Advertisement

ದೀಪಾವಳಿ ಸಂಭ್ರಮಕ್ಕೆ ಪರಿಸರ ಸ್ನೇಹಿ ಪಟಾಕಿ ಸಾಥ್‌

07:45 AM Oct 23, 2019 | Suhan S |

ಬೆಂಗಳೂರು: ದೀಪಾವಳಿ ಎಂದರೆ ಈ ಮೊದಲು ಪಟಾಕಿ, ಪರಿಸರ ಮಾಲಿನ್ಯ, ಕಣ್ಣು ಕಳೆದುಕೊಳ್ಳುವ ಕೆಲವರಿಗೆ ಕರಾಳ ನೆನಪು. ಆದರೆ, ಈ ಸಲ ಸಂಭ್ರಮಾಚರಣೆ ತುಸು ಭಿನ್ನವಾಗಲಿದೆ. ಯಾಕೆಂದರೆ, ಇದೇ ಮೊದಲ ಬಾರಿ ನಗರದಲ್ಲಿ “ಪರಿಸರ ಸ್ನೇಹಿ’ ಪಟಾಕಿಗಳು ಸದ್ದು ಮಾಡಲಿವೆ.

Advertisement

ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಪಟಾಕಿಗೆಬೇಡಿಕೆ ಹೆಚ್ಚಾಗುತ್ತಿರುವುದರಿಂದ ಮಾರುಕಟ್ಟೆ  ಯಲ್ಲೂ ಹಸಿರು ಮತ್ತು ನೀಲಿ ಬಣ್ಣದ ಪರಿಸರ ಸ್ನೇಹಿ ಪಟಾಕಿಗಳ ಮಾರಾಟ ಭರಾಟೆ ಜೋರಾಗಿದೆ. ಪರಿಸರಕ್ಕೆ ಮಾರಕವಾಗುವ ಪಟಾಕಿಗಳ ಮಾರಾಟದ ಮೇಲೆ ಸುಪ್ರೀಂ ಕೋರ್ಟ್‌ ನಿಷೇಧಹೇರಿದ ನಂತರದಲ್ಲಿ ತಯಾರಿಕೆಯೂ ಚುರುಕುಗೊಂಡಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಈ ಹೊಸ ಮಾದರಿಯ ಪಟಾಕಿಗಳು ಲಭ್ಯವಾಗಲಿವೆ.

ಪಟಾಕಿ ತಯಾರಿಕೆ ರಾಜಧಾನಿ ತಮಿಳು  ನಾಡಿನ ಶಿವಕಾಶಿಯಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಭಾರಿ ಅಗ್ನಿ ಅವಘಡ ಮತ್ತು ಕಳೆದ ವರ್ಷ ಸುಪ್ರೀಂಕೋರ್ಟ್‌ ಅಪಾಯಕಾರಿ ಅಂಶವಿರುವ ಪಟಾಕಿಗಳ ಮೇಲೆ ಹೇರಿದ್ದ ನಿಷೇಧ ಸೇರಿದಂತೆ ವಿವಿಧ ಕಾರಣಗಳಿಂದ ಸಾಮಾನ್ಯ ಪಟಾಕಿಗಳ ಸದ್ದು ಅಡಗಿದೆ. ಶಿವಕಾಶಿಯಲ್ಲಿ ಪ್ರತಿ ವರ್ಷವೂ 6 ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಯುತ್ತದೆ. ಆದರೆ,ಇತ್ತೀಚಿನ ದಿನಗಳಲ್ಲಿ ವಹಿವಾಟಿನ ಪ್ರಮಾಣ ಕುಸಿದಿದ್ದು, ನಗರದಲ್ಲೂ ಬೇಡಿಕೆಗೆ ಪೂರಕವಾಗಿ ಪಟಾಕಿ ಆಮದು ಆಗುತ್ತಿಲ್ಲ ಎನ್ನುತ್ತಾರೆ ಪಟಾಕಿ ಮಾರಾಟಗಾರರು.

“ಶಿವಕಾಶಿಯಲ್ಲಿ ಪಟಾಕಿ ಉತ್ಪಾದಕರಪ್ರತಿಭಟನೆ ಸೇರಿದಂತೆ ಹಲವು ಕಾರಣಗಳಿಂದ ಐದು ತಿಂಗಳ ಕಾಲ ಪಟಾಕಿ ಉತ್ಪಾದನೆ ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ಬೇಡಿಕೆಗೆ ಪೂರಕವಾಗಿ ಪಟಾಕಿ ಪೂರೈಕೆಯಾಗುತ್ತಿಲ್ಲ’ ಎನ್ನುತ್ತಾರೆ ಜಯನಗರದ ರತ್ನಾಸ್‌ ಪಟಾಕಿ ಮಾರಾಟ ಸಂಸ್ಥೆಯ ರಾಘವ್‌ ಕುಮಾರ್‌. ಶೇ. 60 ಪೂರೈಕೆ: “ಪ್ರತಿ ವರ್ಷ ಲಾರಾ (ಸರಪಳಿ) ಪಟಾಕಿಗಳಿಂದಲೇ ಹೆಚ್ಚು ಲಾಭವಾಗುತ್ತಿತ್ತು.

ಆದರೆ, ಈ ಬಾರಿ500-1,000 ಹಾಗೂ 5 ಸಾವಿರ ಲಾರಾ ಪಟಾಕಿಗಳ ಉತ್ಪಾದನೆಯೇ ಆಗಿಲ್ಲ. ಹೂ ಕುಂಡ, ನಕ್ಷತ್ರ ಕಡ್ಡಿ (ಸುರ್‌ಸುರು ಬತ್ತಿ)ಪೆನ್ಸಿಲ್‌ ಕಡ್ಡಿ, ರಾಕೆಟ್‌, ಲಕ್ಷ್ಮೀ ಪಟಾಕಿ ಸೇರಿದಂತೆ ವಿವಿಧ ಶೈಲಿಯ ಪಟಾಕಿಗಳ ಉತ್ಪಾದನೆಯೂ ಕಡಿಮೆಯಾಗಿದೆ. ಹೀಗಾಗಿ, ಸಹಜವಾಗಿಯೇ ವಿವಿಧ ಶೈಲಿಯ ಪಟಾಕಿಗಳ ಪೂರೈಕೆಯೂ ಕಡಿಮೆಯಾಗಿದ್ದು, ಬೇಡಿಕೆಗೆ ಪ್ರತಿಯಾಗಿ ಶೇ. 60ರಷ್ಟು ಪಟಾಕಿಗಳು ಮಾತ್ರ ಪೂರೈಕೆಯಾಗುತ್ತಿದೆ ಎಂದು ಹೇಳಿದರು.

Advertisement

ಬೆಂಗಳೂರಿನಲ್ಲಿ ಕನಿಷ್ಠ 10ರಿಂದ 15 ಕೋಟಿ ರೂ.ಗಳಷ್ಟು ಪಟಾಕಿ ಮಾರಾಟವಾಗುತ್ತದೆ. ಆದರೆ, ಈ ಬಾರಿ ಉತ್ಪಾದನೆ ಕುಸಿದಿರುವುದರಿಂದ ವ್ಯಾಪಾರ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪಟಾಕಿ ವಿತರಕರು.

ಮಾರುಕಟ್ಟೆಯಲ್ಲಿ ಈ ಬಾರಿಯೂ “ಶಾಟ್ಸ್‌’ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಬಾರಿಗಿಂತ ಭಿನ್ನವಾದ ಶಾಟ್ಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದೇ ರೀತಿ ರಾಕೆಟ್‌, ಫ್ಲವರ್‌ ಪಾಟ್‌, ಶಾಟ್ಸ್‌ (ಇದರಲ್ಲಿ 12ರಿಂದ 500ರವರೆಗೆವಿಧಗಳಿವೆ), ಆನೆ ಪಟಾಕಿ (ಲಕ್ಷ್ಮೀ ಪಟಾಕಿ), ಗೋವಾ ಪಟಾಕಿ ಗಳು, ವಿಷ್ಣುಚಕ್ರ ಪ್ರಮುಖವಾದ ಪಟಾಕಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ.

ಪರಿಸರ ಸ್ನೇಹಿ ಪಟಾಕಿ ಎಂದರೇನು? :  ಕಡಿಮೆ ಹೊಗೆ ಹೊರ ಸೂಸುವ ಪಟಾಕಿಗಳನ್ನು ಪರಿಸರ ಸ್ನೇಹಿಪಟಾಕಿಗಳು ಎಂದು ಗುರುತಿಸಲಾ ಗಿದೆ. ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನೆ ಮಂಡಳಿ ಪ್ರಕಾರ ಶೇ.30ರಿಂದ 35ರಷ್ಟು ಕಡಿಮೆ ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ 10 ಮತ್ತು ಪಿಎಂ2.5) ವಿಸರ್ಜನೆ ಮಾಡುವ ಹಾಗೂ ಶೇ. 35ರಿಂದ 40ರಷ್ಟು ಕಡಿಮೆ ಎಸ್‌ಒ2 ಹಾಗೂ ನೈಟ್ರೋಜನ್‌ ಹೊರ ಸೂಸುತ್ತವೆ.

“ಬೇರಿಯಂ, ನೈಟ್ರೋಜನ್‌ ಹಾಗೂ ಮರ್‌ಕ್ಯೂರಿ ಸೇರಿದಂತೆ ವಿವಿಧ ಅಪಾಯಕಾರಿ ಅಂಶಗಳು ಇರುವ ಪಟಾಕಿಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ (ಹಸಿರು) ಪಟಾಕಿ ಪರಿಚಯಿಸಲಾಗಿದೆ. ದೆಹಲಿಯಲ್ಲಿ ಸಮುದಾಯ ಪಟಾಕಿ ಹಬ್ಬ ಆಚರಣೆ ಸಂಪ್ರದಾಯವನ್ನೂ (ಹಲವರು ಒಂದೆಡೆ ಸೇರಿ ಪಟಾಕಿ ಸುಡುವುದು) ಪರಿಚಯಿಸಲಾಗಿದೆ. ಇದರಿಂದಲೂ ಪರಿಸರ ಮಾಲಿನ್ಯ ನಿಯಂತ್ರಣವಾಗಲಿದೆ’ ಎನ್ನುತ್ತಾರೆ ಕ್ಲೀನ್‌ಏರ್‌ ಫ್ಲಾಟ್‌ ಫಾರಂನ ಮುಖ್ಯಸ್ಥರಾದ ಯೋಗೇಶ್ವರ್‌

ಮೈದಾನಗಳಲ್ಲಿ ಸುರಕ್ಷತಾ ಕ್ರಮ :  ಬಿಬಿಎಂಪಿಯು ಈ ಬಾರಿ ಪಟಾಕಿ ಮಾರಾಟ ಪರವಾನಿಗೆ ಮತ್ತು ಅನಧಿಕೃತ ಪಟಾಕಿ ಮಾರಾಟ ತಡೆಗೆ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಪ್ರಹರಿಗಳಲ್ಲಿ ಪೊಲೀಸ್‌ ಮತ್ತು ಬಿಬಿಎಂಪಿಯ ಸಿಬ್ಬಂದಿಗಳು ಗಸ್ತು ತಿರುಗುವುದಕ್ಕೆ ಮತ್ತು ಬಿಬಿಎಂಪಿ ವ್ಯಾಪ್ತಿಯ ವಿಶಾಲ ಮೈದಾನಗಳಾದ ಮಲ್ಲೇಶ್ವರಂ ಮೈದಾನ, ಕೊಹಿನೂರು ಮೈದಾನ, ಜಯನಗರದ ಮಾಧವ್‌ ಪಾರ್ಕ್‌ ಬಳಿಯಮೈದಾನ, ಸಾಯಿರಂಗ ಕಲ್ಯಾಣ ಮಂಟಪದಹತ್ತಿರದ ಮೈದಾನ ಸೇರಿದಂತೆ ಪ್ರಮುಖ ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಳ್ಳುತ್ತಿದೆ.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next