ಶಿರಹಟ್ಟಿ: ಪಟ್ಟಣದಲ್ಲಿ ಸುಮಾರು ಏಳೆಂಟು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹಿಡಿದಿದ್ದ ಗ್ರಹಣ ಮೋಕ್ಷವಾಗುವ ಕಾಲ ಸಮೀಪಿಸಿದೆ.
ಸರಕಾರ ಅಲ್ಪಸಂಖ್ಯಾತರ ಆರೋಗ್ಯ ಕಾಪಾಡುವುದಕ್ಕಾಗಿ ಪಟ್ಟಣದ ಶ್ರೀ ಜ.ಫಕ್ಕೀರೇಶ್ವರ ಮಠದ ಹತ್ತ್ತಿರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿತ್ತು. ಆದರೆ ಇದಕ್ಕೆ ಸಾಕಷ್ಟು ವಿಘ್ನಗಳು ಎದುರಾಗಿದ್ದವು. ಘಟಕ ಕಾರ್ಯರಂಭ ಮಾಡದ್ದರಿಂದ ಹಿಡಿಶಾಪ ಹಾಕುತ್ತಿದ್ದ ಸಾರ್ವಜನಿಕರು, ಇದೀಗ ಘಟಕ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವುದರಿಂದ ಅಧಿಕಾರಿಗಳನ್ನು ಶ್ಲಾಘಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರನ್ನು ಒಂದು ಕಿಮೀ ದೂರ ಹೋಗಿ ತರಬೇಕಾಗಿತ್ತು. ಆದರೆ ಈಗ ಪಟ್ಟಣದಲ್ಲಿ ಘಟಕ ಆರಂಭವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಸಾರ್ವಜನಿಕರು ಹರ್ಷಿತರಾಗಿದ್ದಾರೆ. ಪಪಂ ಆಡಳಿತಾಧಿಕಾರಿ ತಹಶೀಲ್ದಾರ ಆಶಪ್ಪ ಹೆಚ್ಚಿನ ಆಸಕ್ತಿ ವಹಿಸಿ ತಾವೇ ಖುದ್ದಾಗಿ ಸ್ಥಳಕ್ಕೆ ಭೆೇಟಿ ಕೊಟ್ಟು ಪಪಂ ಸಿಬ್ಬಂದಿಯನ್ನು ಕರೆಯಿಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
Advertisement
‘ಉದಯವಾಣಿ’ಯಲ್ಲಿ ಏ. 29ರಂದು ‘ಕುಡಿವ ನೀರಿಕ ಘಟಕಕ್ಕೆ ಗ್ರಹಣ’ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿಯಿಂದ ಪಪಂ ಎಚ್ಚೆತ್ತುಕೊಂಡಿದೆ. ಪಪಂ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಘಟಕ ಆರಂಭಕ್ಕೆ ಕಾರ್ಯೋನ್ಮುಖರಾಗಿದ್ದು, ನೀರು ಒದಗಿಸಲು ಸಕಲ ಕ್ರಮ ಜರುಗಿಸಿರುವುದು ಸಾರ್ವಜನಿಕರಲ್ಲಿ ಸಂತಸ ಉಂಟಾಗಿದೆ.