ನವದೆಹಲಿ : ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ಚುನಾವಣಾ ಹೊಸ್ತಿಲಲ್ಲಿರುವ ಪಂಚರಾಜ್ಯಗಳಲ್ಲಿ ರ‍್ಯಾಲಿ, ಬೃಹತ್ ಸಮಾವೇಶ ಹಾಗೂ ಕಾರ್ನರ್ ಸಭೆಗಳನ್ನು ಇನ್ನೂ ಒಂದು ವಾರಗಳ ಕಾಲ ರದ್ದುಗೊಳಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.
ಈ ಐದು ರಾಜ್ಯಗಳಲ್ಲಿ ಕೋವಿಡ್ ಹರಡುವಿಕೆ ಪ್ರಮಾಣ ಹಾಗೂ ನಿಯಂತ್ರಣ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಆಯೋಗ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಂಚರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜತೆಗೆ ಶನಿವಾರ ಸಭೆ ನಡೆಸಿದ ಆಯೋಗ ನಿರ್ಬಂಧವನ್ನು ಮುಂದುವರಿಸಲು ನಿರ್ಧರಿಸಿದೆ. ಆಯೋಗದ ಮೂಲಗಳ ಪ್ರಕಾರ ಜ.26ರವರೆಗೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಪಂಚರಾಜ್ಯಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಯಾವುದೇ ರ‍್ಯಾಲಿ ಹಾಗೂ ಸಮಾವೇಶ ನಡೆಸಬಾರದೆಂದು ಆಯೋಗ ಐತಿಹಾಸಿಕ ನಿರ್ಣಯ ತೆಗೆದುಕೊಂಡಿತ್ತು. ಆದರೆ ಭಾರತದಲ್ಲಿ ಚುನಾವಣೆ ಎಂದರೆ ಹಬ್ಬದಂತೆ ಎಂದು ಕೆಲ ರಾಜಕೀಯ ಪಕ್ಷಗಳು ಖ್ಯಾತೆ ತೆಗೆದಿದ್ದವು. ನಿರ್ಬಂಧದ ಮಧ್ಯೆಯೂ ಉತ್ತರ ಪ್ರದೇಶದಲ್ಲಿ ಶುಕ್ರವಾರ ಸಮಾಜವಾದಿ ಪಕ್ಷ ಬೃಹತ್ ಸಮಾವೇಶ ಆಯೋಜಿಸಿ ಆಯೋಗದ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಆಯೋಗ ಕೇಂದ್ರ ಆರೋಗ್ಯ ಇಲಾಖೆಯ ಜತೆ ಸಭೆ ನಡೆಸಿತ್ತು. ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಹಂತದಲ್ಲಿ ನಿಯಮ ಸಡಿಲಿಕೆ ಸಾಂಕ್ರಾಮಿಕರ ರೋಗದ ವಿರುದ್ಧ ಹೋರಾಟದಲ್ಲಿ ಸೂಕ್ತವಲ್ಲ ಎಂಬ ಅಭಿಪ್ರಾಯವೇ ವ್ಯಕ್ತವಾಗಿದೆ.
ಆದರೆ ಒಳಾಂಗಣ ಸಭೆ ನಡೆಸುವುದಕ್ಕೆ ಕೊಂಚ ರಿಯಾಯಿತಿ ನೀಡಲಾಗಿದೆ. 300 ಜನರು ಅಥವಾ ಸಭಾಂಗಣದ ಸಾಮರ್ಥ್ಯದ ಶೇ.50 ರ ಮಿತಿಯಲ್ಲಿ ಇಂಥ ಸಭೆ ಆಯೋಜಿಸಬಹುದು. ಆದರೆ ಸೂಕ್ತ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಇದರ ಜತೆಗೆ ಜಿಲ್ಲಾಡಳಿತದ ಅನುಮತಿಯೂ ಕಡ್ಡಾಯವಾಗಿದೆ.