಿರುವಂತೆ ಕಾಣಿಸುತ್ತಿದ್ದು, ಆರ್ಥಿಕತೆಯ ಚೇತರಿಕೆಗಾಗಿ ವಿಶೇಷ ತಂಡವೊಂದನ್ನು ರಚಿಸಲು ಮುಂದಾಗಿರುವುದು ಸಕಾಲಿಕ ಕ್ರಮ.  ನೋಟು ರದ್ದತಿ ಪರಿಣಾಮಗಳನ್ನು ಊಹಿಸುವಲ್ಲಿ ಸರಕಾರದ ಲೆಕ್ಕಾಚಾರ ತಪ್ಪಾಗಿದೆ ಎನ್ನುವುದು ಈಗ ಅರಿವಾಗುತ್ತದೆ. ನಗದು ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ದಿಢೀರ್‌ ಎಂದು ನೋಟುಗಳು ಕೈಗೆ ಸಿಗದಂತೆ ಮಾಡಿದಾಗ ಜಿಡಿಪಿಯ ಬೆಳವಣಿಗೆಯ ಮೇಲೆ ಶೇ.2ರಷ್ಟು ಪರಿಣಾಮವಾಗಲಿದೆ ಎಂಬ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಕುಸಿತವನ್ನು ತುಸು ಮಟ್ಟಿಗಾದರೂ ತಡೆಯಬಹುದಿತ್ತು. ಹಾಗೆಂದು ಸರಕಾರ ಈಗ ತೀರಾ ಅಸಹಾಯಕ ಪರಿಸ್ಥಿತಿಯಲ್ಲಿದೆ ಎಂದು ಭಾವಿಸಿದರೆ ತಪ್ಪಾಗಬಹುದು. ಅಭಿವೃದ್ಧಿ ದರ ಕುಂಠಿತಗೊಂಡಿದ್ದರೂ ಕಂದಾಯ ಸಂಗ್ರಹ ಹಿಂದೆಗಿಂತಲೂ ಹೆಚ್ಚಾಗಿದೆ. ಜಿಎಸ್‌ಟಿ ಬಳಿಕ ತೆರಿಗೆ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಮತ್ತು ಕಚ್ಚಾತೈಲ ಬೆಲೆ ಇಳಿದಿರುವ ಪರಿಣಾಮವಾಗಿ ಇಂಧನದ ಮೂಲಕ ಸಾಕಷ್ಟು ಹಣ ಹರಿದು ಬರುತ್ತಿರುವುದರಿಂದ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಆರ್ಥಿಕ ಸಂಪನ್ಮೂಲ ಇದೆ. ಆರ್ಥಿಕತೆಯನ್ನು ಹೆಚ್ಚಿಸುವ ಸಲುವಾಗಿ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಹೆಚ್ಚು ಮಾಡಲು ನಿರ್ಧರಿಸಿರುವುದು ಈ ಸಂಪನ್ಮೂಲದ ಭರವಸೆಯಿಂದಲೇ. ಇದರಿಂದ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರುವ ಸಾಧ್ಯತೆಯಿದೆ. ಬಂಡವಾಳ ಹಿಂದೆಗೆತದಂತಹ ನಿರ್ಧಾರಗಳನ್ನು ತ್ವರಿತಗೊಳಿಸಿದರೆ ಈ ಬಿಕ್ಕಟ್ಟಿನಿಂದ ಪಾರಾಗಬಹುದು. ಆದರೆ ಇವೆಲ್ಲ ದೀರ್ಘ‌ಕಾಲೀನ ಪರಿಹಾರಗಳು. ಸದ್ಯಕ್ಕೆ ಜಿಡಿಪಿ ದರ ಹೆಚ್ಚಾಗುವಂತೆ ಮಾಡಲು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದೊಂದೇ ಮಾರ್ಗ. ಇದಾಗಬೇಕಾದರೆ ಉದ್ಯೋಗಸೃಷ್ಟಿಯಂತಹ ಪರಿಹಾರಗಳತ್ತ ಗಮನಹರಿಸುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next