ಸಾಮಾನ್ಯವಾಗಿ ಎಲ್ಲಾ ವೈದ್ಯರೂ, ಬೆಳಗ್ಗಿನ ತಿಂಡಿ ಮಾತ್ರ ಬಿಡಬೇಡಿ ಎಂದು ಹೇಳುತ್ತಾರೆ. ಆದರೆ, ಎಷ್ಟು ತಿನ್ನಬೇಕು ಎಂದು ಯಾರೂ ಹೇಳುವುದಿಲ್ಲ. ವೈದ್ಯರು ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತಾ, ಎಂಟು ಇಡ್ಲಿ ಅಥವಾ ನಾಲ್ಕು ದೋಸೆ ತಿನ್ನುವವರೂ ಇದ್ದಾರೆ. “ಬ್ರೇಕ್ ಫಾಸ್ಟ್ ಹೆವಿ’ ಆಯಿತೆಂದು ಯಾರೊಬ್ಬರೂ ಮಧ್ಯಾಹ್ನದ ಊಟವನ್ನೇನೂ ಕಮ್ಮಿ ಮಾಡುವುದಿಲ್ಲ. ಮಾಮೂಲಾಗಿಯೇ ಊಟ ಮಾಡುತ್ತಾರೆ. ಕೆಲವರಿಗೆ, ತಿಂಡಿ-ಊಟದ ಜೊತೆಗೆ, ಆಗಾಗ ಬಾಯಾಡಿಸಲು ಕುರುಕುಲು ತಿಂಡಿ ಬೇಕು. ಯಾರಾದರೂ ಮಸಾಲೆ ದೋಸೆ ತಿನ್ನಲು ಕರೆದರೆ, ಹೊಟ್ಟೆ ಎಷ್ಟೇ ಹೆವಿ ಇದ್ದರೂ, ಗ್ಯಾಸ್ ಇದ್ದರೂ ಇಂಥಾ ಸುವರ್ಣಾವಕಾಶವನ್ನು ಕಳೆದುಕೊಳ್ಳುವುದು ಹೇಗೆ? ಎನ್ನುತ್ತಾ ಹೊರಟೇ ಬಿಡುತ್ತಾರೆ. “ಹೊಟ್ಟೆಗೆ ಮೋಸ ಮಾಡಬಾರದು’ ಎಂದು ಸಮರ್ಥನೆ ಕೊಟ್ಟುಕೊಳ್ಳುತ್ತಾರೆ. ಹೊಟ್ಟೆ ತುಂಬಾ ತಿಂದು, “ಢರ್’ ಎಂದೊಮ್ಮೆ ತೇಗುತ್ತಾರೆ.
ಸಲಹೆ ನೀಡಲು ತುದಿಗಾಲಲ್ಲಿ ನಿಂತಿರುವ ನನ್ನಂತಹ ವೈದ್ಯರು ಸಿಕ್ಕರೆ, ದಿನಾ ಒನ್ ಅವರ್ ವಾಕಿಂಗ್ ಮಾಡಿದ್ರೂ ತೂಕ ಕಮ್ಮಿ ಆಗ್ತಿಲ್ಲಾ. ಶುಗರೂ ಕಮ್ಮಿ ಆಗ್ತಿಲ್ಲ, ಯಾಕೆ ಸಾರ್? ಎಂದು ಮುಗ್ಧರಂತೆ ಪ್ರಶ್ನಿಸುತ್ತಾರೆ. ತಿನ್ನುವ ವಿಷಯ ಎತ್ತಿದರೆ ಸಾಕು “ಅಯ್ಯೋ, ನಾನೇನೂ ತಿನ್ನೋದೇ ಇಲ್ಲಾ ಸಾರ್. ಆಫೀಸಲ್ಲಿ ಟೆನನ್ ಜಾಸ್ತಿ. ಅದಕ್ಕೇ ಎಲ್ಲಾ ಪ್ರಾಬ್ಲಿಮ್ಮು ‘.. ಎಂದು ನೆಪ ಹೇಳುತ್ತಾ ಜಾಗ ಖಾಲಿ ಮಾಡುತ್ತಾರೆ.
ತಿಂಡಿ ತಿನ್ನಿ. ಆದರೆ ಕಮ್ಮಿ ತಿನ್ನಿ. ಉದಾಹರಣೆಗೆ: ಎರಡು ದೋಸೆ ಅಥವಾ ಮೂರು ಇಡ್ಲಿಗೇ ಎದ್ದು ಬಿಡಿ. ಹೆಚ್ಚು ಹಸೀ ಕ್ಯಾರೆಟ್ಟು ಮತ್ತು ಸೌತೇ ಕಾಯಿ ತಿನ್ನಿ. ಊಟ ಹಿತವಾಗಿ, ಮಿತವಾಗಿ ಇರಲಿ. ಮಧ್ಯೆ ಮಧ್ಯೆ ಕುರುಕಲು ತಿಂಡಿ ಹೆಚ್ಚು ಬೇಡ. ನಮ್ಮ ತೂಕ, ನಾವು ತಿನ್ನುವ ಆಹಾರ ಮತ್ತು ಚಟುವಟಿಕೆಯನ್ನು ಅವಲಂಬಿಸಿರುತ್ತದೆ ಎಂದು ಅರ್ಥ ಮಾಡಿಕೊಂಡರೆ ಸಾಕು. ತೂಕ ಖಂಡಿತ ಕಮ್ಮಿಯಾಗುತ್ತದೆ. ಶುಗರ್ ಹಿಡಿತದಲ್ಲಿರುತ್ತದೆ. ಚಟುವಟಿಕೆಯಿಂದಿರಿ, ಆರೋಗ್ಯವಾಗಿರಿ, ಸುಖವಾಗಿರಿ.
ಡಾ. ಕೃಷ್ಣಮೂರ್ತಿ