ದಾವಣಗೆರೆ: ಪ್ರಸ್ತುತ ತ್ಯಾಜ್ಯಗಳ ಬಳಸಿ ಬಟ್ಟೆಗಳ ತಯಾರಿಕೆ, ಪರಿಸರ ಸ್ನೇಹಿ ಆವಿಷ್ಕಾರ ಅಗತ್ಯವಾಗಿದೆ ಎಂದು ಬೆಂಗಳೂರಿನ ಶಾಹಿ ಎಕ್ಸ್‌ಪೋರ್ಟ್ ವ್ಯವಸ್ಥಾಪಕಿ ಶಾಗುಪ್ತಾ ಪರ್ವೀನ್ ತಿಳಿಸಿದ್ದಾರೆ.
ಶುಕ್ರವಾರ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಜವಳಿ ವಿಭಾಗದಿಂದ ಏರ್ಪಡಿಸಿರುವ ಟೆಕ್ಸ್‌ಕ್ರಿಯೇಟಿವ್ ಹಾಗೂ 19ನೇ ರಾಷ್ಟ್ರ ಮಟ್ಟದ ಟೆಕ್ಸ್‌ಎಕ್ಸ್‌ಫೋ ಉದ್ಘಾಟಿಸಿ ಮಾತನಾಡಿದ ಅವರು, ವಾರ್ಷಿಕ 250 ಬಿಲಿಯನ್ ಡಾಲರ್‌ಗಳಷ್ಟು ಜಾಗತಿಕ ಮಾರುಕಟ್ಟೆಯೊಂದಿಗೆ 45
ಮಿಲಿಯನ್ ಜನರಿಗೆ ಉದ್ಯೋಗ ನೀಡುವ ಜವಳಿ ಉದ್ಯಮದ ಬಗ್ಗೆ ವ್ಯಾಸಂಗ ಅವಧಿಯಲ್ಲೇ ಮಾಹಿತಿ ಪಡೆಯಬೇಕು. ಹೆಚ್ಚಿನ ಪ್ರಾಯೋಗಿಕ ಮಾಹಿತಿಗೆ ಇಂತಹ ವಾದಾನುವಾದ ಅವಶ್ಯಕ ಎಂದರು. ಬೆಂಗಳೂರಿನ ಸಾರಾ ಅಪರೆಲ್ಸ್‌ನ ಜನರಲ್ ಮ್ಯಾನೇಜರ್ ರೇವತಿ ರಮಣ ಮಾತನಾಡಿ, ಜವಳಿ ವಿಭಾಗದ ವಿದ್ಯಾರ್ಥಿಗಳು ಉದ್ಯೋಗ ಪಡೆಯುವಂತೆ ಹೊಸ ಆವಿಷ್ಕಾರಗಳನ್ನೂ ಜವಳಿ ಉದ್ಯಮಕ್ಕೆ ನೀಡಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳಾಡಿದ ಜವಳಿ ವಿಭಾಗದ ಮುಖ್ಯಸ್ಥ ಡಾ| ಕೆ. ಮುರುಗೇಶ್‌ಬಾಬು, ಅಡಕೆ ಸಿಪ್ಪೆಯಿಂದ ಬಟ್ಟೆ ತಯಾರಿಕೆಯಂತಹ ಅನೇಕ ಆವಿಷ್ಕಾರದ ಕೀರ್ತಿ ಜವಳಿ ವಿಭಾಗಕ್ಕೆ ಇದೆ. ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ದಲ್ಲಿ 15ಕ್ಕೂ ಹೆಚ್ಚು ಪ್ರಬಂಧ ಮಂಡನೆಯಾಗಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಶುಂಪಾಲ ಡಾ| ಎಂ.ಸಿ. ನಟರಾಜ್ ಮಾತನಾಡಿ, ಕ್ರಿಯಾಶೀಲ ಚಿಂತನೆಗಳು ಇಲ್ಲದೆ ರಚನಾತ್ಮಕತೆ ಸಾಧ್ಯ ಇಲ್ಲ ಎಂದು ತಿಳಿಸಿದರು. ಜವಳಿ ವಿಭಾಗದ ಡಾ| ರಮೇಶ್, ಡಾ| ರವೀಂದ್ರ, ಡಾ| ದಿನೇಶ್, ಡಾ| ಚಂದ್ರಶೇಖರ್ ಇತರರು ಇದ್ದರು. ದೀಪಿಕಾ ಪ್ರಾರ್ಥಿಸಿದರು. ರಮ್ಯಾ ಸ್ವಾಗತಿಸಿದರು. ಸಫಾಖಾನ್ ವಂದಿಸಿದರು.