Advertisement

ಎಳ್ಳು ತಿನ್ನಿ ಒಳ್ಳೆ ಮಾತಾಡಿ…

06:43 PM Jan 14, 2020 | mahesh |

ಉತ್ತರಾಯಣದಲ್ಲಿ ಆಚರಿಸಲ್ಪಡುವ ಮಕರ ಸಂಕ್ರಾತಿ ಹಬ್ಬದಲ್ಲಿ ಎಳ್ಳಿಗೆ ವಿಶೇಷ ಸ್ಥಾನವಿದೆ. ಇದರಲ್ಲಿ ಮುಖ್ಯವಾಗಿ ಝಿಂಕ್‌, ಸೆಲೆನಿಯಮ್‌, ಕಬ್ಬಿಣ, ಮೆಗ್ನಿàಶಿಯಮ್‌, ವಿಟಮಿನ್‌ ಬಿ 6, ವಿಟಮಿನ್‌ ಇ ಇರುವುದರಿಂದ, ಎಳ್ಳಿನ ಸೇವನೆಯಿಂದ ಶರೀರದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಮಾತ್ರವಲ್ಲದೆ, ಚಳಿಗಾಲದಲ್ಲಿ ಶರೀರಕ್ಕೆ ಅಗತ್ಯವಿರುವ ಸ್ನಿಗ್ಧತೆಯನ್ನು ದೊರಕಿಸಿ ತ್ವಚೆಯ ಸಂರಕ್ಷಣೆ ಮಾಡುತ್ತದೆ. ಸಂಕ್ರಾಂತಿಯ ಆಚರಣೆಯೊಂದಿಗೆ ತಯಾರಿಸಬಹುದಾದಂ ಕೆಲವು ವಿಶೇಷ ಅಡುಗೆಗಳ ರೆಸಿಪಿ ಇಲ್ಲಿದೆ.

Advertisement

1. ಕಡುಬು
ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು-1 ಕಪ್‌, ಕರಿ ಎಳ್ಳು-1 ಕಪ್‌, ಬೆಲ್ಲ-1ಕಪ್‌, ತೆಂಗಿನ ತುರಿ- 1/2 ಕಪ್‌, ಉಪ್ಪು, ಏಲಕ್ಕಿ ಪುಡಿ, ನೀರು-ಒಂದೂವರೆ ಕಪ್‌(ಸ್ವಲ್ಪ ಹೆಚ್ಚಾ ಬೇಕಾಗಬಹುದು)

ಮಾಡುವ ವಿಧಾನ: (ಹೂರಣ ತಯಾರಿ) ಮೊದಲು ಎಳ್ಳನ್ನು ಚೆನ್ನಾಗಿ ತೊಳೆದು ಬಟ್ಟೆಯ ಮೇಲೆ ಹರಡಿ ಆರಲು ಬಿಡಿ. ನಂತರ ಅದನ್ನು ಬಾಣಲೆಯಲ್ಲಿ ಹಾಕಿ ಚಟಪಟ ಸಿಡಿಯುವಷ್ಟು ಹುರಿದು ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ. ಅದೇ ಬಾಣಲೆಗೆ ಬೆಲ್ಲ ಮತ್ತು ಕಾಯಿತುರಿ ಸೇರಿಸಿ ಸಣ್ಣ ಉರಿಯಲ್ಲಿ ಮಗುಚುತ್ತಾ ಬನ್ನಿ. ಬೆಲ್ಲ ಕರಗಿ ಪಾಕ ಗಟ್ಟಿಯಾಗಿ ತಳ ಬಿಟ್ಟು ಬರುತ್ತಿದ್ದಂತೆಯೇ ಏಲಕ್ಕಿ ಪುಡಿ ಸೇರಿಸಿ ಒಲೆಯಿಂದ ಕೆಳಗಿಳಿಸಿ.

(ಹೊರಗಿನ ಹಿಟ್ಟು) ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಉಪ್ಪು ಹಾಕಿ ಅದನ್ನು ಸ್ವಲ್ಪ ಸ್ವಲ್ಪವೇ ಅಕ್ಕಿ ಹಿಟ್ಟಿಗೆ ಸೇರಿಸುತ್ತಾ ಬನ್ನಿ. ಸೌಟಿನ ಸಹಾಯದಿಂದ ಹಿಟ್ಟನ್ನು ಮಗುಚುತ್ತಾ ಇರಿ. ಹಿಟ್ಟು ಕೈಗೆ ಅಂಟದಷ್ಟು ಗಟ್ಟಿಯಾಗಲಿ. ಹಿಟ್ಟು ಸ್ವಲ್ಪ ಹೊತ್ತು ತಣಿದ ನಂತರ ಕೈಯಲ್ಲಿ ತಟ್ಟಿ ಅದರೊಳಗೆ ಹೂರಣ ತುಂಬಿ ಕಡುಬಿನಾಕಾರದಲ್ಲಿ ಮುಚ್ಚಿ. ಈ ರೀತಿ ತಯಾರಿಸಿದ ಕಡುಬನ್ನು, ಹಬೆಯಲ್ಲಿಟ್ಟು 10-15 ನಿಮಿಷದವರೆಗೆ ಬೇಯಿಸಿದರೆ ಸಿಹಿಯಾದ ಎಳ್ಳಿನ ಕಡುಬು ಸವಿಯಲು ಸಿದ್ಧ.

2. ಎಳ್ಳನ್ನ
ಬೇಕಾಗುವ ಸಾಮಗ್ರಿ: ಅಕ್ಕಿ-2 ಕಪ್‌, ಕರಿ ಎಳ್ಳು-1/4 ಕಪ್‌, ಉದ್ದಿನ ಬೇಳೆ-1 ಚಮಚ, ಕಡಲೆ ಬೇಳೆ-1 ಚಮಚ, ಒಣ ಮೆಣಸು-2, ಉಪ್ಪು, ಒಗ್ಗರಣೆಗೆ: ಸಾಸಿವೆ, ಎಣ್ಣೆ, ಕರಿಬೇವು.

Advertisement

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು, ಉದುರುದುರಾಗಿ ಅನ್ನ ಮಾಡಿಕೊಳ್ಳಿ. ಎಳ್ಳನ್ನು ಬಾಣಲೆಗೆ ಹಾಕಿ ಹುರಿದು ತೆಗೆದಿರಿಸಿ. ನಂತರ ಉದ್ದಿನ ಬೇಳೆ ಮತ್ತು ಕಡಲೆ ಬೇಳೆಯನ್ನು ಹಾಕಿ ಹುರಿದುಕೊಳ್ಳಿ. ಒಣಮೆಣಸನ್ನು ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ಎಲ್ಲವೂ ಆರಿದ ನಂತರ ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ. ಬಾಣಲೆಯಲ್ಲಿ ಒಗ್ಗರಣೆ ಸಿಡಿಸಿ, ಕರಿಬೇವು ಹಾಕಿ, ಅನ್ನ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈಗ ಪುಡಿ ಮಾಡಿಟ್ಟ ಮಿಶ್ರಣವನ್ನೂ ಸೇರಿಸಿ ಚೆನ್ನಾಗಿ ಕಲೆಸಿ.

3.ಬರ್ಫಿ
ಬೇಕಾಗುವ ಸಾಮಗ್ರಿ: ಬಿಳಿ ಎಳ್ಳು-2 ಕಪ್‌, ಬೆಲ್ಲ-ಒಂದೂವರೆ ಕಪ್‌, ನೀರು-1/4 ಕಪ್‌, ತೆಂಗಿನ ತುರಿ -1/4 ಕಪ್‌, ತುಪ್ಪ-1/4 ಕಪ್‌, ಏಲಕ್ಕಿ, ಗೋಡಂಬಿ.

ಮಾಡುವ ವಿಧಾನ: ಎಳ್ಳನ್ನು ಪರಿಮಳ ಬರುವವರೆಗೆ ಹುರಿದು ತೆಗೆದಿರಿಸಿ (ಜಾಸ್ತಿ ಹುರಿದರೆ ಕಹಿಯಾಗುತ್ತದೆ) ಆರಿದ ನಂತರ ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ. ಅದೇ ಬಾಣಲೆಗೆ ಬೆಲ್ಲ ಮತ್ತು ನೀರು ಹಾಕಿ ಚೆನ್ನಾಗಿ ಕುದಿಸಿ. ನೂಲು ಪಾಕ ಬಂದ ಕೂಡಲೇ ಎಳ್ಳಿನ ಪುಡಿ, ತೆಂಗಿನ ತುರಿ ಮತ್ತು ತುಪ್ಪವನ್ನು ಸೇರಿಸಿ ಸೌಟಿನಲ್ಲಿ ತಿರುವುತ್ತಾ ಬನ್ನಿ. ಪಾಕ ತಳ ಬಿಟ್ಟು ಬರುವಾಗ ಏಲಕ್ಕಿ ಪುಡಿ ಸೇರಿಸಿ ಒಲೆಯಿಂದ ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಗೆ ಹರಡಿ.ಗೋಡಂಬಿಯಿಂದ ಅಲಂಕರಿಸಿ, ಸ್ವಲ್ಪ ಆರಿದ ನಂತರ ಚಾಕುವಿನಿಂದ ಬೇಕಾದ ಆಕಾರದಲ್ಲಿ ಕತ್ತರಿಸಿ.

4. ಕೋಸಂಬರಿ
ಬೇಕಾಗುವ ಸಾಮಗ್ರಿ: ಬಿಳಿ ಎಳ್ಳು-1/2 ಕಪ್‌, ಎಳೆ ಸೌತೆ/ಮುಳ್ಳು ಸೌತೆ-1, ತೆಂಗಿನ ತುರಿ-1/4 ಕಪ್‌, ಲಿಂಬೆ ರಸ, ಕೊತ್ತಂಬರಿ, ಉಪ್ಪು, ಒಗ್ಗರಣೆಗೆ-ಸಾಸಿವೆ, ಎಣ್ಣೆ, ಹಸಿಮೆಣಸು, ಇಂಗು, ಕರಿಬೇವು.

ಮಾಡುವ ವಿಧಾನ: ಎಳ್ಳನ್ನು ಪರಿಮಳ ಬರುವವರೆಗೆ ಹುರಿದು ತೆಗೆದಿರಿಸಿ. ಸೌತೆಕಾಯಿಯನ್ನು ಸಣ್ಣದಾಗಿ ಹೆಚ್ಚಿ, ಅದಕ್ಕೆ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಲಿಂಬೆ ರಸ, ಉಪ್ಪು ಮತ್ತು ಹುರಿದಿಟ್ಟ ಎಳ್ಳನ್ನು ಸೇರಿಸಿ. ಒಗ್ಗರಣೆ ಸಿಡಿಸಿ ಅದಕ್ಕೆ ಇಂಗು, ಕರಿಬೇವು ಮತ್ತು ಹಸಿ ಮೆಣಸಿನಕಾಯಿ ಸೇರಿಸಿ. ಎಳ್ಳು-ಸೌತೆಕಾಯಿ ಮಿಶ್ರಣಕ್ಕೆ ಒಗ್ಗರಣೆ ಸೇರಿಸಿದರೆ ಆರೋಗ್ಯಕರ ಮತ್ತು ರುಚಿಕರವಾದ ಎಳ್ಳಿನ ಕೋಸಂಬರಿ ತಯಾರು.

-ಡಾ.ಹರ್ಷಿತಾ ಎಂ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next