ಕೊಪ್ಪಳ: ತಾಲೂಕಿನ ಬಹುದೊಡ್ಡ ಕುಡಿಯುವ ನೀರಿನ ಯೋಜನೆಯಾದ 84 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮತ್ತೆ ಗ್ರಹಣ ಬಡಿತೇ ಎನ್ನುವ ಮಾತುಗಳು ಕೇಳಿ ಬಂದಿವೆ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಿದ್ದು, ಅವರಾದರೂ ಈ ಯೋಜನೆ ಬಗ್ಗೆ ಕಾಳಜಿ ವಹಿಸಲಿ.
ಹೌದು. ಕೊಪ್ಪಳ ತಾಲೂಕಿನಲ್ಲಿಯೇ ತುಂಗಭದ್ರಾ ಜಲಾಶಯವಿದ್ದರೂ ಹಲವು ಹಳ್ಳಿಗಳು ಇಂದಿಗೂ ಕುಡಿಯುವ ನೀರಿಲ್ಲ. ಪ್ರತಿ ಬೇಸಿಗೆಯ ಸಂದರ್ಭದಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುತ್ತದೆ. ಗ್ರಾಮೀಣ ಪ್ರದೇಶದ ಜನರಂತೂ ಹೊಲ ಗದ್ದೆಗಳಿಗೆ ಸುತ್ತಾಡುವುದು ಇಂದಿಗೂ ಕಾಣಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು 2008-09ನೇ ಸಾಲಿನಲ್ಲಿ ತುಂಗಭದ್ರಾ ಹಿನ್ನೀರಿನ ಮೂಲಕ 84 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಿತ್ತು. ಅದರಂತೆ 2010ರಲ್ಲಿ ಕಾಮಗಾರಿಯನ್ನೂ ಆರಂಭಿಸಲಾಯಿತು. ಈ ವರೆಗೂ ಬರೊಬ್ಬರಿ 58 ಕೋಟಿ ರೂ. ಅನುದಾನ ಈ ಕಾಮಗಾರಿಗೆ ಖರ್ಚಾಗಿದೆ. ಆದರೆ ಈ ವರೆಗೂ ಮೊದಲ ಹಂತದ ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಿಲ್ಲ.
ಈ ಯೋಜನೆಯಲ್ಲಿ ಕಾಸನಕಂಡಿ ಸಮೀಪದಲ್ಲಿ ಮೇನ್ ರೈಸಿಂಗ್ ಪೈಪ್ ಡಿಸೈನ್ ಸರಿಯಿಲ್ಲ ಎಂದು ತಾಂತ್ರಿಕ ವರದಿ ಹೇಳುತ್ತಿದೆ. ನೀರು ಪೂರೈಸಿದರೆ ಪೈಪ್‌ಗ್ಳು ಎಲ್ಲೆಂದರಲ್ಲಿ ಒಡೆದು ನೀರು ಸೋರಿಕೆಯಾಗುತ್ತಿವೆ ಎನ್ನುತ್ತಿದ್ದಾರೆ ಇಂಜನಿಯರ್‌ಗಳು. ಇದೆಲ್ಲವನ್ನು ಅರಿತು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಇತ್ತೀಚೆಗಷ್ಟೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಅವರನ್ನು ಜಿಲ್ಲೆಗೆ ಆಹ್ವಾನಿಸಿ ಕಾಸನಕಂಡಿ ಬಳಿಯ ನೀರು ಪೂರೈಕೆ ಮಾಡುವ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ವಾಸ್ತುವ ಕುರಿತು ಪರಿಶೀಲನೆ ಮಾಡಿದ್ದರು. ಸ್ವತಃ ಭೈರೇಗೌಡ ಅವರೇ ಅಲ್ಲಿನ ನೀಲನಕ್ಷೆ ಸಮೇತ ವಾಸ್ತುವ ಸ್ಥಿತಿ ಅವಲೋಕಿಸಿ ಇಲಾಖೆ ಆಯುಕ್ತರನ್ನು ಭೇಟಿ ನೀಡಿ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ಅಷ್ಟರೊಳಗೆ ಮೈತ್ರಿ ಸರ್ಕಾರ ಪತನವಾಗಿದೆ.
ಬಿಜೆಪಿ ಸರ್ಕಾರದಲ್ಲೇ ಯೋಜನೆ ಜಾರಿ!:
ವಿಶೇಷವೆಂಬಂತೆ, ಕೊಪ್ಪಳ ತಾಲೂಕಿನ 84 ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಈ ಹಿಂದೆ 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಯಾಗಿತ್ತು. ಆಗ ಸಂಗಣ್ಣ ಕರಡಿ ಅವರು ಶಾಸಕರಾಗಿದ್ದು, ಈ ಯೋಜನೆಯ ಬಗ್ಗೆ ಕಾಳಜಿ ವಹಿಸಿ ಜಾರಿ ಮಾಡಿಸಿದ್ದರು. ಯೋಜನೆಯ ಅನುದಾನ ನೀರಿನಂತೆ ಖರ್ಚಾಗಿದೆ. ಆದರೆ ಜನರಿಗೆ ನೀರು ಪೂರೈಕೆಯಾಗಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಈ ಯೋಜನೆಯು ವಿಫಲವಾಗಿದ್ದರಿಂದ ಬರಿ ದಾಖಲೆ ಪರಿಶೀಲನೆ, ಸ್ಥಳ ಪರಿಶೀಲನೆಯಲ್ಲಿಯೇ ಕಾಲಹರಣ ಮಾಡಿ
ಯೋಜನೆಯನ್ನು ಮುಂದೂಡುತ್ತಾ ಬಂದಿತ್ತು. ಇದರಿಂದ ಜನರು ಬಹುಗ್ರಾಮದ ಯೋಜನೆಯ ಆಸೆ ಬಗ್ಗೆ ನಿರೀಕ್ಷೆಯನ್ನೇ ಕಳೆದುಕೊಂಡಿದ್ದರು. ಈಗ ಮತ್ತೆ ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ-ಕಾಂಗ್ರೆಸ್ ರಾಜಕಾರಣದ ಮಧ್ಯೆ ಯೋಜನೆ ನರಳಾಡುತ್ತಿದೆ. ಜನರಿಗೆ ಇತ್ತ ನೀರು ಕೊಡುತ್ತಿಲ್ಲ. ಅತ್ತ ತಪ್ಪಿತಸ್ಥರ ಮೇಲೆಯೂ ಯಾವುದೇ ಕ್ರಮವಿಲ್ಲವೆಂಬಂತಾಗಿದೆ. ಇನ್ನಾದರೂ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ ಅವರು ರಾಜಕಾರಣ ಮರೆತು ಯೋಜನೆ ಬಗ್ಗೆ ಕಾಳಜಿ ಕೊಟ್ಟು ಜನರಿಗೆ ನೀರು ಪೂರೈಸುವ ಕೆಲಸ ಮಾಡಬೇಕಿದೆ.