Advertisement
ಮಹಾನಗರದ ಘನತ್ಯಾಜ್ಯ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಸಮಗ್ರ ಘನತ್ಯಾಜ್ಯ ವಿಲೇವಾರಿ ಯೋಜನೆ ರೂಪಿಸಿದೆ. ಹುಬ್ಬಳ್ಳಿಯಲ್ಲಿ 4 ಹಾಗೂ ಧಾರವಾಡದಲ್ಲಿ 2 ಕಾಂಪ್ಯಾಕ್ಟ್ ಸ್ಟೇಶನ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಸ್ಟೇಶನ್‌ಗಳಲ್ಲಿರುವ ಕಂಟೇನರ್‌ಗಳಿಗೆ ಕಸ ಸುರಿಯುವುದರಿಂದ ಎಲ್ಲ ಟಿಪ್ಪರ್‌ಗಳು ಅಂಚಟಗೇರಿ ಕಸಮಡ್ಡಿಗೆ ಹೋಗುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿಯುತ್ತದೆ ಎಂಬುದು ಯೋಜನೆ ಪ್ರಮುಖ ಉದ್ದೇಶವಾಗಿದೆ.
ಎಲ್ಲೆಲ್ಲಿ ಹೇಗೆ ಸಾಗಿದೆ?: ಮಹಾನಗರ ವ್ಯಾಪ್ತಿಯಲ್ಲಿ ನಿರ್ಧರಿಸಿದ್ದ 6 ಕಾಂಪ್ಯಾಕ್ಟ್ ಸ್ಟೇಶನ್‌ಗಳ ಪೈಕಿ ಇಂದಿರಾ ನಗರದ 11ನೇ ವಲಯ ಕಚೇರಿ ಆವರಣ ಹಾಗೂ ಉಣಕಲ್ಲನಲ್ಲಿ ನಿರ್ಮಾಣವಾಗಿದ್ದು, ಪ್ರಾಯೋಗಿಕ ಕಾರ್ಯಾರಂಭವಾಗಿದೆ. ಉಳಿದಂತೆ ಬೆಂಗೇರಿಯ ಚಿಕ್ಕು ಹಣ್ಣಿನ ತೋಟದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆಯಾದರೂ ಸದ್ಯಕ್ಕೆ ಸ್ಥಗಿತಗೊಂಡಿದೆ. ನಂದಿನಿ ಲೇಔಟ್‌ನಲ್ಲಿ ನಿರ್ಮಾಣಕ್ಕೆ ಜನರು ಸುತಾರಾಂ ಒಪ್ಪದ ಕಾರಣ ಕಾಮಗಾರಿ ಆರಂಭವಾಗಿಲ್ಲ. ಧಾರವಾಡ ಕಲ್ಯಾಣನಗರದಲ್ಲಿ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಇನ್ನೂ ಮೀನು ಮಾರುಕಟ್ಟೆಯಲ್ಲಿ ನಿರ್ಮಿಸಲು ನಿರ್ಧರಿಸಿದ್ದ ಸ್ಥಳ ಸೂಕ್ತವಾಗಿಲ್ಲ. ಇತ್ತೀಚೆಗೆ ಗುರುತಿಸಿದ ಸ್ಥಳ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಅನುಮತಿ ನೀಡದ ಪರಿಣಾಮ ಮತ್ತೂಂದು ಸ್ಥಳದ ಹುಡುಕಾಟದಲ್ಲಿದ್ದಾರೆ. ಅಧಿಕಾರಿಗಳು ಗುರುತಿಸಿ ಸ್ಥಳಗಳೆಲ್ಲವೂ ಪಾಲಿಕೆ ಒಡೆತನದಲ್ಲಿದ್ದರೂ ಸುತ್ತಲಿನ ಜನರ ವಿರೋಧವಿದೆ.
• ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಹುಸಿ
• ಅವಳಿ ನಗರದಲ್ಲಿ ಆರರಲ್ಲಿ ಎರಡು ಮಾತ್ರ ಪೂರ್ಣ
• 2 ಕೇಂದ್ರ ಆರಂಭವೇ ಇಲ್ಲ; ಇನ್ನೆರಡು ಅರ್ಧಚಂದ್ರ
• ನೈರ್ಮಲ್ಯ ಕೊರತೆ ಶಂಕೆ; ಜನ ವಿರೋಧಕ್ಕೆ ಕಾರಣ
• ಕೆಲವೆಡೆ ಜನಪ್ರತಿನಿಧಿಗಳಿಂದಲೂ ಅಪಸ್ವರದ ಮಾತು
ಜನರ ವಿರೋಧ ಯಾಕೆ?: ಯೋಜನೆ ಅನುಷ್ಠಾನ ಹಾಗೂ ಆರಂಭದಲ್ಲಿ ತೋರುವ ಆಸಕ್ತಿ ನಂತರದಲ್ಲಿ ಪಾಲಿಕೆ ಅಧಿಕಾರಿಗಳಲ್ಲಿ ಇರುವುದಿಲ್ಲ ಎನ್ನುವ ಭಯ ಜನರಲ್ಲಿದೆ. ಕಾಂಪ್ಯಾಕ್ಟ್ ಸ್ಟೇಶನ್‌ಗಳು ನಿರ್ಮಾಣವಾಗುವುದರಿಂದ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ, ಸ್ವಚ್ಛತೆ ಕೊರತೆ, ವಿವಿಧ ಕಾಯಿಲೆ ಭೀತಿ ಜನರಲ್ಲಿದೆ. ಸ್ವಚ್ಛತೆಗೆ ಪಾಲಿಕೆ ಅಷ್ಟೊಂದು ಒತ್ತು ನೀಡುತ್ತಿಲ್ಲ. ಆರಂಭದಲ್ಲಿ ಅಷ್ಟೇನು ಸಮಸ್ಯೆಯಾಗದಿದ್ದರೂ ಮುಂದೆ ಈ ಸ್ಟೇಶನ್ ಸುತ್ತಮುತ್ತ ಜೀವನ ನಡೆಸುವುದು ದುಸ್ತರವಾಗಲಿದೆ. ಸ್ಟೇಶನ್ ಇದ್ದರೆ ವಾಣಿಜ್ಯ ಕಟ್ಟಡಗಳಿಗೆ ನಿರೀಕ್ಷಿತ ಬಾಡಿಗೆ ಬರುವುದಿಲ್ಲ ಎನ್ನುವ ಅಂಶಗಳು ಮುನ್ನೆಲೆಗೆ ಬಂದಿವೆ.
Related Articles
Advertisement
ಜನನಿಬಿಡ ಪ್ರದೇಶದಲ್ಲಿ ಸ್ಟೇಶನ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಪಾಲಿಕೆ ಅಧಿಕಾರಿಗಳು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ನಗರದ ಹೊರೆಗೆ ಸ್ಟೇಶನ್ ನಿರ್ಮಿಸಿರುವುದು ಸೂಕ್ತ.• ಪರಮೇಶಪ್ಪ ಸಿಂದಗಿ,ಬೆಂಗೇರಿ ನಿವಾಸಿ
•ಹೇಮರಡ್ಡಿ ಸೈದಾಪುರ