Advertisement
ಹರ್ಷ ಕೆಫೆಯಲ್ಲಿ ಮಿನಿ ಮಸಾಲೆ ಹಾಗೂ ಸೆಟ್ ದೋಸೆ ಫೇಮಸ್. ಈ ಎರಡು ಮಾದರಿಯ ದೋಸೆ ರುಚಿಯನ್ನು ಸವಿಯಲು ಬೆಳಗ್ಗೆಯೇ ಜನರು ಹೋಟೆಲ್ ಎದುರು ಕ್ಯೂ ನಿಂತಿರುತ್ತಾರೆ. ಸಂಜೆಯೂ ಸಹ ಹೋಟೆಲ್‌ನಲ್ಲಿ ಕಾಲಿಡಲು ಜಾಗವಿರುವುದಿಲ್ಲ. ಹೋಟೆಲ್‌ನ ವಯಸ್ಸು ಮೂವತ್ನಾಲ್ಕು ವರ್ಷ. ಆಗಿನಿಂದ ಈವರೆಗೂ ರುಚಿ ಬದಲಾಗಿಲ್ಲ. ಎಲ್ಲಾ ಸಮಯದಲ್ಲೂ ದೋಸೆ ಸಿಗುವುದಿಲ್ಲ. ಹರ್ಷ ಕೆಫೆಯಲ್ಲಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆ ಮತ್ತು ಸಂಜೆ 4 ಗಂಟೆಯಿಂದ 8.30ರವರೆಗೆ ಮಾತ್ರ ದೋಸೆ ಸಿಗುತ್ತದೆ. ಕುಳಿತುಕೊಳ್ಳಲು ಜಾಗವಿಲ್ಲದಿದ್ದರೂ ದೋಸೆ ತಿನ್ನಲು ಕುಳಿತವರು ಮೇಲೆದ್ದು ಹೋಗುವವರೆಗೆ ಕಾದು ನಿಂತು ನಂತರ ದೋಸೆ ತಿಂದು ಹೋಗುತ್ತಾರೆ.
ನಿತ್ಯ 70 ಕೆಜಿ ಅಕ್ಕಿಯನ್ನು ರುಬ್ಬಲಾಗುತ್ತದೆ. ಕನಿಷ್ಠ 1000 ಜನರು ದೋಸೆ ತಿನ್ನಲು ಹೋಟೆಲ್‌ಗೆ ಬರುತ್ತಾರೆ. 3000ದಿಂದ 3200 ದೋಸೆವರೆಗೆ ಖಾಲಿಯಾಗುತ್ತದೆ. ಸೆಟ್ ದೋಸೆ, ಮಿನಿ ಮಸಾಲೆ ಜೊತೆಗೆ ಚಟ್ನಿ ಹಾಗೂ ಪಲ್ಯ ಕೂಡ ಸಿಗುತ್ತದೆ. ಇವುಗಳಲ್ಲದೆ ಮೃದುವಾದ ಇಡ್ಲಿ ಕೂಡ ಇಲ್ಲಿ ಫೇಮಸ್ಸು. ಹೋಟೆಲ್‌ನಲ್ಲಿ ಒಂದೆಡೆ ಅಕ್ಕಿ ಮತ್ತು ಚಟ್ನಿಯ ಗ್ರೆ„ಂಡರ್‌ಗಳು ಸದಾಕಾಲ ತಿರುಗುತ್ತಲೇ ಇರುತ್ತವೆ. ದೊಡ್ಡ ಹೆಂಚಿನ ಮೇಲೆ ಒಟ್ಟಿಗೆ 25 ರಿಂದ 30 ದೋಸೆ ಹಾಕಬಹುದು. ಕೆಲವೇ ನಿಮಿಷಗಳಲ್ಲಿ ಬಿಸಿಯಾದ, ಮೃದುವಾದ ಸೆಟ್‌ದೋಸೆ ಹಾಗೂ ಗರಿ ಗರಿಯಾದ ಮಿನಿ ಮಸಾಲೆ ದೋಸೆ ಸಿದ್ಧ. ದೋಸೆಯ ರುಚಿಗೆ ಮಾರುಹೋದವರು ಒಮ್ಮೆ ತಿಂದು ಮತ್ತೂಮ್ಮೆ ಆರ್ಡರ್ ಮಾಡುವುದೂ ಉಂಟು.
Related Articles
ಇಲ್ಲಿ ದೋಸೆ ಹಿಟ್ಟು ತಯಾರಿಸುವುದೇ ವೈಶಿಷ್ಟ್ಯ. ಸಾಮಾನ್ಯವಾಗಿ ಅಕ್ಕಿಯ ಜೊತೆ ಅನ್ನ ಅಥವಾ ಅವಲಕ್ಕಿ ಬೆರೆಸಿ ದೋಸೆ ಹಿಟ್ಟು ರುಬ್ಬುವುದುಂಟು. ಆದರೆ, ಹರ್ಷ ಕೆಫೆಯಲ್ಲಿ ಅನ್ನ ಅಥವಾ ಅವಲಕ್ಕಿಯನ್ನು ಹಾಕುವುದಿಲ್ಲ. ಎಲ್ಲರ ಮನೆಯ ದೋಸೆ ತೂತೇ ಎಂಬ ಮಾತಿದೆ. ಅದೇ ರೀತಿ ದೋಸೆ ಹಾಕಿದಾಗ ಹೆಚ್ಚು ತೂತುಗಳು ಬೀಳುವುದರಿಂದ ದೋಸೆ ಎಳೆಎಳೆಯಾಗಿ ತಿನ್ನಲು ಮೃದು ಹಾಗೂ ಹೆಚ್ಚು ರುಚಿಯಿಂದ ಕೂಡಿರುತ್ತದೆ. ಡಾಲ್ಡಾ ತುಪ್ಪದ ಜೊತೆ ನಂದಿನಿ ತುಪ್ಪವನ್ನು ಬೆರೆಸಿ ದೋಸೆಗೆ ಹಾಕಲಾಗುತ್ತದೆ. ಇದು ದೋಸೆ ರುಚಿಯ ಫ್ಲೇವರ್‌ನ್ನು ಹೆಚ್ಚಿಸುತ್ತದೆ. ಇದೇ ಹರ್ಷ ಕೆಫೆ ದೋಸೆಯ ಜನಪ್ರಿಯತೆ ಹಿಂದಿರುವ ಟಾಪ್ ಸೀಕ್ರೇಟ್.
Advertisement
ಈ ಹೋಟೆಲ್‌ನಲ್ಲಿ ಮಹಿಳೆಯರೂ ಸೇರಿದಂತೆ ಹದಿಮೂರು ಮಂದಿ ಕೆಲಸಗಾರರಿದ್ದಾರೆ. ಕೆಲಸಗಾರರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದಾಗಿ 20 ವರ್ಷಗಳ ಹಿಂದೆ ಇವರ ಜೊತೆಯಲ್ಲಿದ್ದವರು ಈಗಲೂ ಇದ್ದಾರೆ. ಕೆಲಸಗಾರರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ ಹೋಟೆಲ್ ಮಾಲೀಕ ಎಸ್.ಎಲ್.ಗೋಪಾಲ್.
ಗೋಪಾಲ್ ಮೂಲತಃ ಹಾಸನ ಜಿಲ್ಲೆ ಸಕಲೇಶಪುರದವರು. ಕೆಲಸಕ್ಕೆಂದು ಮಂಡ್ಯದ ಜಿ.ಹೆಚ್.ರಸ್ತೆಯಲ್ಲಿನ ಹರ್ಷ ಹೋಟೆಲ್‌ಗೆ ಬಂದು ಸೇರಿಕೊಂಡವರು. ಆ ಹೋಟೆಲ್ ಮಾಲೀಕ ಸತ್ಯನಾರಾಯಣ ಅಡಿಗರ ಗರಡಿಯಲ್ಲಿ 25 ವರ್ಷ ಪಳಗಿ, ಹೋಟೆಲ್ ಉದ್ಯಮದ ಕಸರತ್ತುಗಳನ್ನು ಕರಗತ ಮಾಡಿಕೊಂಡರು. ಅಡಿಗರು ಇಟ್ಟಿದ್ದ ಹೆಸರಿನಲ್ಲೇ ಸ್ವತಂತ್ರವಾಗಿ 1983ರಲ್ಲಿ ಕಲ್ಲಹಳ್ಳಿಯಲ್ಲಿ ಹರ್ಷ ಹೋಟೆಲ್ ಆರಂಭಿಸಿದರು. 1988ರಲ್ಲಿ ಈಗಿನ ಹರ್ಷ ಕೆಫೆಗೆ ನಾಂದಿ ಹಾಡಿದರು.
ಕೆಲಸಗಾರರನ್ನು ನಿರಂತರವಾಗಿ ದುಡಿಸಿಕೊಂಡರೆ ಅವರಿಗೂ ಶ್ರಮವಾಗುತ್ತದೆ. ಅದೇ ಸ್ವಲ್ಪಕಾಲ ಬಿಡುವು ಕೊಟ್ಟು ದುಡಿಸಿಕೊಳ್ಳುವುದರಿಂದ ಅವರ ದೇಹ, ಮನಸ್ಸಿಗೂ ಶ್ರಾಂತಿ ದೊರಕುವುದು. ಮತ್ತೆ ಫ್ರೆಶ್ ಆಗಿ ಕೆಲಸ ಆರಂಭಿಸಲು ಸಿದ್ಧರಾಗುತ್ತಾರೆ. ಇದರಿಂದ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಅದಕ್ಕಾಗಿಯೇ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದೇನೆ.
ಕೆಲಸ ಅಚ್ಚುಕಟ್ಟಾಗಿರಬೇಕು. ಗ್ರಾಹಕರಿಗೆ ಶುಚಿಯಾದ ಮತ್ತು ರುಚಿಯಾದ ಆಹಾರವನ್ನು ನೀಡಬೇಕೆನ್ನುವುದು ನನ್ನ ಧ್ಯೇಯ. ಅದಕ್ಕಾಗಿ ಅಡುಗೆ ಮನೆಯಿಂದ ಆರಂಭವಾಗಿ ಎಲ್ಲೆಡೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಎಲ್ಲಿಯೂ ಲೋಪವಾಗದಂತೆ ನಿಷ್ಠೆಯಿಂದ ಕಾರ್ಯನಿರ್ವಸುತ್ತಿದ್ದಾರೆ ಎನ್ನುತ್ತಾರೆ ಮಾಲೀಕ ಗೋಪಾಲ್ (ಗೋಪಿ). ಸುಮಾರು 33 ವರ್ಷಗಳ ಕಾಲ ಹೋಟೆಲ್‌ನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದ ಎಸ್.ಎಲ್.ಗೋಪಾಲ್ ಅವರು ಇದೀಗ ಹಿರಿಯ ಮಗ ಮಧುಕರ್‌ಗೆ ಜವಾಬ್ದಾರಿ ನೀಡಿ ತಾವು ಕೇವಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ತಂದೆಯ ಹಾದಿಯಲ್ಲೇ ಸಾಗಿರುವ ಮಗ ಕೂಡ ಜನರ ನಂಬಿಕೆಯನ್ನು ಹುಸಿಗೊಳಿಸದೆ ಒಂದೂವರೆ ವರ್ಷದಿಂದ ಹೋಟೆಲ್‌ನ ಜನಪ್ರಿಯತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಮಂಡ್ಯ ಮಂಜುನಾಥ್