Advertisement
ಬೆಳಗ್ಗಿನ ಉಪಾಹಾರ ದಿನದ ಪ್ರಮುಖ ಆಹಾರವಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಎದ್ದು ಅರ್ಧ ಅಥವಾ ಒಂದು ಗಂಟೆಯ ಅನಂತರ ಸುಮಾರು 7ರಿಂದ 8 ಗಂಟೆ ಒಳಗೆ ಉಪಾಹಾರ ಸೇವಿಸಬೇಕು. ಬೆಳಗ್ಗಿನ ತಿಂಡಿಯನ್ನು ವಿಳಂಬ ಮಾಡುವುದು, ತಿನ್ನದಿರುವುದು ಅಥವಾ ಆಹಾರ ಸೇವನೆ ನಡುವಿನ ಅಂತರ ಜಾಸ್ತಿ ಮಾಡುವುದು ಇವೆಲ್ಲವು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಬೆಳಗ್ಗಿನ ಉಪಾಹಾರವನ್ನು 10 ಗಂಟೆಗಿಂತ ಹೆಚ್ಚು ವಿಳಂಬ ಮಾಡಬಾರದು. ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶವಿರಬೇಕು. 4ರಿಂದ 5 ಗಂಟೆ ಅಂತರವಿದ್ದು 12ರಿಂದ 1 ಗಂಟೆಯ ಮಧ್ಯೆ ಊಟ ಮಾಡಬೇಕು. ರಾತ್ರಿ ಮಲಗುವ ಸಮಯಕ್ಕೆ ತುಂಬ ಹತ್ತಿರವಾಗಿ ಆಹಾರ ಸೇವನೆ ಮಾಡಿದಲ್ಲಿ ನಿದ್ದೆಯ ಗುಣಮಟ್ಟಕ್ಕೆ ಅಡ್ಡಿಯಾಗಬಹುದು. ಯಾವತ್ತು ಕೂಡ ಖಾಲಿ ಹೊಟ್ಟೆಯಲ್ಲಿ ವಕೌìಟ್ ಮಾಡಬಾರದು. ಯಾವಾಗಲೂ ಉಪಾಹಾರ ಸೇವಿಸದೇ ವಿಳಂಬ ಮಾಡುವವರಿಗೆ ಅಧಿಕ ರಕ್ತದ ಸಕ್ಕರೆ ಮಟ್ಟವಿರುತ್ತದೆ. ಇಂತಹವರಲ್ಲಿ ಟೈಪ್ 2 ಮಧುಮೇಹ ಬರವಂತಹ ಸಾಧ್ಯತೆಗಳು ಜಾಸ್ತಿ ಇರುತ್ತವೆ.
6ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿರುವಾಗ ಹೊಟ್ಟೆ ಖಾಲಿ ಇರುತ್ತದೆ. ಆದ್ದರಿಂದ ಶಕ್ತಿಗೆ ಕ್ಯಾಲೋರಿಯ ಆವಶ್ಯಕತೆ ಇರುತ್ತದೆ. ಈ ವಿಷಯಕ್ಕೆ ಯಾವಾಗಲೂ ಮೊದಲು ಆದ್ಯತೆ ನೀಡಬೇಕು. ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳಲು ಮತ್ತು ದೇಹದಲ್ಲಿನ ಪ್ರಮುಖ ಜೀವಕೋಶಗಳ ಕಾರ್ಯಕ್ಕೆ ಮತ್ತು ಸರಿಯಾದ ಚಟುವಟಿಕೆಗೆ ಆಹಾರದ ಆದ್ಯತೆ ಬೇಕಿದೆ. ವೈದ್ಯರು ಹೇಳಿದಂತೆ ನಿರ್ದಿಷ್ಠ ಕಾಯಿಲೆಗಳಿಗೆ ವಿವಿಧ ಆಹಾರ ಸೇವನೆ ತ್ಯಜಿಸುವುದು ಅಗತ್ಯ. ಆಹಾರ ಪದ್ಧತಿಯು ಬಾಯಿ ಮತ್ತು ಹಲ್ಲಿನ ಮೇಲೆ ಕೂಡ ಪರಿಣಾಮ ಬೀರುತ್ತದೆ. ಹೆಚ್ಚು ಸಕ್ಕರೆಯುಕ್ತ, ಜಿಗುಟಾದ ಆಹಾರ, ಜಂಕ್‌ಫುಡ್, ಚಾಕೋಲೇಟ್ ಸೇವನೆಯಿಂದ ದಂತಕ್ಷಯವಾಗಬಹುದು.
Related Articles
ಆಹಾರ ಸೇವನೆ ಎಷ್ಟು, ಏನು, ಯಾವಾಗ ಮಾಡಬೇಕೆನ್ನುವುದರ ಅರಿವು ನಮಗಿರಬೇಕು. ಕ್ರಮಬದ್ಧವಿಲ್ಲದ ಆಹಾರ ಎಲ್ಲ ಆರೋಗ್ಯ ಸಮಸ್ಯಗಳಿಗೆ ಕಾರಣವಾಗಿದೆ. ಮಧ್ಯಪಾನ, ಧೂಮಪಾನ, ರಾಸಾಯನಿಕಗಳು, ಕೃತಕ ಬಣ್ಣಗಳನ್ನು ಸೇರಿಸಿ ಮಾಡಿದ ಆಹಾರ ಮನುಷ್ಯನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಧ್ಯಾನ ವ್ಯಾಯಾಮದೊಂದಿಗೆ ಆಹಾರ ಪದ್ಧತಿಯನ್ನು ಸುಧಾರಿಸುವುದು ಅಗತ್ಯ.
Advertisement
ಆಹಾರ ಆಯ್ಕೆನಾವು ಸೇವಿಸುವ ಆಹಾರವು ದೈಹಿಕ, ಮಾನಸಿಕ ನಡವಳಿಕೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಸರಿಯಾದ ಆಹಾರ ಆಯ್ಕೆ ಮತ್ತು ದೇಹಕ್ಕೆ ಸರಿಯಾದ ಪ್ರಮಾಣದ ನೀರಿನ ಸೇವನೆಯು ಶಾಂತತೆಯ ಭಾವನೆಯನ್ನು ಹೆಚ್ಚಿಸುತ್ತದೆ. ಕಡಿಮೆ ತಿನ್ನುವುದರಿಂದ ದೈಹಿಕ ಮಾತ್ರವಲ್ಲದೇ ಮಾನಸಿಕವಾಗಿಯೂ ಕೂಡ ಪರಿಣಾಮವಾಗುತ್ತದೆ. ಹೆಚ್ಚು ಕೊಬ್ಬಿನ ಆಹಾರ ಸೇವನೆ ಬೊಜ್ಜಿಗೆ ಕಾರಣವಾಗಿ ಆಹಾರ ಪದ್ಧತಿಗೆ ಸಂಬಂಧಿಸಿದ ವಿವಿಧ ಮಾನಸಿಕ ಅಸ್ವಸ್ಥತೆಗಳಾದ ಒತ್ತಡ, ಬೇಸರ, ಆತಂಕಕ್ಕೆ ಕಾರಣವಾಗುತ್ತದೆ. - ಡಾ| ರಶ್ಮಿ ಭಟ್