Advertisement

ಪರಿಸರ ಸ್ನೇಹಿ ಗಣಿಗಾರಿಕೆ ಅಗತ್ಯ: ಸಹಾ

05:24 PM Dec 17, 2018 | |

ಚಿತ್ರದುರ್ಗ: ಗಣಿಗಾರಿಕೆ ಪ್ರದೇಶದ ಒಳಗೆ ಮತ್ತು ಗಣಿಗಾರಿಕೆ ನಡೆಯುತ್ತಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟ
ಮಾಡುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗಣಿ ಸುರಕ್ಷತಾ ಇಲಾಖೆಯ ಉಪ ಪ್ರಧಾನ ನಿರ್ದೇಶಕ ಉತ್ಪಾಲ್‌ ಸಹಾ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಗಣಿ ಸುರಕ್ಷತಾ ಸಂಘ ಹಾಗೂ ಮಿನರಲ್‌ ಎಂಟರ್‌ಪ್ರೈಸಸ್‌ ಸಹಯೋಗದಲ್ಲಿ
ಭಾನುವಾರ ಆಯೋಜಿಸಿದ್ದ ಮೂರನೇ ವಲಯ ಮಟ್ಟದ ಗಣಿ ಸುರಕ್ಷಾ ಸಪ್ತಾಹದ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಹುತೇಕ ಗಣಿ ಕಂಪನಿಗಳು ಬ್ಲಾಸ್ಟಿಂಗ್‌ ಮಾಡುವಾಗ ಮತ್ತು ಡ್ರಿಲ್‌ ಕೊರೆಯುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಅನಾನುಭವಿಗಳು ಬ್ಲಾಸ್ಟಿಂಗ್‌ ಮಾಡುತ್ತಿರುತ್ತಾರೆ ಎಂದು ಆಕ್ಷೇಪಿಸಿದರು.

ನೈಸರ್ಗಿಕ ಖನಿಜ ಸಂಪನ್ಮೂಲ ಅಭಿವೃದ್ಧಿ ಕಾಯ್ದೆ ಜಾರಿಗೆ ಬಂದ ನಂತರ ಅಕ್ರಮಕ್ಕೆ ಕಡಿವಾಣ ಬಿದ್ದಿದೆ. 2015 ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳನ್ನು ಉಲ್ಲಂಘಿಸದೆ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಗಣಿಗಾರಿಕೆ ಮಾಡಬೇಕು ಎಂದರು.

ವೈಜ್ಞಾನಿಕವಾಗಿ ಮಾಡುವ ಸುಸ್ಥಿರ ಗಣಿಗಾರಿಕೆಯು ಉತ್ಪಾದನೆ, ಮೂಲ ಸೌಕರ್ಯವನ್ನು ಅವಲಂಬಿಸಿದೆ. ಸ್ವಾತಂತ್ರ್ಯಾ ನಂತರದಿಂದ ಸುಸ್ಥಿರ ಗಣಿಗಾರಿಕೆಗೆ ಸಂಬಂಧಿಸಿದಂತೆ ಸೂಕ್ತ ನಿಯಮಗಳನ್ನು ರೂಪಿಸಿರಲಿಲ್ಲ. ಗಣಿಗಾರಿಕೆ ಗೊತ್ತಿಲ್ಲದವರು ಲಾಭವನ್ನೇ ಮಾನದಂಡವನ್ನಾಗಿ ಮಾಡಿಕೊಂಡು ಬೇಕಾಬಿಟ್ಟಿ ಗಣಿಗಾರಿಕೆ ಮಾಡಿದರು. ಗಣಿಗಾರಿಕೆ ನಡೆಯುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ಲಾಸ್ಟಿಂಗ್‌ನಿಂದ ತೊಂದರೆಯಾಗುತ್ತಿದ್ದರೆ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬಹುದು ಎಂದು ತಿಳಿಸಿದರು.

ಪ್ರತಿಯೊಂದು ಗಣಿಗಾರಿಕೆಯಲ್ಲಿ ಸ್ವಯಂ ಸುರಕ್ಷತೆಯ ತಂತ್ರ ಜೀವನದ ಮಂತ್ರವಾಗಬೇಕು. ಗಣಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಅವಶ್ಯಕವಾದ ಸುರಕ್ಷಾ ಸಲಕರಣೆಗಳನ್ನು ಗಣಿ ಸಂಸ್ಥೆಗಳು ಪೂರೈಸಬೇಕು. ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಗಣಿ ವ್ಯವಸ್ಥಾಪಕ ಸೇರಿದಂತೆ ಗಣಿಗಾರಿಕೆಯ ಕೆಲಸದಲ್ಲಿ ತೊಡಗಿರುವ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

Advertisement

ಬೆಂಗಳೂರು ಪ್ರಾದೇಶಿಕ ಗಣಿ ಸುರಕ್ಷತಾ ಮಹಾನಿರ್ದೇಶಕ ಜಿ. ವಿಜಯಕುಮಾರ್‌ ಮಾತನಾಡಿ, ಪ್ರಕೃತಿಗೆ ವಿರುದ್ಧವಾಗಿ ಕಾನೂನು ಉಲ್ಲಂಘಿಸಿ ಗಣಿಗಾರಿಕೆ ಮಾಡಬಾರದು. ಗಣಿಗಾರಿಕೆ ಪ್ರದೇಶದ ಸುತ್ತಲಿನ ನಿವಾಸಿಗಳಿಗೆ ಸಮಸ್ಯೆ ಆಗದಂತೆ ಕಂಪನಿಗಳು ಎಚ್ಚರ ವಹಿಸಬೇಕು. ವಾಮಮಾರ್ಗ ಅನುಸರಿದರೆ ಕಂಟಕ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ಗಣಿ ಸುರಕ್ಷಾ ಸಂಘದ ಅಧ್ಯಕ್ಷ ವಾಸು ಗೌಡ, ಕರ್ನಾಟಕ ವಲಯದ ಗೌರವ ಕಾರ್ಯದರ್ಶಿ ಧನಂಜಯ ಜೆ. ರೆಡ್ಡಿ,
ಕಾರ್ಯನಿರ್ವಾಹಕ ನಿದೇಶಕ ಡಾ| ಮೇದಾ ವೆಂಕಟಯ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next