ಲಕ್ಷ್ಮೇಶ್ವರ: ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿನ ಎರಡು ಕೆರೆಗಳಿಗೆ ಸಮೀಪದ ವರದಾ ನದಿಯಿಂದ ನೀರು ತುಂಬಿಸುವ ಸಣ್ಣ ನೀರಾವರಿ ಇಲಾಖೆಯ 9.45 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆ ಯೋಜನೆ ಕುಂಟುತ್ತಾ ಸಾಗಿದೆ.
ಬಾಲೆಹೊಸೂರ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಎರಡು ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2017 ಡಿ. 25ರಂದು ಚಾಲನೆ ನೀಡಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದಲೂ ಈ ಯೋಜನೆ ಕಾಮಗಾರಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮಂಗಳೂರಿನ ಓಶಿಯನ್ ಕನ್‌ಸ್ಟ್ರಕ್ಸನ್ ಕಂಪನಿಯವರು ಇದರ ಗುತ್ತಿಗೆ ಪಡೆದಿದ್ದಾರೆ. ಮುಖ್ಯ ಗುತ್ತಿಗೆದಾರರು 2ನೇ ಯವರಿಗೆ ಕಾಮಗಾರಿ ಮಾಡಲು ನೀಡಿರುವುದು ಕಾಮಗಾರಿ ವೇಗ ಕಳೆದುಕೊಂಡಿದೆ ಎಂಬುದು ರೈತರ ಆರೋಪ. 18 ತಿಂಗಳ ಕಾಲಾವಧಿಯ ಈ ಕಾಮಗಾರಿಯನ್ನು ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸಿದ್ದರೆ ಈ ಮಳೆಗಾಲದಲ್ಲಾದರೂ ಕೆರೆಗಳು ತುಂಬುತ್ತಿದ್ದವು. ಆದರೆ ಗುತ್ತಿಗೆದಾರರ ನಿರ್ಲಕ್ಷ, ಸಣ್ಣ ನೀರಾವರಿ ಇಲಾಖೆ ಬೇಜಾವಾಬ್ದಾರಿಯಿಂದ ಯೋಜನೆ ಸಾಫಲ್ಯವಾಗುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ.
ಪ್ರಾರಂಭದ ಹಂತದಲ್ಲಿ ಈ ಯೋಜನೆಗೆ ಮರಡೂರ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೆ ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಶ್ರೀಗಳ ಮಧ್ಯಸ್ಥಿಕೆಯಲ್ಲಿ ರೈತರ ಮನವೊಲಿಸಿದ ಕಾಮಗಾರಿ ಆರಂಭಕ್ಕೆ ಸಮ್ಮತಿ ಪಡೆಯಲಾಗಿತ್ತು. ಆದರೆ ಗುತ್ತಿಗೆದಾರರು ಮತ್ತು ಇಲಾಖೆಯವರು ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಯರ್ರಾಬಿರ್ರಿ ಕಾಮಗಾರಿ ಮಾಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ.
ನದಿ ಪಾತ್ರದಲ್ಲಿ ನಿರ್ಮಿಸಿರುವ ಮೇಲ್ಮಟ್ಟದ ಜಲಾಗಾರ ಕಾಮಗಾರಿ ಅರ್ಧಕ್ಕೆ ನಿಂತಿರುವುದು, ರೈತರ ಜಮೀನುಗಳಲ್ಲಿ ಪೈಪ್‌ಲೈನ್‌ಗಾಗಿ ಅಗೆದಿರುವ ಅರ್ಧಮರ್ಧ ಕಾಲುವೆಗಳು, ಅಳವಡಿಸಬೇಕಾದ ಪೈಪ್‌ಗ್ಳು ಇಲ್ಲದಿರುವುದು ಈ ಕಾಮಗಾರಿ ಕುಂಟುತ್ತಾ ಸಾಗಿರುವುದಕ್ಕೆ ಸಾಕ್ಷಿಯಾಗಿದೆ. ಒಟ್ಟು 11 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿಗಾಗಿ ರೈತರ ಜಮೀನುಗಳನ್ನು ಅಗೆದು ವರ್ಷವೇ ಕಳೆದಿದ್ದು, ರೈತರು ತಮ್ಮ ಜಮೀನುಗಳಲ್ಲಿ ಉಳುಮೆ ಮಾಡದಂತಹ ಸ್ಥಿತಿಯನ್ನು ಗುತ್ತಿಗೆದಾರರು ನಿರ್ಮಿಸಿದ್ದಾರೆ.
ತಮ್ಮೂರ ಕೆರೆಗೆ ನದಿ ನೀರು ಹರಿದು ಬರುತ್ತದೆ ಎಂಬ ಆಶಾಭವನೆಯಿಂದ ಗ್ರಾಮದ ಜನರು ದಿಂಗಾಲೇಶ್ವರ ಶ್ರೀಗಳ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಎರಡೂ ಕೆರಗಳ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಸರ್ಕಾರ ಕೆರೆ ತುಂಬಿಸಲು ನೀರಿನಂತೆ ಹಣ ವಿನಿಯೋಗಿಸುತ್ತಿದ್ದರೂ ಸಂಬಂಧಪಟ್ಟವರ ದಿವ್ಯ ನಿರ್ಲಕ್ಷ್ಯ ಮತ್ತು ನಿಷ್ಕಾಳಜಿಯಿಂದಾಗಿ ಯೋಜನೆ ದಿಕ್ಕು ತಪ್ಪಿರುವುದು ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.