Advertisement

ವಿಮಾನ ನಿಲ್ದಾಣ ಭೂಮಿ ಪೂಜೆಗೆ ಗ್ರಹಣ

05:48 PM Jan 13, 2022 | Team Udayavani |

ರಾಯಚೂರು: ಜಿಲ್ಲೆಯ ಜನರಿಗೆ ಆಗಸದಲ್ಲಿ ಹಾರಾಡುವ ಕನಸು ತೋರಿಸಿದ ಸರ್ಕಾರ ಈಗ ಬರೀ ಮಾತಿನಲ್ಲೇ ವಿಮಾನ ಹಾರಿಸುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.

Advertisement

ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ಈವರೆಗೂ ಶಂಕುಸ್ಥಾಪನೆ ನೆರವೇರದಿರುವುದು ಜಿಲ್ಲೆಯ ಜನರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಸಮೀಪದ ಏಗನೂರು ಹತ್ತಿರ 400 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಎರಡು ಜಿಲ್ಲೆಗಳಿಗೆ ಒಂದರಂತೆ ವಿಮಾನ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದ್ದಾಗಿ ಹೇಳಿದ್ದ ಸರ್ಕಾರ, ಕಲಬುರಗಿ ಬಳಿಕ ರಾಯಚೂರಿನಲ್ಲಿ ಸ್ಥಾಪಿಸುವುದಾಗಿ ತಿಳಿಸಿತ್ತು. ಅದರಂತೆ ಈಗಾಗಲೇ ಸಾಕಷ್ಟು ಪೂರಕ ಬೆಳವಣಿಗೆಗಳು ನಡೆದಿದ್ದವು. ಸ್ಥಳ ಪರಿಶೀಲನೆ ನಡೆಸಿದ ಏರ್‌ ಪೋರ್ಟ್‌ ಅಥಾರಿಟಿ ಕೂಡ ಹಸಿರು ನಿಶಾನೆ ತೋರಿತ್ತು. ಇನ್ನೂ ಸರ್ವೇ ಕಾರ್ಯಗಳು ಮಾಡಲಾಗಿದ್ದು, ಗಡಿ ಗುರುತು ಕಾರ್ಯ ಬಹುತೇಕ ಮುಗಿದಿದೆ. ಆದರೆ, ಈವರೆಗೂ ಶಂಕುಸ್ಥಾಪನೆ ಕಾರ್ಯ ನಡೆದಿಲ್ಲ.

ಸೆ.17ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಮಿಪೂಜೆ ನೆರವೇರಿಸಲಾಗುವುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅದಾಗಿ ನಾಲ್ಕು ತಿಂಗಳಾಗುತ್ತ ಬಂದರೂ ಈ ಬಗ್ಗೆ ಯಾವುದೇ ಬೆಳವಣಿಗೆ ಕಂಡು ಬರುತ್ತಿಲ್ಲ. ವಿಪರ್ಯಾಸ ಎಂದರೆ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಕೂಡ ಈ ಬಗ್ಗೆ ಚಕಾರ ಎತ್ತಲಿಲ್ಲ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಕೂಡ ನೀಡದೆ ನುಣುಚಿಕೊಂಡ ಅವರು, ಶಾಸಕ ಕೆ.ಶಿವನಗೌಡ ನಾಯಕರಿಗೆ ಉತ್ತರಿಸುವಂತೆ ತಿಳಿಸಿದರು.

ಸರ್ಕಾರದಿಂದ ಬಂದಿಲ್ಲ ಹಣ

Advertisement

ಏಗನೂರು ಸಮೀಪ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 48 ಕೋಟಿ ರೂ. ನೀಡಲಾಗಿದೆ. ಅದು ಬಿಟ್ಟರೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಆದರೆ, ಏರ್‌ಪೋರ್ಟ್‌ ನಿರ್ಮಾಣಕ್ಕೆ 200 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಿದ್ದು, ಹೆಚ್ಚುವರಿ ಹಣಕ್ಕಾಗಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತೊಂದು ಪ್ರಹಸನ ನಡೆಸಬೇಕಿದೆ ಎಂಬ ಮಾಹಿತಿಯನ್ನು ಶಾಸಕರೇ ಬಿಚ್ಚಿಟ್ಟಿದ್ದಾರೆ.

ಒತ್ತುವರಿ ತೆರವು ಸವಾಲು

ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಸ್ಥಳವನ್ನು ಮತ್ತೊಮ್ಮೆ ಸರ್ವೇ ಮಾಡಿದ್ದು, ಸಾಕಷ್ಟು ಸ್ಥಳ ಒತ್ತುವರಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅದರಲ್ಲಿ ಕೆಲವರು ಕೃಷಿ ಮಾಡಿಕೊಂಡಿದ್ದರೆ, ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆ ಸ್ಥಳ ತೆರವುಗೊಳಿಸುವ ಸವಾಲು ಜಿಲ್ಲಾಡಳಿತದ ಮುಂದಿದೆ. ಅಲ್ಲದೇ, ಈಗಿರುವ ಸ್ಥಳವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಸುತ್ತಲೂ ತಡೆಗೋಡೆ ನಿರ್ಮಿಸಬೇಕಿದೆ. ಏಗನೂರು ಗ್ರಾಮಸ್ಥರು ನಮ್ಮ ಊರನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕು ಎಂಬ ಬೇಡಿಕೆ ಒಡ್ಡಿದ್ದಾರೆ. ಹೀಗೆ ಅನೇಕ ಸವಾಲುಗಳು ಕೂಡ ಜಿಲ್ಲಾಡಳಿತದ ಮುಂದಿವೆ.

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಕೆಕೆಆರ್‌ಡಿಬಿಯಿಂದ 48 ಕೋಟಿ ರೂ. ನೀಡಲಾಗಿದೆ. ಸಂಪೂರ್ಣ ಕಾಮಗಾರಿ ಮುಗಿಯಲು 200 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಕೆಕೆಆರ್‌ಡಿಬಿಗೆ ಸರ್ಕಾರ ನೀಡುವ 1500 ಕೋಟಿಯಲ್ಲಿ ಮುಖ್ಯಮಂತ್ರಿಗಳ ವಿವೇಚನಾ ನಿಧಿ 75 ಲಭ್ಯವಾಗಲಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಿಎಂ ಅವರನ್ನು ಭೇಟಿಯಾಗಿ ಆ ಹಣ ಒದಗಿಸುವಂತೆ ಮನವೊಲಿಸಬೇಕಿದೆ. ಕೋವಿಡ್‌-19 ಕಾರಣಕ್ಕೆ ವಿಳಂವಾಗುತ್ತಿದೆ. ನಮಗೂ ಜಿಲ್ಲೆಯಲ್ಲಿ ವಿಮಾನ ಹಾರಿಸಬೇಕು ಎಂಬ ಆಸೆ ಇದೆ. -ಕೆ.ಶಿವನಗೌಡ ನಾಯಕ, ದೇವದುರ್ಗ ಶಾಸಕ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next