Advertisement

ಪರಿಸರದ ಪಾಠ, ಚಟುವಟಿಕೆ: ಮಕ್ಕಳಿಂದ ಶಾಲಾ ವಠಾರದಲ್ಲಿ ಸಸಿಗಳ ಆರೈಕೆ

03:00 AM May 19, 2018 | Team Udayavani |

ಬೆಳ್ತಂಗಡಿ : ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ, ಪರಿಸರದ ಪಾಠವನ್ನು ತಿಳಿಸಲಾಗುತ್ತಿದೆ. ಇಕೋ ಕ್ಲಬ್‌ ಮೂಲಕ ಮಕ್ಕಳೇ ಶಾಲಾ ವಠಾರದಲ್ಲಿರುವ  ಸಸಿಗಳ ಆರೈಕೆಯಲ್ಲಿ ತೊಡಗಿದ್ದು, ಈ ಬಾರಿ ಶಾಲೆ ಸರಕಾರದಿಂದ ನೀಡುವ ಪರಿಸರ ಮಿತ್ರ ಹಳದಿ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ. ಶಾಲಾ ವಠಾರದಲ್ಲಿ ವಿವಿಧ ಆಯುರ್ವೇದಿಕ್‌ ಗಿಡಗಳು, ಹಣ್ಣಿನ ಗಿಡಗಳು ಇವೆ. ಇಕೋ ಕ್ಲಬ್‌ನಲ್ಲಿರುವ ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ತರಗತಿ ಮುಗಿದ ಬಳಿಕ ತಾವೇ ನೀರನ್ನು ಎರೆದು ಪೋಷಣೆ ಕಾರ್ಯ ಮಾಡುತ್ತಿದ್ದಾರೆ. ಮಕ್ಕಳ ಆಸಕ್ತಿ ದಿನ ದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುತ್ತಾರೆ ಶಿಕ್ಷಕರು.

Advertisement

ಸೀಡ್‌ ಬಾಲ್‌ ಪೆನ್‌


ಮಕ್ಕಳು ರಜಾ ಅವಧಿಯಲ್ಲಿ ಸೀಡ್‌ಬಾಲ್‌ ಮಾಡುವ ವಿಧಾನ ಕಲಿತಿದ್ದಾರೆ. ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತ್‌ ಗೆ 300ಕ್ಕಿಂತಲೂ ಹೆಚ್ಚು ಸೀಡ್‌ಬಾಲ್‌ ಮಾಡಿ ನೀಡಿದ್ದಾರೆ. ಪ್ರತಿಯಾಗಿ ಗ್ರಾಮ ಪಂಚಾಯತ್‌ ಸಸಿಗಳನ್ನು ನೀಡಿದೆ. ಶಾಲೆಯಲ್ಲಿ ಸೀಡ್‌ ಪೆನ್‌ ಗಳನ್ನೂ ಮಕ್ಕಳು ರಚಿಸಿದ್ದಾರೆ. ಪೇಪರ್‌ ಸುತ್ತಿ ಪೆನ್‌ ಮಾಡುತ್ತಾರೆ. ರಿಫಿಲ್‌ ಮಾತ್ರ ಹೆಚ್ಚುವರಿಯಾಗಿ ಬಳಕೆ ಮಾಡಲಾಗುತ್ತದೆ. ಪೆನ್‌ ನಲ್ಲಿ ವಿವಿಧ ಸಸ್ಯಗಳ, ಗಿಡಗಳ ಬೀಜಗಳನ್ನು ಹಾಕಲಾಗುತ್ತದೆ. ಶಾಯಿ ಮುಗಿದ ಬಳಿಕ ಪೆನ್‌ ಎಸೆಯಲಾಗುತ್ತದೆ. ಈ ವೇಳೆ ಪೆನ್‌ ಹಣ್ಣು ನೀಡುವ ಗಿಡ, ಮರವಾಗಿ ಬದಲಾಗುತ್ತದೆ.

ಗಿಡಗಳೇ ಹೀರುತ್ತವೆ ನೀರು
ಶಾಲೆ ಆವರಣದಲ್ಲಿ ವಿವಿಧ ರೀತಿಗಳ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಮುಖ್ಯ ವಾಗಿ ಆಯುರ್ವೇದಿಕ್‌ ಗಿಡಗಳನ್ನು ಬೆಳೆಯಲಾಗಿದೆ. ಈ ಬಾರಿಯ ಬೇಸಗೆ ಶಿಬಿರದಲ್ಲಿ ಗಿಡಗಳೇ ನೀರು ಹೀರುವ ಮಾದರಿಯನ್ನು ಮಕ್ಕಳಿಗೆ ಪರಿಚಯಿಸಲಾಗಿದ್ದು, ಮಕ್ಕಳು ಮಾಡಿದ್ದಾರೆ. ಪ್ಲಾಸ್ಟಿಕ್‌ ಬಾಟಲ್‌ಗ‌ಳನ್ನು ಬಳಸಿ, ಮುಚ್ಚಳಕ್ಕೆ ದಾರದಿಂದ ಕಟ್ಟಿ ಗಿಡಕ್ಕೆ ನೀರು ಲಭ್ಯವಾಗುವಂತೆ ಈ ಮಾದರಿ
ಯನ್ನು ಮಾಡಲಾಗಿದೆ. ಆಲಂಕಾರಿಕ ಗಿಡಗಳಿಗೆ ಬಳಸಲು ಸಹಾಯಕವಾಗುವಂತೆ ರೂಪಿಸಲಾಗಿದೆ.


ಕಂಪೋಸ್ಟ್‌ ಮಾಹಿತಿ

ಮಕ್ಕಳಿಗೆ ಶಾಲೆಯಲ್ಲಿ ಕಾಂಪೋಸ್ಟ್‌ ಕುರಿತೂ ಮಾಹಿತಿ ನೀಡಲಾಗುತ್ತಿದೆ. ಇಲ್ಲಿ ಕೊಳವೆ ಕಾಂಫೋಸ್ಟ್‌ ವಿಧಾನವನ್ನು ಮಕ್ಕಳಿಗೆ ಪರಿಚಯಿಸಲಾಗಿದೆ. ಕೊಳೆಯುವ ತ್ಯಾಜ್ಯಗಳನ್ನು ಹಾಕಿ ಗೊಬ್ಬರ ತಯಾರಿ ವಿಧಾನ ತಿಳಿಸಲಾಗುತ್ತಿದೆ.

ಮಕ್ಕಳಿಂದ ಭತ್ತದ ಬೆಳೆ
ಶಾಲೆಯಲ್ಲಿ ಪ್ರತ್ಯೇಕವಾಗಿ ಬದು ನಿರ್ಮಿಸಿ ಮಕ್ಕಳಿಗೆ ಭತ್ತದ ಬೆಳೆಯನ್ನು ಪರಿಚಯಿಸುವ ಸಲುವಾಗಿ ಗದ್ದೆ ಮಾಡಲಾಗಿದೆ. ಇಲ್ಲಿ ಮಕ್ಕಳೇ ಗದ್ದೆಯಲ್ಲಿ ಬಿತ್ತನೆ ಮಾಡಿ ಹಿರಿಯರ ಸೂಚನೆಯಂತೆ ಬೆಳೆಸಿ, ಆರೈಕೆ ಮಾಡಿ, ಕೊಯ್ಲನ್ನೂ ಮಾಡಿದ್ದಾರೆ. ಈಗಾಗಲೇ 2 ಬಾರಿ ನೇಜಿ ನೆಟ್ಟಿದ್ದು, ಸುಮಾರು 13 ಕೆ.ಜಿ.ಯಷ್ಟು ಅಕ್ಕಿ ದೊರೆತಿದೆ. ಇದನ್ನು ಮಕ್ಕಳಿಗೆ ಪಾಯಸ ಮಾಡಿ ಕೊಡಲಾಗಿದೆ. ಈ ಮೂಲಕ ತಾವೇ ಬೆಳೆದು ಪಾಯಸ ಸವಿದಿದ್ದಾರೆ. ಮಳೆ ಮುಗಿದ ಬಳಿಕ ಈ ಸಣ್ಣ ಗದ್ದೆಯಲ್ಲಿ ಮಕ್ಕಳಿಗೆ ಬೇಕಾದ ತರಕಾರಿ ಬೆಳೆಯಲಾಗುತ್ತದೆ.

Advertisement


ಮಕ್ಕಳಿಗೆ ಬೆಳೆಯ ಅರಿವು ಶಾಲೆಯಲ್ಲಿ ಪರಿಸರದ 

ವಿಚಾರಗಳ ಬಗ್ಗೆ ಮಕ್ಕಳಿಗೆ ತಿಳಿಸುತ್ತಿರುವುದು ಉತ್ತಮ. ಇಂದಿನ ಮಕ್ಕಳಿಗೆ ಅಕ್ಕಿ ಹೇಗೆ ಬರುತ್ತದೆ, ಅದನ್ನು ಉತ್ಪಾದಿಸಲು ಎಷ್ಟು ಶ್ರಮವಿರುತ್ತದೆ ಎಂಬ ಅರಿವು ಮೂಡುತ್ತದೆ. ಜತೆಗೆ ಬೆಳೆಯುವ ವಿಧಾನದ ಅರಿವೂ ಆಗುತ್ತದೆ.
-ಶಿವಾನಂದ ಮಯ್ಯ, ಹೆತ್ತವರು

ವಿವಿಧ ಚಟುವಟಿಕೆ
ಶಾಲೆಯಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ತಿಳಿಸುವ ಉದ್ದೇಶದಿಂದ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ. ಇದಕ್ಕೆ ಸುಪ್ರಿಯಾ ಹಷೇìಂದ್ರ ಕುಮಾರ್‌ ಉತ್ತಮ ಸಲಹೆ ನೀಡುತ್ತಿದ್ದಾರೆ. ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರು ನೀಡುತ್ತಿರುವ ಸಲಹೆಗಳೂ ಹೊಸದನ್ನು ಮಕ್ಕಳಿಗೆ ತಿಳಿಸಲು ಸಹಕಾರಿಯಾಗುತ್ತಿದೆ.
– ಪರಿಮಳಾ, ಮುಖ್ಯ ಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next