ಧಾರವಾಡ: ಇತ್ತೀಚಿನ ದಿನಗಳಲ್ಲಿ ಕೃಷಿಗೆ ಉಪಯೋಗಿಸುತ್ತಿರುವ ಉಪಕರಣಗಳು ಬೃಹತ್ ಪ್ರಮಾಣ, ದುಬಾರಿ ವೆಚ್ಚ ಹಾಗೂ ರೈತರಿಗೆ ಪರಾವಲಂಬಿಯಾಗಿವೆ ಎಂದು ಡಾ| ಸಂಜೀವ ಕುಲಕರ್ಣಿ ಹೇಳಿದರು. ನೇಚರ್ ರಿಸರ್ಚ್ ಸೆಂಟರ್, ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್‌ನಲ್ಲಿ ಹಮ್ಮಿಕೊಂಡಿದ್ದ “ರೈತ ಸ್ನೇಹಿ ಬೆಳೆ ಕಟಾವು ಯಂತ್ರದ ಪ್ರಾತ್ಯಕ್ಷಿತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕೃಷಿ ಉಪಕರಣಗಳು ಇಂಧನದ ಬಳಕೆಯ ಮೇಲೆಯೇ ಅವಲಂಬಿತವಾಗಿವೆ. ಹೀಗಾಗಿ ಒಬ್ಬ ಬಡವ, ಚಿಕ್ಕ ಪ್ರಮಾಣದ ಕೃಷಿ ಮಾಡುವ ರೈತರಿಗೆ ಆಧುನಿಕ ಉಪಕರಣಗಳು ಉಪಯೋಗಿಸಲು ಸೂಕ್ತವಾಗದೆ, ರೈತನ ಜೀವನ ಸಂಕಷ್ಟದಲ್ಲಿ ಸಿಲುಕಿದೆ. ಚಿಕ್ಕ, ಸ್ವಾವಲಂಬಿ ಹಾಗೂ ಪರಿಸರ ಸ್ನೇಹಿ ರೈತೋಪಕರಣಗಳು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದರು.
ಉಪಕರಣದ ಶೋಧಕ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಯುವ ಪ್ರಗತಿಪರ ರೈತ ಅನಂತ ಚತುರ್ವೇದಿ ಮಾತನಾಡಿ, ತಮ್ಮ ಉಪಕರಣವು ಗೋದಿ, ಜೋಳ, ಭತ್ತ, ಹುಲ್ಲು ಹೀಗೆ ಕಬ್ಬನ್ನು ಹೊರತುಪಡಿಸಿ ಎಲ್ಲ ತರಹದ ಬೆಳೆಗಳನ್ನು ಕಟಾವು ಮಾಡುವ ಕಾರ್ಯ ಕ್ಷಮತೆಯನ್ನು ಹೊಂದಿದೆ.
ಇದು ಸಂಪೂರ್ಣ ಸ್ವಾವಲಂಬಿಯಾಗಿದ್ದು, ಇದರ ಉಪಕರಣವನ್ನು ಹರಿತಗೊಳಿಸಲು ಬೇಕಾದ ಎಲ್ಲ ಪರ-ಉಪಕರಣಗಳನ್ನು ಈ ವ್ಯವಸ್ಥೆಯಲ್ಲಿಯೇ ನೀಡಲಾಗುತ್ತದೆ ಎಂದು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು. ರೈತರೂ ಸಹಿತ ಉಪಕರಣವನ್ನು ಪ್ರಯೋಗಿಸಿ ಅದರ ಗುಣಮಟ್ಟ ಪರೀಕ್ಷಿಸಿದರು.
ನೇಚರ್ ರಿಸರ್ಚ್ ಸೆಂಟರ್ ಕಾರ್ಯದರ್ಶಿ ಪ್ರಕಾಶ ಗೌಡರ ಮಾತನಾಡಿ, ಮುಂದಿನ ದಿನಗಳಲ್ಲಿಯೂ ಸಹಿತ ಇಂತಹ ರೈತ ಸ್ನೇಹಿ ಉಪಕರಣಗಳನ್ನು ತಮ್ಮ ಸಂಸ್ಥೆ ವತಿಯಿಂದ ಪರಿಚಯಸಲಾಗುವುದು ಎಂದರು.
ಪ್ರಾತ್ಯಕ್ಷಿತೆಯಲ್ಲಿ ಡಾ|ಪ್ರಕಾಶ ಭಟ್, ನೇಚರ್ ರಿಸರ್ಚ್ ಸೆಂಟರ್‌ನ ಚಂದ್ರಶೇಖರ ಬೈರಪ್ಪನವರ, ಡಾ| ವೀರನಗೌಡರ, ಕುಮಾರ ಭಾಗವತ, ಸಂಜೀವ ಕಟ್ಟಿ, ಸುರೇಶಬಾಬು ಹಾಗೂ ಹಳ್ಳಿಗೇರಿ ಸುತ್ತಮುತ್ತಲಿನ ರೈತರು ಇದ್ದರು. ಜಯಶ್ರೀ ಪಾಟೀಲ ಪ್ರಾರ್ಥಿಸಿದರು. ಅನಿಲ ಅಳ್ಳೊಳ್ಳಿ ನಿರೂಪಿಸಿ, ವಂದಿಸಿದರು.