ಹುಬ್ಬಳ್ಳಿ: ರಾಜ್ಯದಲ್ಲಿ 17 ಮೀನು ಮಾರಾಟ ಮಳಿಗೆ ಹಾಗೂ ಮತ್ಸ್ಯದರ್ಶಿನಿ ಉಪಹಾರ ಗೃಹಗಳಿದ್ದು ಹುಬ್ಬಳ್ಳಿಯಲ್ಲಿ ಉದ್ಘಾಟನೆಗೊಂಡಿರುವುದು 18 ಮಳಿಗೆ ಎಂದು ಕರ್ನಾಟಕ ಮಿನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ ಹೇಳಿದರು.
ಇಲ್ಲಿನ ಕೇಶ್ವಾಪುರ ಶಾಂತಿನಗರದ ಬಳಿ ಗುರುವಾರ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ (ಕೆಎಫ್ಡಿಸಿ) ಹವಾ ನಿಯಂತ್ರಿತ ಮೀನು ಮಾರಾಟ ಮಳಿಗೆ ಹಾಗೂ ಮತ್ಸ್ಯದರ್ಶಿನಿ ಉಪಾಹಾರ ಗೃಹದ ಉದ್ಘಾಟನೆ ನಂತರ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಬಳ್ಳಾರಿ, ಕಲಬುರಗಿಯಲ್ಲೂ ಮಳಿಗೆ ಹಾಗೂ ಉಪಹಾರ ಗೃಹ ಆರಂಭಿಸುವ ಯೋಜನೆ ಇದೆ ಎಂದರು. ಬೆಂಗಳೂರು, ಶಿವಮೊಗ್ಗದಲ್ಲಿ ತಲಾ 3, ಮೈಸೂರಿನಲ್ಲಿ 2, ಕೋಲಾರ, ದಾವಣಗೆರೆ, ತೀರ್ಥಹಳ್ಳಿ, ಮಂಗಳೂರು, ಮಡಿಕೇರಿ, ಹಾಸನ, ತುಮಕೂರು, ಸುಳ್ಯ ಹಾಗೂ ಪುತ್ತೂರುಗಳಲ್ಲಿ ಈಗಾಗಲೇ ಮಳಿಗೆ ಹಾಗೂ ಉಪಹಾರ ಗೃಹಗಳು ಕಾರ್ಯ ನಿರ್ವಹಿಸುತ್ತಿವೆ.
ಬೆಂಗಳೂರ ಕಬ್ಬನ್ ಪಾರ್ಕ್‌ನಲ್ಲಿರುವ ಮಳಿಗೆಯಲ್ಲಿ ನಿತ್ಯ ಸುಮಾರು 1 ಸಾವಿರ ಜನ ಊಟ ಮಾಡುತ್ತಾರೆ. ಕನಿಷ್ಠ 50 ಸಾವಿರ ಮೀನುಗಳು ಮಾರಾಟವಾಗುತ್ತವೆ. ಸುಮಾರು 1ಲಕ್ಷ ವಹಿವಾಟು ನಡೆಯುತ್ತದೆ ಎಂದರು. ಮಂಗಳೂರು, ಕಾರವಾರ, ಉಡುಪಿ, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಮೀನುಗಳನ್ನು ತರಿಸಲಾಗುತ್ತದೆ.
ಐಸ್ ಮಷಿನ್ ಮತ್ತಿತರ ಸೌಲಭ್ಯಗಳನ್ನು ಈ ಮಳಿಗೆಯಲ್ಲಿ ಒದಗಿಸಲಾಗಿದೆ. ನಗರದಲ್ಲಿ ಮೀನು ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು, ಕೆಎಫ್ಡಿಸಿ ಮಳಿಗೆಯಿಂದ ಗುಣಮಟ್ಟದ ಮೀನುಗಳನ್ನು ಪಡೆಯಬಹುದು. ಬಂಗೂಡ, ಅಂಜಲು ದೊಡ್ಡದು, ಚಿಕ್ಕದು, ಕೊಡ್ಡಾಯಿ, ಕಾಣಿ, ಕ್ಸಾದರ್, ಸಿಲ್ವರ್ ಬೆಲ್ಲಿ, ಕೊಂಡ್ತಿ ಮೀನು, ಡಿಕ್ಕೊ ಮೀನು,
ಕಲ್ಲು ಏಡಿ, ಟೈಗರ್ ಸಿಗಡಿ, ಬಿಳಿ ಸಿಗಡಿ, ಬಿಳಿ ಮಾಂಜ, ಕಪ್ಪು ಮಾಂಜ, ಬೊಳಿಂಜಿರ್, ಬೂತಾಯಿ ವಿವಿಧ ರೀತಿಯ ಮೀನು ಹಾಗೂ ಏಡಿಗಳ ಮಾರಾಟ ಮಾಡಲಾಗುವುದು ಎಂದರು. ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ನೂತನ ಮಳಿಗೆ ಉದ್ಘಾಟಿಸಿ ನಂತರ ಮಳಿಗೆಯ ವ್ಯವಸ್ಥೆ ಪರಿಶೀಲಿಸಿದರು. ಪೀರಾಜಿ ಖಂಡೇಕಾರ ಇನ್ನಿತರರು ಇದ್ದರು.