ಬನಹಟ್ಟಿ: ಗಣೇಶೋತ್ಸವಕ್ಕೆ ರಬಕವಿ- ಬನಹಟ್ಟಿಯಲ್ಲಿ ಜೇಡಿಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆ ಕಾರ್ಯಭರದಿಂದ ಸಾಗಿದೆ. ಕಲಾವಿದರು ಮೂರ್ತಿಗಳ ತಯಾರಿಕೆಯಲ್ಲಿ ತಲ್ಲೀನರಾಗಿ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.
ಬದಲಾದ ಕಾಲಕ್ಕೆ ಅನುಗುಣವಾಗಿ ಕಳೆದ ಐದಾರು ವರ್ಷಗಳಿಂದ ಪ್ಲಾಸ್ಟರ ಆಫ್ ಪ್ಯಾರಿಸ್‌ನಿಂದ ತಯಾರಿಸಲಾದ ಮೂರ್ತಿ ತಯಾರಿಸಲಾಗುತ್ತಿತ್ತು. ಅದರಲ್ಲಿ ಕೆಲವರು ಪಿಒಪಿ ಮತ್ತು ಜೇಡಿಮಣ್ಣಿನ ಗಣಪತಿ ಪೂಜಿಸುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ರಾಜ್ಯ ಸರಕಾರ ಮಣ್ಣಿನ ಗಣಪತಿ ಮೂರ್ತಿ ತಯಾರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಬಕವಿಯ ಚವ್ಹಾಣ ಎಂಬುವವರ ಕುಟುಂಬ ಶತಮಾನಗಳಿಗಿಂತಲೂ ಹೆಚ್ಚು ಕಾಲ ಗಣೇಶ ವಿಗ್ರಹಗಳನ್ನು ಮಾಡುತ್ತಿದೆ. ಚವಾಣ ಕುಟುಂಬದವರಿಗೆ ಸಾಕಷ್ಟು ಬೇಡಿಕೆ ಬಂದಿದೆ. ಕಾರಣ ಇವರು ಮೊದಲಿನಿಂದಲೂ ಮಣ್ಣಿನ ಗಣೇಶ ವಿಗ್ರಹಗಳನ್ನು ಮಾಡುತ್ತಾ ಬಂದಿರುವುದು ವಿಶೇಷ.
ಗ್ರಾಹಕರಿಗೆ ಹೊರೆ ಆದರೂ ಪರಿಸರ ಸ್ನೇಹಿ ಗಣಪ ಮಾತ್ರ ಮಾರಾಟವಾಗುತ್ತಿರುವುದು ಸಂತಸದ ವಿಷಯವಾಗಿದೆ. ಪಿಒಪಿ ಗಣಪತಿಗಿಂತ ಮಣ್ಣಿನ ಗಣಪತಿಗಳು ತುಸು ಭಾರವಾದರೂ ಕೂಡಾ ಆಕರ್ಷಿಣಿಯವಾಗಿಸುವ ಸಲುವಾಗಿ ಇಲ್ಲಿನ ಕುಟುಂಬದವರು ಮುತ್ತು ಹಾಗೂ ವಿಶೇಷವಾದ ವಸ್ತುಗಳಿಂದ ಸಿಂಗರಿಸಿ ಆಕರ್ಷಣಿಯವಾಗಿ ಕಾಣುವಂತೆ ಮಾಡಿದ್ದಾರೆ.
ಈ ಬಾರಿ ಐದು ನೂರಕ್ಕೂ ಹೆಚ್ಚು ವಿಗ್ರಹಗಳನ್ನು ಮಾಡಿದ್ದೇವೆ. ಇನ್ನೂ ಬೇಡಿಕೆ ಸಾಕಷ್ಟು ಇದೆ. ಆದರೆ ಮಣ್ಣಿನ ಮೂರ್ತಿಗಳನ್ನು ಕೈಯಿಂದ ಮಾಡಬೇಕಾದರೆ ಬಹಳಷ್ಟು ಸಮಯಬೇಕಾಗುತ್ತದೆ. ಅದರಲ್ಲೂ ತಾಳ್ಮೆ ಮುಖ್ಯವಾಗಿದೆ. ರಾಸಾಯನಿಕ ಬಣ್ಣ ಬಳಸದೆ, ಕೇವಲ ನೈಸರ್ಗಿಕ ನೀರಿನಲ್ಲಿ ಕರಗುವ ಬಣ್ಣಗಳನ್ನು ಬಳಸುತ್ತೇವೆ. ಅಲ್ಲದೇ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿದ್ದು, ಪರಿಸರ ಸ್ನೇಹಿ ಗಣೇಶನಿಗೆ ಮತ್ತೊಮ್ಮೆ ಬಾರಿ ಬೇಡಿಕೆ ಬಂದಿದೆ ಎನ್ನುತ್ತಾರೆ ಮೂರ್ತಿ ತಯಾರಕ ಅಮರ ಚವಾಣ.