50 ವರ್ಷಗಳಿಂದ ಗಣಪತಿ ವಿಗ್ರಹ ರಚಿಸುತ್ತಿರುವ ಶಿರೂರು ಮೇಸ್ತ ಕುಟುಂಬ :
ಬೈಂದೂರು: ಶಿರೂರಿನ ಮೇಸ್ತ ಕುಟುಂಬದವರು ಕಳೆದ 50 ವರ್ಷಗಳಿಂದ ಗಣಪತಿ ವಿಗ್ರಹ ರಚಿಸುತ್ತಿದ್ದಾರೆ.
ಪ್ರತೀ ವರ್ಷ ಸುಮಾರು 60 ಗಣಪತಿ ವಿಗ್ರಹ ನಿರ್ಮಿಸಲಾಗುತ್ತದೆ. ತಲೆತಲಾಂತರ ದಿಂದ ನಡೆಸಿಕೊಂಡು ಬರುತ್ತಿರುವ ಈ ಕಾಯಕವನ್ನು ಪ್ರಸ್ತುತ ನಾಗರಾಜ ಮೇಸ್ತ ಕಳೆದ 15 ವರ್ಷಗಳಿಂದ ಮುಂದುವರಿಸಿಕೊಂಡು ಬರು ತ್ತಿದ್ದಾರೆ. ಇಡಗುಂಜಿ ಗಣಪತಿ, ಗೌರಿ ಗಣೇಶ ಇವರ ವಿಶೇಷ ಮೂರ್ತಿಗಳಾಗಿವೆ. ಶಿರೂರು, ದೊಂಬೆ, ಅಳ್ವೆಗದ್ದೆ, ಆಲಂದೂರು, ಗೋರ್ಟೆ ಮುಂತಾದ ಊರುಗಳಿಗೆ ಇವರು ರಚಿಸಿದ ಗಣೇಶನನ್ನು ಕೊಂಡ್ಯೊಯ್ಯಲಾಗುತ್ತದೆ.
ಶಿರಸಿಯ ಆಮ್ನಹಳ್ಳಿಯಿಂದ ಜೇಡಿ ಮಣ್ಣನ್ನು ತರಲಾಗುತ್ತದೆ. ಎರಡು ತಿಂಗಳುಗಳಿಂದ ವಿಗ್ರಹ ರಚನೆ ಕಾರ್ಯ ದಲ್ಲಿ ತೊಡಗಿಸಿಕೊಳ್ಳುತ್ತೇವೆ. ಸಹೋದರ ಆನಂದ ಮೇಸ್ತ ಸಹಕಾರ ನೀಡುತ್ತಿದ್ದಾರೆ. ಅತ್ಯಂತ ತಾಳ್ಮೆ ಮತ್ತು ಸಂಯಮ ಬೇಕಾಗುತ್ತದೆ ಎನ್ನುವುದು ನಾಗರಾಜ ಮೇಸ್ತ ಅವರ ಅಭಿಪ್ರಾಯವಾಗಿದೆ.
ಸಾಮಾನ್ಯವಾಗಿ ಹಿರಿಯ ತಲೆಮಾರುಗಳ ನಡುವೆ ಯುವ ಪೀಳಿಗೆ ಇದನ್ನು ಮೈಗೂಡಿಸಿ ಕೊಳ್ಳುವುದು ಕಡಿಮೆ. ಅಂತಹದರಲ್ಲಿ ಶಿರೂರಿನ ನಾಗರಾಜ ಮೇಸ್ತ ಅತ್ಯಂತ ಆಸಕ್ತಿಯಿಂದ ವಿಗ್ರಹ ರಚನೆ ಮಾಡುತ್ತಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ.
ನೈಸರ್ಗಿಕ ವಸ್ತುಗಳಿಂದ ವಿಗ್ರಹ ರಚಿಸುವ ಚಂದ್ರಶೇಖರ್ ನಾಯಕ್ :
ತೆಕ್ಕಟ್ಟೆ: ಗ್ರಾಮೀಣ ಭಾಗದಲ್ಲಿ ಕಳೆದ 25 ವರ್ಷಗಳಿಂದಲೂ ನೈಸರ್ಗಿಕವಾದ ವಸ್ತುಗಳನ್ನೇ ಬಳಸಿ ಗಣಪತಿ ವಿಗ್ರಹ ರಚನೆಯಲ್ಲಿ ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿ ಚಂದ್ರಶೇಖರ್ ನಾಯಕ್ ತೊಡಗಿಸಿಕೊಂಡಿದ್ದಾರೆ.
ಸಾಂಪ್ರದಾಯಿಕ ವಿಗ್ರಹ ರಚನೆಗೆ ಆವೆ ಮಣ್ಣು, ರಾಸಾಯನಿಕ ಮುಕ್ತ ಬಣ್ಣಗಳ ಬಳಕೆಯೊಂದಿಗೆ ಈರುಳ್ಳಿ ಚೀಲಗಳಿಗೆ ಆವೆ ಮಣ್ಣು ಲೇಪಿಸಿ ಅತ್ಯಂತ ಹಗುರವಾದ ವಿಗ್ರಹ ರಚನೆ ವಿಗ್ರಹ ಸಿದ್ಧಗೊಂಡಿರು ವುದು ಕೂಡ ವಿಶೇಷ. ಸುಮಾರು ಎರಡುವರೆ ಕೆ.ಜಿ. ಭಾರ ಹೊಂದಿದ ವಿಗ್ರಹಗಳು ಅತ್ಯಂತ ಸುರಕ್ಷಿತವಾಗಿ ಕೊಂಡೊಯ್ಯಬಲ್ಲದ್ದಾಗಿದ್ದು, ಈ ವಿಗ್ರಹವನ್ನು ಕುಡಿಯುವ ನೀರಿನ ಬಾವಿಯಲ್ಲಿಯೂ ಕೂಡ ವಿಸರ್ಜನೆ ಮಾಡಬಹುದಾಗಿದೆ.
ಈ ಬಾರಿ ಆಚರಣೆಯ ಗೊಂದಲದಿಂದಾಗಿ ಗಣಪತಿ ಇರಿಸುವ ಮಂಚ ಬರಲು ವಿಳಂಬವಾದ ಪರಿಣಾಮ ಹಗಲು ರಾತ್ರಿ ವಿಗ್ರಹ ರಚನೆಯಲ್ಲಿ ತೊಡಗಿಸಿ ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಬಾರಿ 23 ಸಾರ್ವಜನಿಕ ಗಣೇಶೋತ್ಸವ ಸಮಿತಿ ವಿಗ್ರಹ ರಚನೆ ಸೇರಿದಂತೆ ಒಟ್ಟು 79 ವಿಗ್ರಹಗಳನ್ನು ರಚಿಸಲಾಗಿದ್ದು, ಮಂಗಳೂರು, ಉಡುಪಿ, ಕುಂದಾಪುರ, ಮೊದಲಾದೆಡೆಗೆ ವಿಗ್ರಹ ಕೊಂಡೊಯ್ಯುತ್ತಿದ್ದಾರೆ ಎಂದು ಚಂದ್ರಶೇಖರ್ ಹೇಳುತ್ತಾರೆ.
ಪರಿಸರ ಪ್ರೇಮಿ ಗಣಪತಿ ತಯಾರಕ ಗಣೇಶ್ ನಾಯಕ್ :
ಅಜೆಕಾರು: ಕಳೆದ 41 ವರ್ಷಗಳಿಂದ ಪರಿಸರ ಪ್ರೇಮಿ ಗಣಪತಿ ತಯಾರಿಸುತ್ತಿರುವ ಎಣ್ಣೆಹೊಳೆ ಪ್ರೇಮಾನಂದ ನಾಯಕ್ ಅವರು ಜನರ ಬಾಯಲ್ಲಿ ಗಣೇಶ್ ನಾಯಕ್ ಎಂದು ಪ್ರಸಿದ್ಧಿ ಪಡೆದಿದ್ದಾರೆ.
ಕಾರ್ಕಳ, ಕುಂದಾಪುರ, ಬೆಳ್ತಂಗಡಿ ತಾಲೂಕಿನ ಹಲವಾರು ಗಣೇಶೋತ್ಸವಗಳಲ್ಲಿ ಇವರು ತಯಾರಿಸಿದ ಗಣಪತಿಯನ್ನೇ ಪೂಜಿಸಲಾಗುತ್ತಿದೆ.
ಕಳೆದ 41 ವರ್ಷಗಳಿಂದ ಪರಿಸರಸ್ನೇಹಿ ಗಣಪತಿ ಪೂಜಿಸುವವರು ಇವರನ್ನು ಪ್ರೀತಿಯಿಂದ ಗಣೇಶ್ ನಾಯಕ್ ಎಂದು ಕರೆಯಲಾಗುತ್ತದೆ.
ಪ್ರತೀ ವರ್ಷ ಸುಮಾರು 226 ಗಣಪತಿ ವಿಗ್ರಹ ತಯಾರಿಸುವ ಇವರು ಇದರಲ್ಲಿ 62 ಸಾರ್ವಜನಿಕ ಗಣಪತಿಯನ್ನು ತಯಾರಿಸುತ್ತಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಗಣಪತಿ ವಿಗ್ರಹ ತಯಾರು ಮಾಡುವ ಹೆಗ್ಗಳಿಕೆ ಇವರದ್ದಾಗಿದೆ. ಪ್ರಸ್ತುತ ಎಣ್ಣೆಹೊಳೆ, ಕಾರ್ಕಳ ಎರಡು ಕಡೆ ಗಣಪತಿ ತಯಾರಿಸುತ್ತಾರೆ.
ಇವರ ಜತೆ ಸುದರ್ಶನ್ ಗುಡಿಗಾರ್, ಈರಣ್ಣ ಹಾಗೂ ಗಾಯತ್ರಿ ಅವರು ಸಹಕರಿಸುತ್ತಾರೆ. ಸಂಪೂರ್ಣ ಆವೆಮಣ್ಣಿನಿಂದ ತಯಾರಿಸಿ, ನೀರಿನಲ್ಲಿ ಕರಗುವ ಬಣ್ಣವನ್ನಷ್ಟೆ ವಿಗ್ರಹಕ್ಕೆ ಹಾಕುವುದರಿಂದ ಇವರು ತಯಾರಿಸುವ ಗಣಪತಿ ವಿಗ್ರಹಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗಿದೆ.