Advertisement

21ರಂದು ರಾಹುಗ್ರಸ್ಥ ಚೂಡಾಮಣಿ ಸೂರ್ಯ ಗ್ರಹಣ ಸಂಭವ

11:55 AM Jun 15, 2020 | Suhan S |

ಬಾಗಲಕೋಟೆ: ಜೂ.21ರ ಬೆಳಗ್ಗೆ 1.15ರಿಂದ ಮಧ್ಯಾಹ್ನ 1.44ರವರೆಗೆ ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಸಂಭವಿಸಲಿದ್ದು,ಯಾರಿಗೆ ಶುಭ-ಯಾರಿಗೆ ಅಶುಭ ಎಂಬುದನ್ನು ಜಿಲ್ಲೆಯ ಖ್ಯಾತ ಜ್ಯೋತಿಷಿ ಕಮತಗಿಯ ಡಾ| ಗಣೇಶ ಕುಬೇರಪ್ಪ ಚಿತ್ರಗಾರ ತಿಳಿಸಿದ್ದಾರೆ.

Advertisement

ಈ ಗ್ರಹಣ ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ಸಂಭವಿಸಲಿದೆ. ಇದು 2ನೇ ಪ್ರಹರದಲ್ಲಿ ಆಗುವುದರಿಂದ ಜೂ.20ರಂದು ರಾತ್ರಿ 9ಗಂಟೆ 11ನಿಮಿಷದಿಂದಲೇ ವೇದಾರಂಭವಾಗುತ್ತದೆ. ಸಶಕ್ತರು ಅಲ್ಲಿಂದಲೇ ಭೋಜನಾದಿಗಳನ್ನು ಮಾಡಬಾರದು. ಮಕ್ಕಳು, ವೃದ್ಧರು, ಗರ್ಭಿಣಿಯರು ಜೂ.21ರಂದು ಬೆಳಗಿನ 6 ಗಂಟೆ 47 ನಿಮಿಷದವರೆಗೆ ಭೋಜನಾದಿಗಳನ್ನು ಮಾಡಬಹುದು. ಗ್ರಹಣ ಸಮಯದಲ್ಲಿ ಮಲಮೂತ್ರ ವಿಜರ್ಸನೆ ಹಾಗೂ ನಿದ್ರಾದಿಗಳನ್ನು ಮಾಡಬಾರದು. ಗರ್ಭಿಣಿಯರು, ಗ್ರಹಣದ ದರ್ಶನವೂ ಮಾಡಬಾರದೆಂದು ಅವರು ಹೇಳಿದ್ದಾರೆ.

ಯಾರಿಗೆ ಶುಭ-ಅಶುಭ?: ಗ್ರಹಣ ಆರಂಭದಿಂದ ಅಂತ್ಯದವರೆಗಿನ ಕಾಲವನ್ನು ಪುಣ್ಯಕಾಲವೆಂದು ತಿಳಿಯಬೇಕು. ಗ್ರಹಣ ಆರಂಭಗೊಂಡ ಮೇಲೆ ಜಲಾಶಯಗಳಲ್ಲಿ ಸ್ನಾನ ಮಾಡಿ, ಜಪ-ತಪ-ಧ್ಯಾನ ಮಾಡಿ ದೋಷ ಪರಿಹರಿಸಿಕೊಳ್ಳಬೇಕು. ಈ ವೇಳೆ ಮಂತ್ರಸಿದ್ಧಿ ಮಾಡಿಕೊಳ್ಳಲು ಉತ್ತಮವಿದೆ.ಮೇಷ, ಮಕರ, ಸಿಂಹ, ಕನ್ಯಾ ರಾಶಿಯವರಿಗೆ ಈ ಗ್ರಹಣ ಶುಭ ಫಲವಿದ್ದು, ಮಿಥುನ, ಮೀನ, ವೃಶ್ಚಿಕ, ಕರ್ಕ ರಾಶಿಯವರಿಗೆ ಅಶುಭ ಫಲವಿದೆ. ವೃಷಭ, ಕುಂಭ, ಧನು, ತುಲಾ ರಾಶಿಯವರಿಗೆ ಮಧ್ಯಮ ಫಲವಿದೆ ಎಂದು ತಿಳಿಸಿದ್ದಾರೆ.

ಗ್ರಹಣ ದೋಷ ಪರಿಹಾರ ಹೇಗೆ?: ಮೃಗಶಿರಾ-ಆರಿದ್ರಾ ನಕ್ಷತ್ರ ಹಾಗೂ ಮಿಥುನ, ಮೀನ, ವೃಶ್ಚಿಕ, ಕರ್ಕ ರಾಶಿಯವರಿಗೆ ಹಾಗೂ ಸಿಂಹ, ಕನ್ಯಾ ಲಗ್ನದಲ್ಲಿ ಜನಿಸಿದವರು ಅವಶ್ಯವಾಗಿ ಗ್ರಹಣ ಶಾಂತಿ ಮಾಡಿಸಿಕೊಳ್ಳಬೇಕು. ಕೆಂಪು ವಸ್ತ್ರ, 250 ಗ್ರಾಂ ಗೋಧಿ ಕಾಳು, ಉದ್ದಿನ ಕಾಳು, ದಕ್ಷಿಣೆ, ಬೆಳ್ಳಿ ಸೂರ್ಯನ ಪ್ರತಿಮೆ ಪೂಜಿಸಿ ಗುರು ವರ್ಗದವರಿಗೆ ದಾನ ಕೊಡಬೇಕು. ದಾನ ಮಾಡುವಾಗ ಓಂ ಹ್ರೀಂ ಸೂರ್ಯಾಯ ನಮಃ, ಓಂ ಭಾಸ್ಕರಾಯ ವಿದ್ಮಹೇ, ಮಹಾದ್ಯತಿಕರಾಯ ಧೀಮಹಿ, ತನ್ನೋ ಆದಿತ್ಯ ಪ್ರಚೋದಯಾತ್‌ ಎಂಬ ಈ ಮಂತ್ರವನ್ನು 108 ಬಾರಿ ಜಪಿಸಿ ದಾನ ಕೊಡಬೇಕೆಂದು ಅವರು ವಿವರಿಸಿದ್ದಾರೆ.

ಗ್ರಹಣ ಸ್ನಾನದ ಮಹತ್ವ: ಗ್ರಹಣದ ಸಂದರ್ಭದಲ್ಲಿ ಎಲ್ಲ ನೀರುಗಳು ಗಂಗೆಯ ಸಮಾನವೆಂದು ಭಾವಿಸಲಾಗಿದೆ. ಆದರೂ ಬಿಸಿ ನೀರಿಗಿಂತ ತಣ್ಣೀರು ಪುಣ್ಯಕಾರಕ. ಬಾವಿ-ಹೊಂಡಗಳಿಂದ ನೀರನ್ನೆತ್ತಿ ಸ್ನಾನ ಮಾಡುವುದಕ್ಕಿಂತ ಹರಿಯುವ ನೀರು ಅಂದರೆ ನದಿಗಳಲ್ಲಿ ಸ್ನಾನ ಮಾಡಬೇಕು. ಸೂರ್ಯ ಗ್ರಹಣದಲ್ಲಿ ನರ್ಮದಾ ನದಿ ಸ್ನಾನಕ್ಕೆ ವಿಶಿಷ್ಟ ಮಹತ್ವವಿದೆ. ನರ್ಮದಾ ಸ್ನಾನ ಮಾಡಲು ಆಗದವರು, ನರ್ಮದೆಯ ಸ್ಮರಣೆ ಮಾಡಿ ಸ್ನಾನ ಮಾಡಬೇಕೆಂದು ಹೇಳಿದ್ದಾರೆ.

Advertisement

ಕಂಕಣಾಕೃತಿ: ಈ ಕಂಕಣಾಕೃತಿ ಗ್ರಹಣ 40 ಸೆಕೆಂಡ್‌ಗಳ ಕಾಲ ಇರುವುದರಿಂದ ಈ ವೇಳೆ ಕನ್ನಡಕ ಧರಿಸುವುದು ಉತ್ತಮ. ಇದರ ನಂತರ ಮತ್ತೆ 2031ರ ಮೇ 21ರಂದು ದಕ್ಷಿಣ ಭಾರತದಲ್ಲಿ ಕಂಕಣಾಕೃತಿ ಗ್ರಹಣ ಕಾಣಿಸಲಿದೆ. ಗ್ರಹಣ ಮೋಕ್ಷವಾದ ನಂತರ ಅಮಾವಾಸ್ಯೆ ಆಚರಣೆ ಮಾಡಬೇಕೆಂದು ಡಾ| ಗಣೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next