Advertisement

ಅಂಗನವಾಡಿ ಕಟ್ಟಡ ಕಾಮಗಾರಿಗೆ ಗ್ರಹಣ

07:43 AM Mar 12, 2019 | |

ಮಾಗಡಿ: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕೋಡಿಹಳ್ಳಿ ಕಾಲೋನಿಯಲ್ಲಿ ಇಷ್ಟೊತ್ತಿಗಾಗಲೇ ಅಂಗನವಾಡಿ ಕಟ್ಟಡ ಉದ್ಘಾಟನೆಯಾಗಿ ಮಕ್ಕಳಿಗೆ ಅನುಕೂಲವಾಗುತ್ತಿತ್ತು. ಆದರೆ, ಸದ್ಯದ ಸ್ಥಿತಿ ಬೇರೆಯದ್ದೇ ಆಗಿದೆ!.

Advertisement

ಮಕ್ಕಳಾಡುವ ಸ್ಥಳದಲ್ಲಿ ಕುರುಚಲು ಗಿಡಿ-ಗಂಟಿ… ಕಟ್ಟಡದ ಸುತ್ತಲೂ ದನ-ಕರುಗಳ ಅಡ್ಡೆ… ದುರ್ವಾಸನೆ ಬೀರುವ ಸ್ಥಳವಿದ್ದು ಕಳೆದ 4 ವರ್ಷಗಳಿಂದಲೂ ಕಾಮಗಾರಿ ನನೆಗುದಿಗೆ ಬಿದ್ದಿರುವುದೇ ಇಷ್ಟಕ್ಕೆಲ್ಲಾ ಕಾರಣವಾಗಿದೆ. ಅಲ್ಲದೇ, ಈ ಕುರಿತು ಅಧಿಕಾರಿಗಳು-ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

ಅಂಗನವಾಡಿ ಮಕ್ಕಳ ಶ್ರೇಯೋಭಿವೃದ್ಧಿಗೆ ಸರ್ಕಾರ ಪೌಷ್ಟಿಕಾಂಶ ಆಹಾರ, ಒದಗಿಸಿ ಕಟ್ಟಡಗಳ ದುರಸ್ಥಿ, ಕಾಮಗಾರಿ ಸೇರಿದಂತೆ ಹಲವು ಯೋಜನೆಗಳನ್ನು ಕಲ್ಪಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬೀಳುತ್ತವೆ ಎಂಬುದಕ್ಕೆ ಕೋಡಿಹಳ್ಳಿ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕಟ್ಟಡವೇ ಸಾಕ್ಷಿಯಂತಿದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ.

ಗ್ರಾಮಸ್ಥರಾದ ಲೋಕೇಶ್‌, ಚಿಕ್ಕಣ್ಣ ಮಾತನಾಡಿ, ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ತೆರದು ಮಕ್ಕಳಗೆ ಪೌಷ್ಟಿಕಾಂಶವುಳ್ಳ ಆಹಾರ, ಕಲಿಕೆ, ಪೋಷಣೆ ಮಾಡಲು ಹಲವು ಅನುಕೂಲ ಕಲ್ಪಿಸುತ್ತದೆ. ಆದರೆ, ಕೋಡಿಹಳ್ಳಿ ಕಾಲೋನಿ ಮಕ್ಕಳಿಗೆ ಅಂಗನವಾಡಿ ಕಟ್ಟಡದ ವಿಚಾರದಲ್ಲಿ ದೌರ್ಭಾಗ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ 4-5 ವರ್ಷಗಳಿಂದ ಕಟ್ಟಡ ಪೂರ್ಣಗೊಳಿಸದ ಕಾರಣ ಕಟ್ಟಡದ ಒಳ ಹಾಗೂ ಹೊರ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ಆದರೆ, ಸಂಬಂಧಪಟ್ಟ ಸಿಡಿಪಿಒ ಆಗಲಿ, ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ದೂರಿದ್ದಾರೆ.

Advertisement

ರೈತ ಸಂಘದ ಅಧ್ಯಕ್ಷ ಲೋಕೇಶ್‌ ಮಾತನಾಡಿ, ಕನಿಷ್ಟ ಎಂದರೂ ಒಂದು ಅಂಗನವಾಡಿ ಕಟ್ಟಲು ಸರ್ಕಾರ 10 ರಿಂದ 12 ಲಕ್ಷದವರೆಗೂ ನೀಡುತ್ತದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಹಾಗೂ ಇಂತಿಷ್ಟು ಅವಧಿಯಲ್ಲಿ ಕಟ್ಟಡ ಪೂರ್ಣಗೊಳಿಸಿ ಪಂಚಾಯ್ತಿಗೆ ನೀಡುವಂತೆ ಗುತ್ತಿಗೆದಾರರಿಗೆ ಆದೇಶ ಮಾಡಿ ಟೆಂಡರ್‌ ನೀಡಿರುತ್ತದೆ. ಟೆಂಡರ್‌ ಪಡೆದ ಗುತ್ತಿಗೆದಾರರು ಕಟ್ಟಡ ಪೂರ್ಣಗೊಳಿಸದೆ ಹಣ ದುರುಪಯೋಗಪಡಿಸಿಕೊಂಡಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಟ್ಟಡ ಪೂರ್ಣಗೊಳಿಸಲು ಸೂಚನೆ ನೀಡಲ್ಲ. ಇದು ಹಣ ದುರುಪಯೋಗಕ್ಕೆ ಅನುಮಾನಕ್ಕೆಡೆ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ. 

ಸಂಬಂಧಪಟ್ಟ ಇಒ, ಸಿಡಿಪಿಒ ಮತ್ತು ಪಿಡಿಒಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಜಿಪಂಗೆ ವರದಿ ನೀಡಬೇಕಿದೆ. 3-4 ವರ್ಷಗಳಿಂದ ಅಂಗನವಾಡಿ ಕಟ್ಟಡ ಪೂರ್ಣಗೊಳಿಸದೆ ಇರುವ ಗುತ್ತಿಗೆದಾರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕಿದೆ. ಆದರೆ, ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನಾದರೂ ಎಚ್ಚೆತ್ತುಕೊಂಡು ಮೇಲಧಿಕಾರಿಗಳು ಗಮನಹರಿಸಿ  ಗ್ರಾಮೀಣ ಮಕ್ಕಳಿಗೆ ಪೂರಕವಾಗಿ ಗುತ್ತಿಗೆದಾರರನ್ನು ಕರೆಸಿ ಕಟ್ಟಡ ಪೂರ್ಣಗೊಳಿಸಲು ಮುಂದಾಗಬೇಕು. ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ, ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

* ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next