Advertisement

ಮನೆಯಿಂದ ಹೊರಗೆ ಆಹಾರ ಸೇವನೆ

10:10 AM Mar 16, 2020 | mahesh |

ಮನೆಯಲ್ಲಿಯೇ ಅಡುಗೆ ಮಾಡಿ ತಿನ್ನುವುದು ಮತ್ತು ಉಣ್ಣುವುದು ಆರೋಗ್ಯಯುತ ಆಹಾರ ಸೇವನೆಯ ಬಹುಮುಖ್ಯ ಭಾಗ. ಭಾರತೀಯ ಆಹಾರ ಶೈಲಿ ಉತ್ತಮ ಮತ್ತು ಕೆಟ್ಟ ಅಂಶಗಳೆರಡನ್ನೂ ಹೊಂದಿದೆ. ನಾರಿನಂಶ ಅಧಿಕವಿರುವ ಧಾನ್ಯಗಳು ಹೆಚ್ಚು ಇರುವುದು, ಪ್ರಾಣಿಜನ್ಯ ಪ್ರೊಟೀನ್‌ ಕಡಿಮೆ ಉಪಯೋಗಿಸುವುದು ಹಾಗೂ ಬೇಳೆಕಾಳುಗಳು ಮತ್ತು ತರಕಾರಿಗಳನ್ನು ನಾವು ಹೆಚ್ಚು ಉಪಯೋಗಿಸುತ್ತೇವೆ ಎಂಬುದು ಧನಾತ್ಮಕ ಅಂಶ. ಬಹಳಷ್ಟು ಆಹಾರ ಪದಾರ್ಥಗಳಲ್ಲಿ ತುಪ್ಪ ಉಪಯೋ ಗಿಸುವುದು ಅಥವಾ ಕರಿದ ಆಹಾರವಸ್ತುಗಳು ಹೆಚ್ಚು ಇರುವುದು ಋಣಾತ್ಮಕ ಅಂಶವಾಗಿದೆ. ಭಾರತೀಯ ಆಹಾರ ಪದಾರ್ಥಗಳ ಬಗ್ಗೆ ಚಿಂತಿಸಿದಾಕ್ಷಣ ಮನಸ್ಸಿನಲ್ಲಿ ಮೂಡುವುದೆಂದರೆ, ಬಿಸಿ ಬಿಸಿಯಾದ, ಮಸಾಲೆಭರಿತವಾದ, ಎಣ್ಣೆಯಂಶ ಜಾಸ್ತಿಯಿರುವ ಸಮೃದ್ಧವಾದ, ಕೊಬ್ಬುಭರಿತ ಮತ್ತು ಕೆನೆಯುಕ್ತ ಆಹಾರ. ಆಹಾರವನ್ನು ಸಮತೋಲಿತವಾಗಿಸುವ ಕಾಬೊìಹೈಡ್ರೇಟ್‌ಗಳು, ಪ್ರೊಟೀನ್‌ಗಳು, ಕೊಬ್ಬುಗಳು ಭಾರತೀಯ ಆಹಾರ ಶೈಲಿಯಲ್ಲಿ ಒಳಗೊಂಡಿರುತ್ತವೆ. ವಾರಕ್ಕೊಮ್ಮೆಯಾದರೂ ಮನೆಯಿಂದ ಹೊರಗೆ ಹೊಟೇಲ್‌ ಅಥವಾ ರೆಸ್ಟೋರೆಂಟ್‌ಗಳಲ್ಲಿ ಊಟ ಉಪಾಹಾರ ಸೇವಿಸುವ ಬಯಕೆ ಪ್ರತಿಯೊಬ್ಬರಲ್ಲೂ ಇರುತ್ತದೆ. ನೀವು ಕೆಫೆ ಅಥವಾ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸುವಾಗ ನಿಮ್ಮ ಊಟ- ಉಪಾಹಾರ ಸಮತೋಲಿತ ಮತ್ತು ಆರೋಗ್ಯಪೂರ್ಣವಾಗಿರಲು ನೀವು ಖಂಡಿತವಾಗಿ ಕೆಲವು ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಈ ಸಂಬಂಧಿ ಸಲಹೆಗಳು ಇಲ್ಲಿವೆ.

Advertisement

ಆರೋಗ್ಯಪೂರ್ಣ ಆಹಾರ ಸೇವನೆಗೆ ಕೆಲವು ಸಲಹೆಗಳು
 ಪಾರ್ಟಿಗೆ ಹೋಗುವ ಮುನ್ನ ಆರೋಗ್ಯಪೂರ್ಣ ಉಪಾಹಾರ ಸೇವಿಸಿ.

 ಎಲ್ಲ ಆಹಾರಗಳನ್ನು ಒಂದೇ ಬಾರಿಗೆ ಆರ್ಡರ್‌ ಮಾಡಬೇಡಿ. ಯಾಕೆಂದರೆ ಪ್ರಮಾಣ ಎಷ್ಟಿರುತ್ತದೆ ಎಂಬುದು ನಿಮಗೆ ಗೊತ್ತಿರುವುದಿಲ್ಲ.

 ಮೆನುವನ್ನು ಸರಿಯಾಗಿ ಓದಿಕೊಂಡು ನಿಮಗೆ ಪರಿಚಯ ಇರುವ ಆಹಾರವಸ್ತುಗಳನ್ನು ಮಾತ್ರ ಆರ್ಡರ್‌ ಮಾಡಿ. ಇಲ್ಲವಾದರೆ ಆರ್ಡರ್‌ ಮಾಡಿದ ಬಳಿಕ ಪರಿತಪಿಸಬೇಕಾದೀತು.

 ಹಲವು ಬಗೆಯ ಖಾದ್ಯಗಳನ್ನು ತರಿಸಿಕೊಳ್ಳುವಾಗ ಅಗತ್ಯಕ್ಕಿಂತ ಹೆಚ್ಚು ಆರ್ಡರ್‌ ಮಾಡದಂತೆ ಎಚ್ಚರ ವಹಿಸಿ. ಎಷ್ಟು ಪ್ರಮಾಣ ಬೇಕಾಗಬಹುದು ಎಂಬ ಸಲಹೆಯನ್ನು ಸಿಬಂದಿಯಿಂದ ಪಡೆದುಕೊಳ್ಳಿ.

Advertisement

 ತುಂಬಾ ಸಿಹಿಯಾದ ಅಥವಾ ತುಂಬಾ ಉಪ್ಪಾದ ಆಹಾರಗಳನ್ನು ತರಿಸಿಕೊಳ್ಳಬೇಡಿ.

 ತಿನ್ನುವ ಬಯಕೆಯನ್ನು ಕಡಿಮೆ ಮಾಡಿಕೊಳ್ಳಲು ಆಹಾರ ಸೇವಿಸುವುದಕ್ಕೆ ಮುನ್ನ ಮತ್ತು ನಡುನಡುವೆ ನೀರು ಕುಡಿಯಿರಿ.

 ಅಪಟೈಸರ್ಸ್‌ಗಳನ್ನು ಆಯ್ದುಕೊಳ್ಳಿ, ಕರಿದ ಆಹಾರವಸ್ತುಗಳು ಬೇಡ.

 ಲಿಂಬೆ ರಸ ಬೆರೆಸಿದ ತರಕಾರಿ ಸಲಾಡ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ. ಸಲಾಡ್‌ಗೆ ಮೆಯೊನೈಸ್‌ ಅಥವಾ ಬಟರ್‌ ಬೆರೆಸುವುದು ಬೇಡ.

 ಎಣ್ಣೆಯಂಶ ಅಧಿಕವಿರುವ ದಪ್ಪನೆಯ ರಸವುಳ್ಳ ಕೆಂಪು ಮಾಂಸದ ಖಾದ್ಯಗಳಿಗಿಂತ ಮೊಟ್ಟೆ, ಮೀನು ಮತ್ತು ಕೋಳಿಮಾಂಸದ ಖಾದ್ಯಗಳಿಗೆ ಆದ್ಯತೆ ನೀಡಿ.

 ಆಲ್ಕೊಹಾಲ್‌ ಅಥವಾ ಸೋಡಾ ಪಾನೀಯಗಳ ಬದಲಾಗಿ ನೀರು ಅಥವಾ ಹಣ್ಣಿನ ಜ್ಯೂಸ್‌ಗಳನ್ನು ಆರಿಸಿಕೊಳ್ಳಿ. ಆದರೆ ಹಣ್ಣಿನ ಜ್ಯೂಸ್‌ಗಳಲ್ಲಿ ಸಕ್ಕರೆ ಬೆರೆತಿರುತ್ತದೆ. ಹೀಗಾಗಿ 200 ಮಿ.ಲೀ.ಗಳಷ್ಟು ಮಾತ್ರ ಸೇವಿಸಿ. ಇದನ್ನು ಊಟದ ಜತೆಗೆ ಸೇವಿಸುವುದು ಒಳಿತು, ಯಾಕೆಂದರೆ ಇದರಿಂದ ಹಲ್ಲುಗಳ ಮೇಲಿನ ದುಷ್ಪರಿಣಾಮ ಕಡಿಮೆಯಾಗುತ್ತದೆ.

 ಗ್ರಿಲ್‌ ಮಾಡಲಾದ, ಬೇಕ್‌ ಮಾಡಲಾದ, ಹಬೆಯಲ್ಲಿ ಬೇಯಿಸಿದ ಆಹಾರಗಳನ್ನು ತರಿಸಿ ಸೇವಿಸಿ. ಇವುಗಳಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆ ಇರುತ್ತದೆ. ಆಳವಾಗಿ ಕರಿದ ಆಹಾರವಸ್ತುಗಳು ಬೇಡ.

 ಕ್ರೀಮ್‌ ಬೇಸ್‌ ಹೊಂದಿರುವ ಥಿಕ್‌ ಸೂಪ್‌ ಬದಲಾಗಿ ಕ್ಲಿಯರ್‌ ಸೂಪ್‌ಗ್ಳನ್ನು ಆರಿಸಿಕೊಳ್ಳಿ.

 ಅತಿಯಾದ ಆಹಾರ ಸೇವನೆಯನ್ನು ತಡೆಯಲು ಮುಖ್ಯ ಆಹಾರಕ್ಕೆ ಮುನ್ನ ಸೂಪ್‌ ಅಥವಾ ಸಲಾಡ್‌ ತರಿಸಿ ಸೇವಿಸಿ.

 ರೋಟಿ ಅಥವಾ ಅನ್ನಕ್ಕೆ ದಪ್ಪನೆಯ ದಾಲ್‌ ತಡಾRದ ಬದಲಾಗಿ ಸಾದಾ ತೆಳು ದಾಲ್‌ ಆರಿಸಿಕೊಳ್ಳಿ.

 ಸಾದಾ ಅನ್ನ ಕಡಿಮೆ ಮಾಡಿ. ಅದರ ಬದಲು ತರಕಾರಿ ಬೆರೆಸಿದ ಅನ್ನವೈವಿಧ್ಯ ಇರಲಿ.

 ಮೈದಾದಿಂದ ತಯಾರಿಸುವ ನಾನ್‌ ಬದಲು ಚಪಾತಿ ಅಥವಾ ಸಾದಾ ರೋಟಿ ತರಿಸಿಕೊಳ್ಳಿ. ಮೈದಾದಿಂದ ಮಾಡಲಾದ ಇತರ ಆಹಾರವಸ್ತುಗಳನ್ನೂ ವರ್ಜಿಸಿ.

 ಅತಿಯಾಗಿ ಎಣ್ಣೆ ಮತ್ತು ಕೊಬ್ಬು ಉಪಯೋಗಿಸುವ ಗ್ರೇವಿಗಳನ್ನು ತರಿಸಿಕೊಳ್ಳದಿರಿ.

 ಸಾದಾ ಡೆಸರ್ಟ್‌ ಬದಲಾಗಿ ಫ್ರುಟ್‌ ಸಲಾಡ್‌ನ‌ಂತಹ ಹಣ್ಣುಗಳು ಹೆಚ್ಚಿರುವ ಡೆಸರ್ಟ್‌ಗಳಿರಲಿ.

 ಸ್ಟ್ಯಾಂಡರ್ಡ್‌ ಅಥವಾ ಸಣ್ಣ ಪ್ರಮಾಣದ ಆಹಾರಗಳನ್ನೇ ಆರ್ಡರ್‌ ಮಾಡಿ, “ಲಾರ್ಜ್‌’ ಅಥವಾ “ಸೂಪರ್‌ ಸೈಜ್‌’ ಬೇಡ.

 ಹೊಟ್ಟೆ ತುಂಬಿದಾಗ ಆಹಾರ ಸೇವನೆ ನಿಲ್ಲಿಸಿ. ಹೊಟ್ಟೆಬಾಕರಾಗಬೇಡಿ.

ಸುಶ್ಮಾ ಐತಾಳ್‌, ಪಥ್ಯಾಹಾರ ತಜ್ಞೆ, ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next