ಚನ್ನರಾಯಪಟ್ಟಣ: ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಸಕಾಲಕ್ಕೆ ಸರ್ಕಾರ ಸಹಾಯ ಧನ ಬಿಡುಗಡೆ ಮಾಡದೆ ಇರುವುದರಿಂದ ಸಾವಿರಾರು ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿವೆ.
ಎರಡು ಹಂತ ಮುಗಿದರು ಸಹಾಯಧನವಿಲ್ಲ: ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ 1.20 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಫಲಾನುಭವಿ ಮನೆ ನಿರ್ಮಾಣಕ್ಕೆ ತಳಪಾಯ ಹಾಕಿದಾಗ 30 ಸಾವಿರ, ಮನೆ ಗೋಡೆ ಪೂರ್ಣಗೊಂಡಾಗ 30 ಸಾವಿರ, ಮನೆಯ ಚಾವಣಿ ಹಾಕಿದಾಗ 30 ಸಾವಿರ, ಗೋಡೆಯ ಗಿಲೋ ಮಾಡಿ ಪೂರ್ಣ ಕಾಮಗಾರಿ ಮುಗಿಸಿದಾಗ 30 ಸಾವಿರ ಸಹಾಯಧನ ಬಿಡುಗಡೆ ಮಾಡುವ ಮೂಲಕ ನಾಲ್ಕು ಹಂತದಲ್ಲಿ ಫಲಾನುಭವಿ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಆದರೆ ಎರಡು ಹಂತದ ಕಾಮಗಾರಿ ಮುಕ್ತಾಯವಾದರೂ ಬಿಡಿಗಾಸು ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ ಮನೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಸರ್ಕಾರ ನಂಬಿ ಸಾಲಗಾರರಾದರು: ಸರ್ಕಾರವೇ ಅರ್ಥಿಕವಾಗಿ ಹಿಂದುಳಿದವರು ಎಂದು ಸೂಚಿಸಿದ ಫಲಾನುಭವಿಗಳು ಸೂರು ನಿರ್ಮಿಸಿಕೊಳ್ಳಲು ಇನ್ನೊಬ್ಬರ ಬಳಿ ಕೈಚಾಚಿ ಸಾಲಮಾಡಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದು ಸಾವಿರಾರು ಬಡಕುಟುಂಬ ಬೀದಿಗೆ ಬರುವಂತಾಗಿವೆ. ಅದು ಸರ್ಕಾರವನ್ನು ನಂಬಿ ಸಾಲಗಾರರಾಗಿರುವುದು ವಿಪರ್ಯಾಸದ ಸಂಗತಿ.
ಬಡ್ಡಿ ಸಾಲಕ್ಕೆ ಮೊರೆ: ಸರ್ಕಾರದಿಂದ ಬಿಡುಗಡೆ ಆಗಬೇಕಿದ್ದ ಸಹಾಯಧನ ಸಕಾಲಕ್ಕೆ ಬಿಡುಗಡೆ ಆಗದೆ ಇರುವುದರಿಂದ ಕೈ ಸಾಲಮಾಡಿದ ಹಣಕ್ಕೆ ಹಲವು ಮಂದಿ ಫಲಾನುಭವಿಗಳು ಬಡ್ಡಿತೆತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಬ್ಬಿಣ, ಮರಳು, ಇಟ್ಟಿಗೆ, ಸಿಮೆಂಟ್, ಜಲ್ಲಿ ಹೀಗೆ ಸಾಮಗ್ರಿಯನ್ನು ಸಾಲದಲ್ಲಿ ತಂದು ಮನೆ ನಿರ್ಮಿಸಿಕೊಳ್ಳಲು ಕಡುಬಡವರು ಮುಂದಾದರು. ಈಗ ಸಾಲ ನೀಡಿದವರು ಮನೆ ಬಾಗಿಲಿಗೆ ಬರುತ್ತಿರುವುದರಿಂದ ಮಾನ ಉಳಿಸಿಕೊಳ್ಳಲು ವಿಧಿ ಇಲ್ಲದೆ ಬಡ್ಡಿ ಸಾಲದ ಮೊರೆ ಹೋಗುತ್ತಿದ್ದಾರೆ.
Advertisement
ತಾಲೂಕಿನ ಆರು ಹೋಬಳಿಯ 41 ಗ್ರಾಪಂನಿಂದ ಬಸವ ವಸತಿ ಯೋಜನೆ, ಇಂದಿರಾ ಅವಾಸ್, ರಾಜೀವ್ ಗಾಂಧಿ ವಸತಿ ಯೋಜನೆ, ವಿಶೇಷ ಅಭಿವೃದ್ಧಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಬಸವರ ಹೆಚ್ಚವರಿ ಯೋಜನೆ ಹೀಗೆ ಅನೇಕ ಯೋಜನೆಯಲ್ಲಿ ಸೂರಿಲ್ಲದವರು ಮನೆ ನಿರ್ಮಾಣಕ್ಕೆ ಸರ್ಕಾರವನ್ನು ನಂಬಿಕೊಂಡು ಈಗ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ.
Related Articles
Advertisement
ಪುರಸಭೆವ್ಯಾಪ್ತಿಗೂ ಅನುದಾನವಿಲ್ಲ: ಪುರಸಭೆ ವ್ಯಾಪ್ತಿಯ 27 ವಾರ್ಡ್‌ಗಳಿಂದ ಕಳೆದ ಸಾಲಿನಲ್ಲಿ ಸುಮಾರು 70 ಫಲಾನುಭವಿಗಳ ಪೈಕಿ 50 ಮಂದಿಗೆ ಅನುದಾನ ಬಿಡುಗಡೆಯಾಗಿದ್ದು ಉಳಿದ 20 ಮಂದಿಗೆ ಅನುದಾನ ನೀಡಿಲ್ಲ, ಪ್ರಸಕ್ತ ಸಾಲಿನಲ್ಲಿ ಸುಮಾರು 277 ಮಂದಿ ಮನೆ ನಿರ್ಮಾಣ ಮಾಡಿಕೊಳ್ಳುವುದಾಗಿ ಅರ್ಜಿ ನೀಡಿದ್ದು ಪುರಸಭೆ ಅಧಿಕಾರಿಗಳು ಪರಿಶೀಲಿಸಿ ಜಿಲ್ಲಾಧಿಕಾರಿ ಕಚೇರಿಗೆ ರವಾನೆ ಮಾಡಿದ್ದಾರೆ.
ಜಿಲ್ಲಾಡಳಿತ ಚುನಾವಣೆ ಬ್ಯುಸಿ: ಸೂರಿಲ್ಲದವರು ಮಳೆಗಾಲದ ಒಳಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಅರ್ಜಿ ನೀಡಿದ್ದು ಇದುವರೆಗೆ ಜಿಲ್ಲಾಡಳಿತದಿಂದ ನಿರ್ಮಾಣ ಮಾಡಿಕೊಳ್ಳಲು ಆದೇಶ ನೀಡಿಲ್ಲ, ಈಗ್ಗೆ ಎರಡು ವರ್ಷದ ಹಿಂದೆ 43 ಮಂದಿ ಫಲಾನುಭವಿಗಳಲ್ಲಿ 25 ಮಂದಿ ಮಾತ್ರ ಮನೆ ನಿರ್ಮಿಸಿದ್ದಾರೆ. ಉಳಿದ 18 ಮಂದಿಗೆ ಈ ವರ್ಷವೂ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಸಕಾಲಕ್ಕೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ ಈ ವೇಳೆಯಲ್ಲಿ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಇರುವುದರಿಂದ ವಸತಿ ಯೋಜನೆಯ ಫಲಾನುಭವಿಗಳಿಗೆ ಸಹಾಯ ಧನ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುದಾನದ ಕೊರತೆ:
ಪುರಸಭೆ ವ್ಯಾಪ್ತಿಯಲ್ಲಿ ಎಸ್‌ಸಿ ಎಸ್‌ಟಿ ಜನಾಂಗದ ವಸತಿ ಫಲಾನುಭವಿಗಳು ಈಗಾಗಲೆ ಶೇ.80 ಮನೆ ಕಾಮಗಾರಿ ಮುಗಿಸಿದ್ದರೂ, ಸರ್ಕಾರದಿಂದ ಬಿಡಿಗಾಸು ಬಂದಿಲ್ಲ, ರಾಜ್ಯ ಸರ್ಕಾರ 1.80 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರ 1.50 ಲಕ್ಷ ರೂ. ಅನುದಾನ ನೀಡಬೇಕಿದೆ. ರಾಜಿವಗಾಂಧಿ ಗ್ರಾಮೀಣ ವಸತಿ ಯೋಜನಾ ನಿಗಮಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನೀಡಿದ ಮೇಲೆ ಎಸ್‌ಸಿ ಎಸ್‌ಟಿ ಫಲಾನುಭವಿಗಳ ಖಾತೆಗೆ ನೇರವಾಗಿ ಸಹಾಯ ಧನ ಜಮೆಯಾಗಲಿದೆ ಆದರೆ ಕಳೆದ ಎರಡು ವರ್ಷದಿಂದ ಸಮಾಜ ಕಲ್ಯಾಣ ಇಲಾಖೆ ಸಹಾಯ ಧನ ಬಿಡುಗಡೆ ಮಾಡದೆ ಅನುದಾನದ ಕೊರತೆಯ ಕುಂಟು ನೆಪ ಹೇಳುತ್ತಿದೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ