Advertisement

ಕ್ಷೀರ ಭಾಗ್ಯ ಯೋಜನೆ ಜಾರಿಗೆ ಗ್ರಹಣ: ಮಕ್ಕಳಿಗೆ ತಣ್ಣೀರೇ ಗತಿ

11:13 AM Jul 07, 2018 | Team Udayavani |

ವಾಡಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳುಗಳೇ ಕಳೆದಿದ್ದು, ಸರಕಾರಿ ಶಾಲೆಗಳಲ್ಲಿ ಕ್ಷೀರ ಭಾಗ್ಯ ಯೋಜನೆ ಜಾರಿಗೆ ಗ್ರಹಣ ಬಡೆದಿದೆ. ಬಿಸಿ ಹಾಲು ಕುಡಿದು ಪಾಠ ಕೇಳಲು ಅಣಿಯಾಗುತ್ತಿದ್ದ ಮಕ್ಕಳ ಹೊಟ್ಟೆಗೆ
ತಣ್ಣೀರೇ ಗತಿಯಾಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸೇರಿದಂತೆ ನಾಲವಾರ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ತಿಂಗಳಿಂದ ತಾಲೂಕಿನಾಧ್ಯಂತ ಮಕ್ಕಳಿಗೆ ಹಾಲು ವಿತರಣೆಯಾಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

Advertisement

ಈ ಕುರಿತು ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಕೆಎಂಎಫ್‌ ನಿಂದ ಪ್ರಸಕ್ತ ಸಾಲಿನ ಹಾಲಿನ ಪೌಡರ್‌ ಟೆಂಡರ್‌ ಪ್ರಕ್ರಿಯೇ ಆರಂಭವಾಗಿಲ್ಲ. ಆದ್ದರಿಂದ ಕ್ಷೀರ ಭಾಗ್ಯಕ್ಕೆ ಕೊಕ್ಕೆ ಬಿದ್ದಿದೆ ಎನ್ನುವ ಸಂಗತಿ ಬಯಲಾಗಿದೆ. ಶಾಲೆಗೆ ತಳಿರು ತೋರಣ ಕಟ್ಟಿ, ಅಂಗಳದಲ್ಲಿ ರಂಗೋಲಿ ಹಾಕಿಸಿ, ಸಿಹಿ ಹಂಚುವ ಮೂಲಕ ಜೂನ್‌ ತಿಂಗಳ ಮೊದಲ ದಿನ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡ ಶಿಕ್ಷಣ ಇಲಾಖೆ ಬಟ್ಟೆ, ಊಟ, ಪುಸ್ತಕಗಳನ್ನು ಕೊಟ್ಟು ಕ್ಷೀರ ಭಾಗ್ಯ ಕಸಿದುಕೊಂಡಿದೆ. 

ರಾಷ್ಟ್ರಗೀತೆ ನಂತರ ಸಾಲು ಸಾಲಾಗಿ ನಿಂತು ಬಿಸಿಯಾದ ಕೆನೆಹಾಲು ಗಂಟಲಿಗಿಳಿಸುತ್ತಿದ್ದ ಮಕ್ಕಳ ಹೊಟ್ಟೆಗೀಗ ತಣ್ಣೀರೇಗತಿ ಎನ್ನುವಂತೆ ಆಗಿದೆ. ಶಿಕ್ಷಕರು ಹಾಗೂ ಅಡುಗೆಯವರು ತಿಂಗಳಿಂದ ಹಾಲು ನೀಡುವ ಮಾತೇ ಆಡದಿರುವ ಕಾರಣಕ್ಕೆ ಚಿಂತಾಕ್ರಾಂತರಾಗಿರುವ ವಿದ್ಯಾರ್ಥಿಗಳು, ಬಿಸಿಯೂಟ ಕೋಣೆಯ ಹಾಲಿನ ಕಡಾಯಿಯತ್ತ ನೋಡುತ್ತಿದ್ದಾರೆ. ಬಡ ಮಕ್ಕಳ ದೇಹಕಂಟಿದ ಅಪೌಷ್ಟಿಕತೆ ನಿವಾರಣೆಗೆ ಮುಂದಾದ ಸರಕಾರ, ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮಹತ್ವದ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಿದೆ. ಆದರೆ, ಅದನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದು, ಮಕ್ಕಳ ಹೊಟ್ಟೆಯ ಮೇಲೆ ಸರಕಾರವೇ ಬರೆ ಎಳೆದಂತಾಗಿದೆ. ಒಂದನ್ನು ಕೊಟ್ಟು ಮತ್ತೂಂದನ್ನು ಕಸಿಯುವ ಸರಕಾರದ ನೀತಿಯ ವಿರುದ್ಧ ಪೋಷಕರು ಮತ್ತು ಶಿಕ್ಷಣಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಂಎಫ್‌ನಿಂದ ಜಿಲ್ಲಾ ಮಟ್ಟದಲ್ಲಿ ನಡೆಯಬೇಕಿರುವ ಹಾಲಿನ ಪೌಡರ್‌ ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದೆ. ಪರಿಣಾಮ ತಾಲೂಕಿನ ಶಾಲೆಗಳಿಗೆ ತಿಂಗಳಿಂದ ಹಾಲಿನ ಪೌಡರ್‌ ವಿತರಣೆ ಮಾಡಲಾಗಿಲ್ಲ. ಪರಿಣಾಮ ಕ್ಷೀರ ಭಾಗ್ಯ ಯೋಜನೆ ಜಾರಿಯಲ್ಲಿ ತೊಡಕಾಗಿದೆ. ಮಕ್ಕಳಿಗೆ ನೀಡಬೇಕಿದ್ದ ಬಿಸಿಯಾದ ಕೆನೆ ಹಾಲು ಸ್ಥಗಿತಗೊಂಡಿದೆ. ಈ ಕುರಿತು ಮೇಲಾಧಿ ಕಾರಿಗಳು ಚರ್ಚೆ ಮಾಡುತ್ತಿದ್ದಾರೆ. ಒಂದೆರೆಡು ವಾರದಲ್ಲಿ ಶಾಲೆಗಳಿಗೆ ಹಾಲಿನ ಪೌಡರ್‌ ಹಂಚಿಕೆಯಾಗುವ ಸಾಧ್ಯತೆಯಿದೆ.
ಶಂಕರ ತೇಲಕರ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಯೋಜನೆ

ತಾಲೂಕಿನ ಪ್ರತಿ ಶಾಲೆಗೆ ಸಮವಸ್ತ್ರ, ಪಠ್ಯಪುಸ್ತಕ ಸಮರ್ಪಕವಾಗಿ ವಿತರಣೆಯಾಗಿದೆ. ಬಿಸಿಯೂಟ ಯೋಜನೆಗೆ ಯಾವುದೇ ತೊಂದರೆಯಿಲ್ಲ. ಜುಲೈ ತಿಂಗಳ ಬಿಸಿಯೂಟ ದಾಸ್ತಾನು ಶೇಖರಣೆಯಾಗಿದೆ. ಕ್ಷೀರ ಭಾಗ್ಯ ಯೋಜನೆ
ವಿಳಂಬ ಸಮಸ್ಯೆ ಜಿಲ್ಲಾ ಮಟ್ಟದ್ದಾಗಿದೆ. ಈ ಕುರಿತು ಚರ್ಚಿಸಲು ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಸಭೆ ಕರೆದಿದ್ದಾರೆ. ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ.
ಶಂಕ್ರೆಮ್ಮಾ ಢವಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next