Advertisement
ಕೋಟ, ಎ. 26: ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾಂಡ್ಲ ಕಾಡು ಇದೀಗ ನಶಿಸುತ್ತಿದೆ. ಇದರ ರಕ್ಷಣೆ ಮತ್ತು ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸ್ಥಳೀಯರ ಮೂಲಕ ಕಾಂಡ್ಲ ವನಗಳ ನಿರ್ಮಾಣಕ್ಕೆ ಮುಂದಾಗಿದೆ. ವರ್ಷದ ಹಿಂದೆ ಗುಂಡ್ಮಿ, ಪಾರಂಪಳ್ಳಿ ಹೊಳೆಯ ಸುಮಾರು 15 ಹೆಕ್ಟೇರ್ ಪ್ರದೇಶದ ಹಿನ್ನೀರಿನಲ್ಲಿ ನಾಟಿ ಮಾಡಿದ ಕಾಂಡ್ಲ ಸಸಿಗಳಲ್ಲಿ ಶೇ.80ರಿಂದ ಶೇ.90ರಷ್ಟು ಬೆಳೆದು ನಿಂತಿದೆ.
Related Articles
Advertisement
ಕಾಂಡ್ಲದಲ್ಲಿ ಸುಮಾರು 25ಕ್ಕೆ ಹೆಚ್ಚಿನ ಪ್ರಭೇದಗಳಿವೆ. ಇದರ ಬೇರುಗಳು ತೀರಪ್ರದೇಶದ ಮಣ್ಣನ್ನು ಬಿಗಿಯಾಗಿ ಹಿಡಿಯುವುದರಿಂದ ಸಮುದ್ರ ಹಾಗೂ ಭೂ ಕೊರೆತಕ್ಕೆ ತಡೆಯಾಗುತ್ತದೆ. ಮರಗಳು ತಡೆಗೋಡೆಯಂತೆ ಬೆಳೆದು ನಿಲ್ಲುವುದರಿಂದ ಬಿರುಗಾಳಿ, ಚಂಡಮಾರುತ, ಪ್ರವಾಹ, ಕಡಲ್ಕೊರೆತ, ಸುನಾಮಿಯಂಥ ಪ್ರಕೃತಿ ವಿಕೋಪದ ಜತೆಗೆ ಸಮುದ್ರದ ತೀರದಲ್ಲಿ ಉಂಟಾಗುವ ವಿನಾಶವನ್ನು ತಡೆಯುತ್ತದೆ. ಇದರ ದಪ್ಪ ಹಸುರು ಎಲೆಗಳು ಅಧಿಕ ಅಧಿಕ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತವೆ. ನದಿಗಳಿಂದ ಬರುವ ಸಾರಾಂಶವನ್ನು ಹಿಡಿದಿಟ್ಟು ಆ ಪ್ರದೇಶವನ್ನು ಸಮೃದ್ಧಗೊಳಿಸಲು ಇವು ಸಹಕಾರಿ. ಪ್ರಾಣಿ, ಪಕ್ಷಿ ಹಾಗೂ ಜಲಚರಗಳಾದ ಮೀನು, ಏಡಿ, ಕಪ್ಪೆ ಇತ್ಯಾದಿಗಳು ಮರಿಮೊಟ್ಟೆಗಳ ಸಂತಾನಾಭಿವೃದ್ಧಿ ಆಹಾರಕ್ಕಾಗಿ ಇದನ್ನು ಆಶ್ರಯಿಸುತ್ತವೆ.
ಕಾಂಡ್ಲ ವನ ನಿರ್ಮಾಣ ಹೇಗೆ ?
ಕಾಂಡ್ಲದ ಕಾಯಿ, ಕೋಡುಗಳೇ ಈ ಸಸ್ಯದ ಪರಂಪರೆಯ ಕೊಂಡಿ. ಮರದಿಂದ ಬೇರ್ಪಟ್ಟು, ನೀರಿನ ತಳದ ಕೆಸರಿಗೆ ಅಡಿಮುಖವಾಗಿ ಇಳಿಯುವ ಕೋಡುಗಳು, ಗಿಡಗಳಾಗಿ ರೂಪ ಪಡೆಯುತ್ತವೆ. ಇಂತಹ ಲಕ್ಷಾಂತರ ಕೋಡುಗಳನ್ನು ಸಂಗ್ರಹಿಸಿ ನಾಟಿ ಮಾಡಿ ಕಾಂಡ್ಲಾ ವನ ನಿರ್ಮಿಸಲಾಗುತ್ತದೆ.
ಕಾಂಡ್ಲ ವನ ರಕ್ಷಣೆಯಲ್ಲಿ ಕೈಜೋಡಿಸಿ
ಸಾಸ್ತಾನ ಸಮೀಪ ಗುಂಡ್ಮಿಯಲ್ಲಿ ಸ್ಥಳೀಯರ ಮೂಲಕ 15ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲವನ ನಿರ್ಮಿಸಲಾಗಿದೆ ಇದು ಪರಿಸರ ರಕ್ಷಣೆಗೆ ಸಹಕಾರಿಯಾಗಿದೆ. ಇದರ ರಕ್ಷಣೆಗೆ ಸ್ಥಳೀಯರು ಸಹಕಾರ ನೀಡಬೇಕು ಹಾಗೂ ಕಾಂಡ್ಲ ಗಿಡಗಳನ್ನು ನಾಶಪಡಿಸುವುದು ಅರಣ್ಯ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. -ಜೀವನದಾಸ್ ಶೆಟ್ಟಿ,ಉಪವಲಯ ಅರಣ್ಯಾಧಿಕಾರಿಗಳು, ಬ್ರಹ್ಮಾವರ