ರಬಕವಿ-ಬನಹಟ್ಟಿ: ರಬಕವಿಯ ಈಶ್ವರ ಸಣಕಲ್ ರಸ್ತೆಗೆ ಹೊಂದಿಕೊಂಡಂತೆ ಚವ್ಹಾಣ ಎಂಬುವವರ ಕುಟುಂಬ ಇದ್ದು, ಇವರ ಮುಖ್ಯ ಉದ್ಯೋಗ ಗಣೇಶ ವಿಗ್ರಹಗಳನ್ನು ಮಾಡುವುದು. ಒಂದು ಶತಮಾನಗಳಿಗಿಂತಲೂ ಹೆಚ್ಚು ಕಾಲ ಗಣೇಶ ವಿಗ್ರಹಗಳನ್ನು ಮಾಡುತ್ತಾ ಉಪ ಜೀವನ ನಡೆಸಿಕೊಂಡು ಬರುತ್ತಿದ್ದಾರೆ.
ಮುತ್ತಜ್ಜ ರಾಮಚಂದ್ರ, ಅವರ ಮಗ ಜ್ಞಾನೇಶ್ವರ ಮತ್ತು ಅವರ ಹೆಂಡತಿ ಕಮಲವ್ವ ಹಾಗೂ ಅವರ ನಂತರ ಅವರ ಮಗ ವಿಠ್ಠಲ ಗಣೇಶನ ವಿಗ್ರಹಗಳನ್ನು ಮಾಡುತ್ತಿದ್ದರು. ವಿಠ್ಠಲ ನಿಧನದ ನಂತರ ಅವರ ಪತ್ನಿ ವೀಣಾ ತಮ್ಮಿಬ್ಬರು ಮಕ್ಕಳಾದ ಅಮರ ಮತ್ತು ಸಾಗರ ಅವರನ್ನು ಕರೆದುಕೊಂಡು ತಲೆ ತಲಾಂತರದಿಂದ ಬಳುವಳಿಯಾಗಿ ಬಂದ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಅದರಲ್ಲೂ ಈ ಮನೆತನದವರು ಮಣ್ಣಿನ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾಡುತ್ತ ಬಂದಿರುವುದು ವಿಶೇಷ ಸಂಗತಿಯಾಗಿದೆ. ಇವರು ಒಂದು ಶತಮಾನದಿಂದ ವಿಗ್ರಹಗಳ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ವೀಣಾ ಚವಾಣ ಎರಡೂವರೆ ದಶಕಗಳಿಂದ ಗಣೇಶ ವಿಗ್ರಹಗಳನ್ನು ಮಾಡುತ್ತ ಬಂದಿದ್ದಾರೆ. ಎರಡು ವರ್ಷ ಕೋವಿಡ್ ಕಾರಣದಿಂದಾಗಿ ಗಣೇಶ ವಿಗ್ರಹಗಳಿಗೆ ಅಷ್ಟಾಗಿ ಬೇಡಿಕೆ ಇದ್ದಿರಲಿಲ್ಲ. ಈ ಬಾರಿ ಅಂದಾಜು 300 ಕ್ಕೂ ಹೆಚ್ಚಿನ ವಿಗ್ರಹಗಳನ್ನು ತಯಾರು ಮಾಡಿದ್ದೇವೆ. ಎಲ್ಲವೂಗಳು ಕೂಡಾ ಮಣ್ಣಿನ ವಿಗ್ರಹಗಳೆ ಆಗಿವೆ. ಅರ್ಧ ಅಡಿಯಿಂದ ನಾಲ್ಕು ಅಡಿಯವರೆಗಿನ ಗಣೇಶ ವಿಗ್ರಹಗಳನ್ನು ಮಾಡಲಾಗಿದೆ. ಒಂದು ಅಡಿಯ ಗಣೇಶನ ವಿಗ್ರಹದ ದರ ರೂ. 1500 ರಿಂದ 1800 ಮಾರಾಟ ಮಾಡಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಶಾಸ್ತ್ರ ಬದ್ಧವಾಗಿ ಮೂರ್ತಿಗಳನ್ನು ತಯಾರಿಸುತ್ತೇವೆ ಎನ್ನುತ್ತಾರೆ ರಾಹುಲ ಮತ್ತು ಸಾಗರ ಚವಾಣ.
ಇನ್ನೂ ಗಣೇಶನ ಮೂರ್ತಿಗಳ ಜೊತೆಗೆ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಕಾಮಣ್ಣನ ವಿಗ್ರಹಗಳು ಮಾಡುತ್ತಾರೆ. ಅದೇ ರೀತಿಯಾಗಿ ದೇವಸ್ಥಾನದ ಮುಂಭಾಗದಲ್ಲಿ ವಿಗ್ರಹಗಳನ್ನು ಮಾಡುವ ಕಲೆಯನ್ನು ಹೊಂದಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಗಣೇಶ ವಿಗ್ರಹಗಳನ್ನು ಮಾಡುವುದು ಸುಲಭ. ಆದರೆ ಮಣ್ಣಿನ ವಿಗ್ರಹಗಳನ್ನು ಮಾಡುವುದು ಸ್ವಲ್ಪ ಕಷ್ಟ. ಅದರಲ್ಲಿ ತಾಳ್ಮೆ ಮುಖ್ಯವಾಗಿದೆ. ಇನ್ನೂ ಯಾವುದೆ ರಾಸಾಯನಿಕ ಬಣ್ಣಗಳನ್ನು ಬಳಸದೆ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸುತ್ತಿದ್ದಾರೆ.
ಈ ಭಾಗದ ಗಣೇಶ ವಿಗ್ರಹಗಳ ಮಾರಾಟಗಾರರು ಗೋಕಾಕದ ಕೊಣ್ಣೂರು, ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಹಾಗೂ ಇನ್ನೀತರ ಪ್ರದೇಶಗಳಿಂದ ವಿಗ್ರಹಗಳನ್ನು ಕೊಂಡು ತಂದು ಮಾರಾಟ ಮಾಡಿದರೆ ಇವರು ರಬಕವಿಯಲ್ಲಿದ್ದುಕೊಂಡು ತಾವೇ ತಯಾರಿಸಿ ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ.
ತಾಯಿ ವೀಣಾ ತಮ್ಮಿಬ್ಬರು ಮಕ್ಕಳ ಜೊತೆಗೂಡಿ ಸಂಸಾರವನ್ನು ನಡೆಸುತ್ತ, ವಿಗ್ರಹಗಳನ್ನು ತಯಾರು ಮಾಡುವುದರ ಮೂಲಕ ತಮ್ಮ ಉಪ ಜೀವನ ನಡೆಸುತ್ತಿದ್ದಾರೆ. ಜೂನ್ ಅಂತ್ಯಕ್ಕೆ ಗಣೇಶ ವಿಗ್ರಹಗಳನ್ನು ಮಾಡಿದ ನಂತರ ಗಣೇಶೋತ್ಸವ ಸಮೀಪಿಸುತ್ತಿದ್ದಂತೆ ಅವುಗಳಿಗ ಬಣ್ಣಗಳನ್ನು ನೀಡುತ್ತೇವೆ ಎನ್ನುತ್ತಾರೆ ಅಮರ ಚವಾಣ.
ಐವತ್ತು ವರ್ಷಗಳಗಿಂತೆ ಹೆಚ್ಚು ಕಾಲ ನಾವು ಚವಾಣ ಮನೆತನದವರು ನಿರ್ಮಾಣ ಮಾಡಿದ ಗಣೇಶ ವಿಗ್ರಹಗಳನ್ನು ತೆಗೆದುಕೊಂಡು ಹೋಗಿ ಪೂಜಿಸುತ್ತಿದ್ದೇವೆ ಎನ್ನುತ್ತಾರೆ ರಬಕವಿಯ ಸಂಜಯ ತೆಗ್ಗಿ.
–ಕಿರಣ ಶ್ರೀಶೈಲ ಆಳಗಿ