Advertisement

ಮಹಿಳಾ ಗ್ರಂಥಾಲಯಕ್ಕೆ ಗ್ರಹಣ

02:25 PM Oct 19, 2019 | Suhan S |

ಗಜೇಂದ್ರಗಡ: ಪಟ್ಟಣದಲ್ಲಿ ಮಹಿಳಾ ಗ್ರಂಥಾಲಯಕ್ಕೆ ಬೀಗ ಜಡಿಯಲಾಗಿದ್ದು, ಮಹಿಳೆಯರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

Advertisement

ನ. 2001ರಲ್ಲಿ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪುರಸಭೆ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ ಅಡಿ 1.40 ಲಕ್ಷ ರೂ. ವೆಚ್ಚದಲ್ಲಿ ಪುರಸಭೆ ಬಳಿ ನಿರ್ಮಿಸಿರುವ ಕಟ್ಟಡ ಇದೀಗ ಪುಸ್ತಕಗಳ ಗೋದಾಮಾಗಿ ಪರಿವರ್ತನೆಗೊಂಡಿದೆ. ಓಬೇರಾಯನ ಕಾಲದಂತಿರುವ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ಹಂತ ತಲುಪಿದೆ. ವಿದ್ಯುತ್‌ ಸೌಲಭ್ಯವಿಲ್ಲ. ಸಮರ್ಪಕ ಆಸನ ವ್ಯವಸ್ಥೆ ಇಲ್ಲ. ಮಳೆ ಬಂದರೆ ಸಾಕು ಪುಸ್ತಕಗಳೆಲ್ಲ ನೀರಿನಲ್ಲೇ ತೇಲಾಡುತ್ತವೆ. ಕಟ್ಟಡ ಮುಂಭಾಗ ಅಪಾಯದ ಅಂಚಿನಲ್ಲಿದೆ. ದುರಸ್ತಿಗಾಗಿ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿದರೂ ಇದಕ್ಕೂ ನಮಗೂ ಸಂಬಂಧವಿಲ್ಲವೇ ಎನ್ನುವಂತೆ ವರ್ತಿಸುತ್ತಿದ್ದಾರೆಂಬುದು ಸಾರ್ವಜನಿಕರ ಆರೋಪ.

ದಿವ್ಯ ನಿರ್ಲಕ್ಷ್ಯ : ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣಕ್ಕೆ ಗ್ರಂಥಾಲಯ ಅವಶ್ಯಕತೆಯಿದ್ದು, ಹೆಚ್ಚುವರಿ ಕಟ್ಟಡದ ಕೊರತೆ ಕಾಡುತ್ತಿದೆ. ಈ ಗ್ರಂಥಾಲಯ ಸರಕಾರದ ಅಧಿನಕ್ಕೆ ಒಳಪಟ್ಟ ಮೇಲೆ 122×66 ವಿಸ್ತೀರ್ಣದ ಜಾಗವಿದ್ದರೂ ಕೇವಲ 21×15 ಜಾಗೆಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ಇರುವ ಕಟ್ಟಡ ಮುಂಭಾಗದಲ್ಲೇ ಗ್ರಂಥಾಲಯಕ್ಕೆ ಸಂಬಂಧಿಸಿದ ಜಾಗೆ ಇದ್ದರೂ ಪುರಸಭೆ ಕಟ್ಟಡ ನಿರ್ಮಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಓದುಗರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗ್ರಂಥಗಳ ಭಂಡಾರವೇ ಇದು: ಗ್ರಂಥಾಲಯ ಹೊರ ನೋಟಕ್ಕಷ್ಟೇ ಓಬೇರಾಯನ ಕಾಲದಂತೆ ಕಂಡರೂ ಇಲ್ಲಿ 35 ಸಾವಿರಕ್ಕೂ ಅಧಿಕ ವಿವಿಧ ಭಾಷೆಯ ಪುಸ್ತಕಗಳಿವೆ. ಆದರೆ ಧೂಳು ಹಿಡಿದಿವೆ. ಗ್ರಂಥಾಲಯ ಸ್ಥಿತಿ ಕಂಡು ಪ್ರಜ್ಞಾವಂತರು ಮಮ್ಮಲ ಮರುಗುವಂತಾಗಿದೆ.

ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳಿವೆ. ಆದರೆ ಸೌಲಭ್ಯ ದೊರೆಯುತ್ತಿಲ್ಲ. ಮಹಿಳಾ ಗ್ರಂಥಾಲಯ ಕಟ್ಟಡ ನೋಡಿದರೆ ಬೀಳುವ ಸ್ಥಿತಿ ತಲುಪಿದೆ. ಇನ್ನು ಕುಳಿತು ಓದುವ ವ್ಯವಸ್ಥೆಯಂತೂ ಮರೀಚಿಕೆಯಾದಂತಾಗಿದೆ.  ಅನ್ನಪೂರ್ಣೇಶ್ವರಿ ಪಾಟೀಲ, ಓದುಗರು.

Advertisement

 ಗಜೇಂದ್ರಗಡದಲ್ಲಿ 2001ರಲ್ಲಿ ನಿರ್ಮಿಸಿರುವ ಮಹಿಳಾ ಗ್ರಂಥಾಲಯಕ್ಕೆ ಹಲವು ವರ್ಷಗಳಿಂದ ಬೀಗ ಜಡಿಯಲಾಗಿದೆ. ಬಹುತೇಕ ಮಹಿಳಾ ಓದುಗರು ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಓದುವ ಹವ್ಯಾಸ ಇದ್ದರೂ ಸೌಲಭ್ಯ ಇಲ್ಲದಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಿ ಮಹಿಳಾ ಗ್ರಂಥಾಲಯ ಸೇವೆಗೆ ನೀಡಬೇಕಿದೆ. –ಮಂಜುಳಾ ರೇವಡಿ, ಇನ್ನರ್‌ವಿಲ್‌ ಅಧ್ಯಕ್ಷೆ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next