ಬಾಗಲಕೋಟೆ: ಐತಿಹಾಸಿಕ ಮುಚಖಂಡಿ ಕೆರೆ ಹಾಗೂ ಗ್ರಾಮವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರವೇ ಬಜೆಟ್‌ನಲ್ಲಿ ಘೋಷಿಸಿ, ನಾಲ್ಕು ವರ್ಷ ಕಳೆದರೂ ಈವರೆಗೆ ಮಂಜೂರಾತಿ ದೊರೆತಿಲ್ಲ. ಹೀಗಾಗಿ ಜಿಲ್ಲೆಯ ಮಹತ್ವದ ಯೋಜನೆ ಸರ್ಕಾರದಲ್ಲಿ ಧೂಳು ತಿನ್ನುತ್ತಿದೆ ಎಂಬ ಅಸಮಾಧಾನ ಕೇಳಿ ಬಂದಿದೆ.
ಏನಿದು ಯೋಜನೆ: 0.58 ಟಿಎಂಸಿ ನೀರು ಸಂಗ್ರಹ, 721 ಎಕರೆ ವಿಸ್ತಾರ ಹೊಂದಿರುವ ಮುಚಖಂಡಿ ಕೆರೆ ತುಂಬಿಸಲು 12.40 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಿದ್ದು, ಈಗಾಗಲೇ ಕೆರೆ ತುಂಬಿಸಲು ಆರಂಭಿಸಲಾಗಿದೆ. ಇದರ ಉಳಿಕೆ ಹಣದಲ್ಲಿ ಕೆರೆಯ ಎರಡೂ ಬದಿಗೆ ತಲಾ 1 ಕಿ.ಮೀ ವರೆಗೆ ವಾಯುವಿಹಾರ ಪಥ ನಿರ್ಮಿಸಲಾಗಿದೆ. ಕೆರೆಯಂಗಳ ತುಂಬಿಕೊಂಡರೆ, ವಿಶಾಲವಾಗಿ ಹರಡಿಕೊಂಡ ನೀರು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಕೆರೆಗೆ ಬಣ್ಣ ಬಣ್ಣದ ವಿದ್ಯುತ್ ಅಲಂಕಾರ, ಸಂಗೀತ ಕಾರಂಜಿ, ಕೆರೆಯಂಗಳದಲ್ಲಿ ಬೋಟಿಂಗ್ ಪ್ರಯಾಣ, ಅಲ್ಲದೇ 1882ರಲ್ಲಿ ಅದ್ಭುತ ನಿರ್ಮಾಣದ ಮೂಲಕ ಗಮನ ಸೆಳೆಯುವ ಕೆರೆಯ ಸುತ್ತಲಿನ ಪರಿಸರವನ್ನು ಮಕ್ಕಳ ಉದ್ಯಾನವನ, ಈಗಾಗಲೇ ಇರುವ ವೀರಭದ್ರೇಶ್ವರ ದೇವಸ್ಥಾನದ ಜತೆಗೆ, ಕೆರೆಯ ಬಳಿ 80 ಅಡಿ ಎತ್ತರದ ಶಿವನಮೂರ್ತಿ ನಿರ್ಮಿಸಿ, ಭಕ್ತಿಯ ತಾಣವನ್ನಾಗಿ ಮಾಡುವ ಯೋಜನೆ ಒಳಗೊಂಡಿದೆ. ಒಟ್ಟು ಎ ದಿಂಡ ಡಿ ವಿಭಾಗಗಳು ಮಾಡಿಕೊಂಡು ನಾಲ್ಕು ಭಾಗದಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದರಲ್ಲಿದೆ.
ನಾಲ್ಕು ವರ್ಷದಿಂದ ಧೂಳು: ಕಳೆದ 2015ರಲ್ಲಿ ರಾಜ್ಯ ಸರ್ಕಾರವೇ, ಮುಚಖಂಡಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಬಳಿಕ, ಜಿಲ್ಲಾಡಳಿತ ಒಟ್ಟು ರೂ. 9,03,70,000 ಮೊತ್ತದ ಸಮಗ್ರ ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಿತ್ತು. ಪ್ರವಾಸೋದ್ಯಮ ಇಲಾಖೆಯಿಂದ 2017ರಲ್ಲಿ ಮಂಜೂರಾತಿ ಹಂತದಲ್ಲೂ ಈ ಯೋಜನೆ ಬಂದಿತ್ತು. ಆದರೆ, ಬಳಿಕ ಏನಾಯಿತೋ ಗೊತ್ತಿಲ್ಲ. ಯೋಜನೆ ನನೆಗುದಿದೆ ಬಿದ್ದಿದೆ. ಬಳಿಕ ಈ ಯೋಜನೆಗೆ ಮಂಜೂರಾತಿ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಪ್ರಯತ್ನಿಸಿಲ್ಲ ಎಂಬ ಮಾತು ಕೇಳಿ ಬಂದಿದೆ.
Advertisement
ಹೌದು, ನಗರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಮುಚಖಂಡಿ ಗ್ರಾಮ ಹಲವು ವಿಶೇಷತೆಗಳಿಂದ ಜಿಲ್ಲೆಯ ಜನರ ಗಮನ ಸೆಳೆದಿದೆ. ವರ್ಷದಲ್ಲಿ ಎರಡು ವೀರಭದ್ರೇಶ್ವರ ರಥೋತ್ಸವ, ವೀರಭದ್ರೇಶ್ವರ ಜಾತ್ರೆ ಇಲ್ಲಿ ನಡೆಯುತ್ತಿದ್ದು, ಬ್ರಿಟಿಷರ ಕಾಲದ ಬೃಹತ್ ಕೆರೆ ಇಲ್ಲಿದೆ. ಇಂತಹ ಐತಿಹಾಸಿಕ ಬೃಹತ್ ಕೆರೆಯಂಗಣ ಪ್ರವಾಸಿ ತಾಣವನ್ನಾಗಿ ಮಾಡಲು ಜಿಲ್ಲಾಡಳಿತ ವಿಸೃತ ಯೋಜನೆ ರೂಪಿಸಿ, ಸರ್ಕಾರಕ್ಕೆ ಸಲ್ಲಿಸಿ, ಈಗ ಬರೋಬ್ಬರಿ ನಾಲ್ಕು ವರ್ಷವಾಗಿವೆ. ಆದರೂ, ಸರ್ಕಾರ ಯೋಜನೆಗೆ ಮಂಜೂರಾತಿ ನೀಡಿಲ್ಲ.
Related Articles
ಪರಿಶೀಲಿಸಿ ಕ್ರಮ:
ಮುಚಖಂಡಿ ಕೆರೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಕುರಿತು ನನಗೆ ಪೂರ್ಣ ಮಾಹಿತಿ ಇಲ್ಲ. ಕೂಡಲೇ ಆ ಕುರಿತು ಪರಿಶೀಲಿಸಿ, ಯೋಜನೆ ಯಾವ ಹಂತದಲ್ಲಿದೆ, ಎಲ್ಲಿ ವಿಳಂಬವಾಗಿದೆ ಎಂಬುದರ ಕುರಿತು ಮಾಹಿತಿ ಪಡೆದು, ಸರ್ಕಾರದ ಗಮನಕ್ಕೆ ತರಲಾಗುವುದು. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. •ಆರ್. ರಾಮಚಂದ್ರನ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು
•ಶ್ರೀಶೈಲ ಕೆ. ಬಿರಾದಾರ
Advertisement