Advertisement

ಪ್ರತಿಧ್ವನಿಸಿದ ಶೌಚಾಲಯ ಹಗರಣ

10:14 AM Jun 25, 2019 | Suhan S |

ಚಿತ್ರದುರ್ಗ: ಶೌಚಾಲಯಗಳ ನಿರ್ಮಾಣದಲ್ಲಿ ಹಣ ದುರ್ಬಳಕೆಯಾಗಿದ್ದು, ಪ್ರಕರಣದ ತನಿಖೆಯನ್ನು ಸಿಒಡಿ ತನಿಖೆಗೆ ಒಪ್ಪಿಸುವಂತೆ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಅನೇಕ ಶಾಸಕರು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಸಮಗ್ರ ತನಿಖೆ ನಡೆಸಿ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

Advertisement

ಜಿಲ್ಲೆಯಲ್ಲಿ ನಡೆದಿರುವ ಹಲವಾರು ಹಗರಣಗಳನ್ನು ಪ್ರಸ್ತಾಪಿಸಿದ ಶಾಸಕರು ಹಾಗೂ ಜಿಪಂ ಸದಸ್ಯರು, ತನಿಖೆ ನಡೆಸುವಂತೆ ಆಗ್ರಹಿಸಿದರು. 2019ರ ಜನವರಿ 29 ರಂದು ನಡೆದ ತ್ತೈಮಾಸಿಕ ಸಭೆಯಲ್ಲಿ ರಶ್ಮಿ ಕಂಪ್ಯೂಟರ್‌ ಹಗರಣದ ತನಿಖೆ ಮಾಡಿ ವರದಿ ಸಲ್ಲಿಸಲು ಎರಡು ತಿಂಗಳ ಗಡುವು ನೀಡಲಾಗಿತ್ತು. ಐದು ತಿಂಗಳು ಕಳೆದರೂ ಜಿಲ್ಲಾಧಿಕಾರಿಯವರು ಅದರ ವರದಿ ನೀಡಿಲ್ಲ. ವರದಿ ಏನಾಯಿತು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅವರನ್ನು ಸಚಿವರು ಪ್ರಶ್ನಿಸಿದರು. ಇಂದು ಸಂಜೆಯೇ ವರದಿ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಶೌಚಾಲಯ ನಿರ್ಮಾಣ ಮಾಡದೆ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ತಾಪಂ ಇಒ, ಗ್ರಾಪಂ ಪಿಡಿಒ ಸೇರಿದಂತೆ ಮತ್ತಿತರ ಪ್ರಮುಖರ ಸಂಬಂಧಿಕರು, ಸ್ನೇಹಿತರ ಹೆಸರಲ್ಲಿ ಬಿಲ್ ಪಡೆದು ಅನುದಾನ ದುರ್ಬಳಕೆ ಮಾಡಲಾಗಿದೆ ಎಂದು ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್‌, ಪೂರ್ಣಿಮಾ ಶ್ರೀನಿವಾಸ್‌, ಸಂಸದ ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಸಭೆಯ ಗಮನ ಸೆಳೆದರು.

ಶೌಚಾಲಯ ಮುಕ್ತ ತಾಲೂಕು, ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಆದರೆ ಯಾವುದೇ ಶೌಚಾಲಯಗಳು ಪೂರ್ಣಗೊಂಡಿಲ್ಲ. ಶೌಚಾಲಯಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಶೇಖರಣೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿಗಳು ಸ್ವಚ್ಛತೆಗೆ ಒತ್ತು ನೀಡಿ ಶೌಚಾಲಯ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಿದರೆ ಇಲ್ಲಿ ಶೌಚಾಲಯವನ್ನೇ ನಿರ್ಮಾಣ ಮಾಡಿಲ್ಲ. ಹಾಗಾಗಿ ತನಿಖೆ ನಡೆಸಬೇಕು ಎಂದು ಸಂಸದರು ಪಟ್ಟು ಹಿಡಿದರು. ಇದಕ್ಕೆ ಬಹುತೇಕ ಬಿಜೆಪಿ ಶಾಸಕರು ಧ್ವನಿಗೂಡಿಸಿದರು.

ಆಗ ಸಚಿವರು, ಲೋಕೋಪಯೋಗಿ ಇಲಾಖೆ ಇಇ ಸತೀಶ್‌, ಜಿಪಂ ಕಚೇರಿ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಅವರನ್ನೊಳಗೊಂಡ ಸಮಿತಿ ರಚಿಸಿದರು. ಎರಡು ತಿಂಗಳೊಳಗೆ ವರದಿ ನೀಡುವಂತೆ ತಿಳಿಸಿದರು. ಶೌಚಾಲಯ ನಿರ್ಮಾಣ ಆಗದೇ ಇದ್ದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ ಎಂದು ಎಚ್ಚರಿಸಿದರು.

Advertisement

ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಐನಹಳ್ಳಿ ಗ್ರಾಪಂ ವ್ಯಾಪ್ತಿಯ ಬೀರಾವರ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ. ಆದರೆ ಅನುದಾನ ಮಾತ್ರ ಬೇರೆಯವರ ಹೆಸರಲ್ಲಿ ಡ್ರಾ ಆಗಿದೆ. ಅಲ್ಲದೆ ಈ ಗ್ರಾಮದಲ್ಲಿ 20 ಸಾವಿರ ರೂ. ಕೊಟ್ಟು ಖಾಸಗಿ ಕೊಳವೆಬಾವಿ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಪಂ ಅಧ್ಯಕ್ಷ ಮತ್ತು ಅವರ ಸಹೋದರರು ಅಕ್ರಮವಾಗಿ ನೀರು ಬಳಕೆ ಮಾಡುತ್ತಿದ್ದು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಮಾತನಾಡಿ, ತಾಪಂ, ಗ್ರಾಪಂನಲ್ಲಿ ಶೇ. 30ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ. ಎಲ್ಲ ಕಾಮಗಾರಿಗಳೂ ಕಳಪೆಯಾಗಿವೆ. ಕಳಪೆ ಕಾಮಗಾರಿಗೆ ಸಂಬಂಸಿದಂತೆ ಎನ್‌ಜಿಒದಿಂದ ನೆಪ ಮಾತ್ರಕ್ಕೆ ತನಿಖೆ ಮಾಡಿಸಲಾಗುತ್ತಿದೆ. ಅವರೇನೂ ñಜ್ಞರಲ್ಲ, ಆದ್ದರಿಂದ ಇಂಜಿನಿಯರ್‌ಗಳಿಂದ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ನಮ್ಮ 29 ಗ್ರಾಪಂನಲ್ಲೂ ಅವ್ಯವಹಾರವಾಗಿದ್ದು ತನಿಖೆ ನಡೆಯಬೇಕು ಎಂದರು.

ಗುತ್ತಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಂಪನಿ ಮತ್ತು ಆ ಕಂಪನಿಯ ಇಡೀ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು. ಅಂತಹ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಗುತ್ತಿಗೆಯನ್ನು ರದ್ದು ಮಾಡಬೇಕು ಎಂದು ಸಂಸದರು, ಶಾಸಕರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next