Advertisement

ಮಿಡಿ ಮಾವಿನ ಕಾಯಿ ತಿನ್ನಂಗಾಗೈತಿ!

06:58 PM Mar 10, 2021 | Team Udayavani |

ಹೆಣ್ಣು ಜೀವಕ್ಕ ಮತ್ತೂಂದು ಜೀವ ಸೃಷ್ಟಿ  ಮಾಡೋ ಶಕ್ತಿ ಬಾಳ ದೊಡ್ಡದೈತಿ. ಬಸಿರಿ ಬೈಕಿ, ಬಾಣಂತನ ಅಂತ ಸಂಭ್ರಮಿಸೋ ಹೆಣ್ಣುಮಕ್ಕಳ ಸಂಭ್ರಮ ಕೂಡ ಅಷ್ಟಾ ಗತ್ತಿನದ್ದು. ಇನ್ನ ನಾನು ಸಣ್ಣಾಕಿ ಇದ್ದಾಗಿನ ಕಾಲ ಕೂಡ ಅಂತಲ್ಲಾ ಇತ್ತು. ಮದುವಿಯಾಗಿ ಒಂದೆರಡು ಮಾಸ ಕಳಿಲಿಕ್ಕಿಲ್ಲ,

Advertisement

ನವ ವಧು ಅನ್ನೋದೂ ಮರತು ಕೇರೀ ಹೆಂಗಸರು- ಏನವ್ವ ನಿನ್ನ ಮಗಂದು ಸುದ್ದಿ ಇಲ್ಲಲಾ..ಅನ್ನತಾ ಚ್ಯಾಷ್ಟಿ ಮಾಡತಿದ್ದರು. ಆಕ್ಯಾದ್ರೂ ಭಾಳ ನಿರಾಸಿ ಮಾಡದ ವರ್ಷದೊಳಗವಯ್ಯಕ್‌.. ವಯ್ಯಕ್‌ ಅಂತ ವಾಂತಿ ಮಾಡ್ತಿದ್ರ ಮನಿ ತುಂಬ ಒನ್ನಮೂನಿ ಸಡಗರತುಂಬೋದು. ಇತ್ತ ತಾಯಿ ಮನ್ಯಾಗ ಅವ್ವನ ಗೆಳತ್ಯಾರು ಹೊಸ ಗಂಡ ಬರತಾನೇನವಾ ಅಗದೀ ಚೊಲೋ ಆತು ಅನ್ನೋರು. (ಉತ್ತರ ಕರ್ನಾಟಕದ ಕಡಿಗೆ, ಮಗಳು ಗರ್ಭಿಣಿ ಅಂತಾದ್ರ ಅಜ್ಜಿಗೆ ಹೊಸ ಗಂಡ ಬರತಾನ ಅಂತ ಇಲ್ಲ, ಹೆಣ್ಣು ಮಗು ಹುಟ್ಟಿದ್ರ ಸವತಿ ಬರ್ತಾಳ ಅಂತ ಈಗ್ಲೂ ತಮಾಷಿ ಮಾಡ್ತಾರ)

ಮೂರು ತಿಂಗಳು ವಾಂತಿ ಮಾಡಿ ಮಾಡಿ ಹೈರಾಣಾದ ಹೆಣ್ಣ ಜೀವಕ್ಕ ಸಮಾಧಾನ ಆಗ್ಲಿ ಅಂತ ತಾಯಿ ಮನಿಯಿಂದ ಬಯಕಿ ಬುತ್ತಿ, ಕಳ್‌ ಸೀರಿ ಬರೋದು. ಅಲ್ಲಿಂದ ವಾಂತಿ ನಿಂತು ಏನ್‌ ತಿನ್ಲಿ, ಏನ ಬಿಡ್ಲಿ ಅನ್ನೊಹಂಗ ಹಪಾಹಪಿ ಶುರುವಾಗಿ ಅದು ಬೇಕೂ, ಇದೂ ಬೇಕೂ ಅನ್ನೋ ಬಯಕಿ

ಶುರುಗೊಳ್ಳತೈತಿ. ನಾನು ಸಣ್ಣಾಕಿ ಇದ್ದಾಗ ಅಕ್ಕ ಪಕ್ಕದ ಮನೆಯ ಕಕ್ಕಿಗಳು, ಅತ್ತೆಯರು ಅನಕೋತಾ ಒಬ್ಬರಲ್ಲ ಒಬ್ಬರು ಬಸಿರು ಹೊತ್ತವರು ಕಾಣತಿದ್ದರು. ಅವರು ನನ್ನ ಸನ್ನಿಲೇ ಕರದು ಅವ್ವಿ ನಿನ್ನತ್ರ ಬಳಪ ಅದೇನಾ? ಇಲ್ಲದಿದ್ರ ಎಂಟಾಣಿ ಕೊಡ್ತೀನಿ, ಬಳಪಾ ತಂದು ಕೊಡ್ತಿಯೇನಾ?ಅನ್ನೋರು. ಶಾಲಿಗೆ ಹೋಗದ ಇವರಿಗ್ಯಾಕ ಬಳಪ ಅಂತ ಸಂಶಯ ಬಂದರೂ ಕುಣುಕೋತ ಹೋಗಿ ಬಳಪ ತಂದು ಕೊಟ್ಟರ ನನ್ನ ಕಣ್‌ ಮುಂದನ ಒಂದ್‌ ತುಂಡು ಮುರುದು ಬಾಯಿಗೆ ಒಕ್ಕಂಡು ಕಣ್ಣು ಮುಚ್ಚಿ ಕಟಮ್‌ ಕಟಮ್‌ ಅಂತ ಕಡದುಆಸ್ವಾದಿಸತಿದ್ರ ನನಗ ಗಾಬರಿ ಆಕ್ಕಿತ್ತು. ಕಕ್ಕಿ ಬಳಪ ಯಾಕ ತಿನ್ನಕತ್ತಿ? ನಮ್ಮ ಟೀಚರ್‌ ತಿನ್ನಬಾರ್ದು ಅಂತ ಬೈತಾರ ಅಂದ್ರ.. ಹುಚ್ಚಿ… ನಿನಗೂ ನನ್ನಂಗ ಹೊಟ್ಯಾಗ ಪಾಪು ಬರತೈತಲ್ಲಾ ಆಗ ಗೊತ್ತಾಗತೈತಿ ಹೋಗು ಅಂತ ಮುಸಿ ಮುಸಿ ನಗೋರು.

ಶಾಲಿಗೆ ಹೊಂಟಾಗ ಅವ್ವಿ ಬಾರಲೇ ಇಲ್ಲಿ ಅಂತ ಕರದು ಸಾಲಿಯಿಂದ ಬರುವಾಗ ಮಂಡಾಳ ಬಟ್ಟಿಯಾಗ ಕೆಂಪ ಮಣ್ಣ ಒಣಾ ಹಾಕಿರ್ತಾರಲ? ಒಂದು ಮುಷ್ಟಿ ತರ್ತೀ? ನೀನ್‌ ತಂದು ಕೊಟ್ರಾ ಸಾಯಂಕಾಲ ಒಂದ್‌ ಬಾಳೇಹಣ್ಣು ಕೊಡ್ತೀನಿ ಅಂತ ಆಮಿಷ ತೋಸೋìರು. ಅರೇ.. ಇಲ್ಲೇ ಅಂಗಳದಾಗ ಬೇಕಾದಷ್ಟು ಬಿದ್ದದಲ್ಲ ಅತ್ತಿ.. ಅಲ್ಲಿಂದ ಯಾಕ ಬೇಕಾ ಅಂದ್ರಾ.. ಅವರೂನಕ್ಕೋತ ತಮ್ಮ ಗಡಿಗಿಯಂತ ತುಂಬಿದ ಹೊಟ್ಟಿಸವರಕೋತ ನಿನಗ ಈಗ ತಿಳಿಯಲ್ಲವಾ. ನಿನಗೂನನ್ನಂಗ ಹೊಟ್ಯಾಗ ಕೂಸು ಬರುತ್ತಲ್ಲ, ಆಗತಿಳಿತಾದ ನೋಡಾ… ಅಂದಾಗ ಅವರ ಮಾತು ಕೇಳಿಯ್ಯಿ. ಎಂತಾ ಅಸಹ್ಯ ಮಾತಾಡತಾರ… ಅನ್ನಕೋತ ಓಡತಿ¨. ಆದ್ರೂ ಮನಸಾಗ ನಾನು ಮಾತ್ರ ಇವರಂಗ ಮಣ್ಣಗಿಣ್ಣ ತಿನ್ನಾಕಿ ಅಲ್ಲ.. ಅಂದೊತ್ತಿದ್ದೆ!

Advertisement

ಈಗ ಮಾತ್ರ ಈ ಮಾತಕರೆವಾ ಆಗಿ ಕುಂತೈತಿ.. ಬಸಿರಿನಾಗ ದೇಹಕ್ಕ ಬೇಕಾದ ಕಬ್ಬಿಣಾಂಶ ಕೊರತೆಯಿಂದ ಸೀಮೆಸುಣ್ಣ, ಮಣ್ಣು ತಿನ್ನೋ ಬಯಕಿ ಆಗತದ. ಆದ್ರ ಈಗ ಬಸಿರು ಕಟ್ಟಿದ್ದು ಹೌದು ಅಂತ ಗೊತ್ತಾಗಿ ಡಾಕ್ಟರ್‌ ಕಡೆ ಹೋದ ಕೂಡಲೇ ಫೋಲಿಕ್‌ ಆ್ಯಸಿಡ್‌ ಸೇರಿದಂಗ ನಾನಾ ನಮೂನಿ ವಿಟಮಿನ್‌ ಗುಳುಗಿ ಕೊಟ್ಟು ಇಂತಹ ಬಯಕಿ ಬರದಂಗ ಆಕ್ಕೇತಿ. ಆದ್ರೂ ಈ ಬಸಿರಿನ ಬಯಕಿ ಅನ್ನೋದು ಇದ್ದಾ ಇರತದಲ್ಲ? ಏಳು ತುಂಬೋ ಒಳಗ ಗಂಡನ ಮನಿಯವರಆರೈಕಿ ಎಷ್ಟಾ ಚಂದಾಗಿ ಮಾಡಿದ್ರೂ ತಾಯಿ ಮನಿ ಸೆಳಿತಿರತೈತಿ. ಅವ್ವ ಮಾಡೋ ಜ್ವಾಳದ ರೊಟ್ಟಿ, ಚೌಳಿಕಾಯಿ, ಬದನಿ ಕಾಯಿ ಪಲ್ಯ, ಗುರೆಳ್ಳು,ಬೊಳ್ಳಳ್ಳಿ ಹಿಂಡಿ ವಾಸನಿ ನೆನಪಾದ್ರ ಸಾಕು, ರಾತ್ರಿ ಅನ್ನೋದೂ ಮರತು ತವರಿಗೆ ಹೋಗುವ ಮನಸಾಗತೈತಿ. ಏಳು ತಿಂಗಳು ಮುಗುದ ಗಂಡನಮನ್ಯಾಗ ಸೀಮಂತ ಮಾಡಿಕೊಂಡು ತವರಿಗೆಹೋದ್ರಾ ಅಲ್ಲಿಯ ಬಯಕಿ ಬೇಡಿಕೆಯ ಉಪದ್ವಾಪನಾ ಬ್ಯಾರೆ. ದಿನಾ ಹೊಸ ಹೊಸನಮೂನಿ ಅಡಿಗಿ ಮಾಡಿ, ಬಿಸಿ ಬಿಸಿ ಅನ್ನದಾಗ ಸೇರತುಪ್ಪಾ ಸುರದು ಉಣ್ಣಾಕ ಕೊಡುವ ಅವ್ವನಪ್ರೀತಿಯ ಮುಂದ, ಮಗಳು ಮನಿಗೆ ಬಂದಾಳ ಅಚ್ಚಗ ನೋಡಕಬೇಕು ಅನ್ನೋ ಕಾಳಜಿಗೆ ಸ್ವರ್ಗಾನು ಸಮನಾಗೋದಿಲ್ಲ.

ಅಕ್ಕ ಪಕ್ಕದ ಮನಿಯ ವೈನಿಯರು, ಅತ್ಯಾರು, ಕಕ್ಕಿಗಳು ತಮ್ಮನ್ಯಾಗ ಮಾಡಿದ್ದನ್ನ ಸೆರಗ ಮುಚ್ಚಿಕೊಂಡು ತಂದು ಕೊಟ್ಟು ಬಿಸಿ ಐತಿ ತಿಂದುಬಿಡವಾ ಅಂತ ಕಣ್ಣಾಗ ಪ್ರೀತಿ ಸುರುವತಿದ್ರ ಗಂಟಲು ಕಟ್ಟಿ ಬರತೈತಿ.ತ್ವಾಟದಾಗಿನ ಮಿಡಿ ಮಾವಿನ್‌ ಕಾಯಿ, ಸಣ್ಣ ನೆಲ್ಲಿ ಕಾಯಿ, ಹುಣಿÕ ಕಾಯಿ ಜಜ್ಜಿ ಉಪ್ಪು, ಖಾರ ಹಾಕಿಕೊಂಡು ತಿಂದು ಆ ಹುಳಿಗೆ ಹಲ್ಲೆಲ್ಲ ಜುಮ್ಮಂದು ನಾಲಿಗಿ ನೀರಾಡದಿದ್ರ ಅದರ ಮಜಾನಾ ಬ್ಯಾರೆ. ಅದನ್ನ ಮೀರಿ ಅವ್ವ ಅಪ್ಪಿತಪ್ಪಿ ಏನ್‌ ತಿನ್ನಂಗಾಗೈತಿ ಹೇಳವಾ ಮಾಡಿಕೊಡ್ತೀನಿ. ಇಲ್ಲಂದ್ರ ನಿನ್ನ ಕೂಸಿನ ಕಿವಿ ಸೋರ್ಯಾವು ಅಂದ್ರಸಾಕು..ಶೇಂಗಾ ಹೋಳಿಗಿ, ಕರ್ಚಿಕಾಯಿ, ಬೇಸನ್ನ ಉಂಡಿ, ಚಕ್ಕಲಿ, ಶಂಕರ ಪೋಳಿ, ಚುರ್ಮುರಿ ಮಿರ್ಚಿ… ಒಂದಾ ಎರಡಾ.. ಒಟ್ಟೂ ತೌರಿನಾಗ ಇರೋಷ್ಟು ದಿನ ಅಲ್ಲಿ ಹಬ್ಬನಾ ನೆರಿತೈತಿ. ಇಂಥಾಸುಖ ಅರಮನಿಯಂತ ಗಂಡನ ಮನ್ಯಾಗೂಇದ್ದಿರಲಿಕ್ಕಿಲ್ಲ ಅನ್ನಿಸೋದು ಸಹಜ. ಅವ್ವನಮಡಿಲಾಗ ತಲಿಯಿಟ್ಟು ಮಕ್ಕೊಂಡು ತುಂಬಿಹೊಟ್ಟಿ ಸವರ್ಕೋತ ಕೂಸಿನ ಕನಸು ಕಾಣೋದೈತಲ್ಲ ಅದರ ಮುಂದ ಸ್ವರ್ಗಾನೂ ಸುಳೈತಿ.

 

ಅಮೃತಾ

Advertisement

Udayavani is now on Telegram. Click here to join our channel and stay updated with the latest news.

Next