ಕಲಬುರಗಿ: ನಗರದಲ್ಲಿ ದೋಂಬಿ ಎಬ್ಬಿಸುವ ಉದ್ದೇಶದಿಂದ ಮಾರಕಸ್ತ್ರ ಹಿಡಿದು ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿ ಮುಂಬೈನಿಂದ ಇತ್ತೀಚೆಗೆ ಕಲ್ಬುರ್ಗಿಗೆ ಆಗಮಿಸಿದ್ದ ಎಂದು ಹೇಳಲಾಗುತ್ತಿದೆ. ಹೆಸರು ಹಾಗೂ ಇತರೆ ವಿಷಯಗಳ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಚೌಕ್ ಪೊಲೀಸ್ ಠಾಣೆಯ ಪಿಎಸ್ಐ ವಾಹಿದ್ ಕೋತ್ವಾಲ್ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಕ್ತಿಗೆ ಶರಣಾಗುವಂತೆ ಹಾಗೂ ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದು ಭಯದ ವಾತಾವರಣ ಉಂಟು ಮಾಡದಂತೆ ಮೊದಲು ತಿಳಿ ಹೇಳಿದರೂ, ಕೇಳದೆ ಇದ್ದಾಗ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಗಾಯಗೊಂಡಿರುವ ವ್ಯಕ್ತಿಯನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಯಾವ ಉದ್ದೇಶಕ್ಕೆ ಕಲ್ಬುರ್ಗಿ ನಗರಕ್ಕೆ ಆಗಮಿಸಿದ್ದ ಮತ್ತು ಆತನ ಹಿನ್ನೆಲೆ ಏನು ಎನ್ನುವುದು ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.