Advertisement
ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರ ನಿವಾಸಿ ಅಯ್ಯಪ್ಪ ಸ್ವಾಮಿ (30), ಈಗಲ್ ಎಂಟರ್‌ಪ್ರೈಸಸ್ ಕಂಪನಿಯ ಸೇಲ್ಸ್ ಮ್ಯಾನೇಜರ್ ಮಾರುತಿ (36), ಕುಮಾರ ಪಾರ್ಕ್‌ನಲ್ಲಿರುವ ನಂದಿನಿ ಪಾರ್ಲರ್ ಮಾಲೀಕ ಶಿವಕುಮಾರ್ (44), ತಮಿಳುನಾಡಿನ ಧರ್ಮಪುರಿ ಮೂಲದ ಸುಕುಮಾರನ್ (67) ಬಂಧಿತರು.
Related Articles
Advertisement
ಎಲ್ಲವೂ ತಮಿಳುನಾಡಿನಲ್ಲೇ: ತಮಿಳುನಾಡಿನ ಈರೋಡ್‌ನಲ್ಲಿರುವ ಗೋದಾಮು ಒಂದನ್ನು ಆಯಿಲ್ ಪ್ಯಾಕೆಟ್ ತಯಾರಿಸಲೆಂದು ಸುಳ್ಳು ಹೇಳಿ ಬಾಡಿಗೆಗೆ ಪಡೆದಿದ್ದ ಅಯ್ಯಪ್ಪಸ್ವಾಮಿ, ಕೃಷ್ಣಗಿರಿಯಿಂದ ನಂದಿನಿ ತಪ್ಪದ ಪ್ಯಾಕೆಟ್‌ಗಳ ಮೇಲೆ ಪ್ರಿಂಟಿಂಗ್ ಮಾಡಲು ಬಳಸುವ ಪ್ರಿಂಟಿಂಗ್ ಸಿಲಿಂಡರ್‌ಗಳನ್ನು ತರಿಸಿಕೊಂಡಿದ್ದ. ಅದನ್ನು ಧರ್ಮಪುರಿಗೆ ಕೊಂಡೊಯ್ದು ಪ್ರಿಂಟಿಂಗ್ ಗೋದಾಮಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸುಕುಮಾರನ್ ಎಂಬಾತನಿಗೆ ಹಣ ನೀಡಿ 200 ಎಂಎಲ್, 500 ಎಂ.ಎಲ್. ಹಾಗೂ ಒಂದು ಲೀಟರ್ ಅಳತೆಯ ತುಪ್ಪದ ಕವರ್‌ಗಳನ್ನು ಸಿದ್ಧಪಡಿಸಿಕೊಳ್ಳತ್ತಿದ್ದ.
ಹೈದರಾಬಾದ್‌ನಲ್ಲಿ ಯಂತ್ರ ಖರೀದಿ: ಈ ಮಧ್ಯೆ ತುಪ್ಪವನ್ನು ಪ್ಯಾಕಿಂಗ್ ಮಾಡುವ ಯಂತ್ರವನ್ನು ಮಧ್ಯವರ್ತಿಯೊಬ್ಬರ ಮೂಲಕ ಹೈದರಾಬಾದ್‌ನಲ್ಲಿ ಖರೀದಿಸಿ ತನ್ನ ಗೋದಾಮಿನಲ್ಲಿ ಇರಿಸಿದ್ದ. ಅಲ್ಲದೆ, ನಂದಿನಿ ತುಪ್ಪದ ಚಿಹ್ನೆಯಿರುವ ಕಾಟನ್ ಬಾಕ್ಸ್‌ಗಳನ್ನು ಕೃಷ್ಣಗಿರಿಯಲ್ಲಿ ಹಾಗೂ ಅದಕ್ಕೆ ಅಂಟಿಸುವ ಟೇಪ್‌ಅನ್ನು ಪಾಂಡಿಚೇರಿಯಲ್ಲಿ ಪ್ರಿಂಟಿಂಗ್ ಮಾಡಿಸಿಕೊಂಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಕಲಿ ತುಪ್ಪವನ್ನು ಪರೀಕ್ಷೆ ಮಾಡಿ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಐಪಿಎಲ್ ಸಾಲ: ಆರೋಪಿ ಅಯ್ಯಪ್ಪಸ್ವಾಮಿಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹುಚ್ಚಿದ್ದು, ಇದಕ್ಕಾಗಿ ಅನಿಲ್ ಶ್ಯಾವಿಗೆ ನೀಡುತ್ತಿದ್ದ ಅಂಗಡಿ ಮಾಲೀಕರಿಂದ ಲಕ್ಷಾಂತರ ರೂ. ಸಾಲ ಪಡೆದು ಬೆಟ್ಟಿಂಗ್‌ನಲ್ಲಿ ಕಟ್ಟಿ ಸಂಕಷ್ಟಕೆ ಸಿಲುಕಿದ್ದ, ಪರಿಚಿತ ವ್ಯಕ್ತಿಯೊಬ್ಬರು ನೀಡಿದ ಸಲಹೆಯಿಂದ ನಕಲಿ ನಂದಿನಿ ತುಪ್ಪದ ದಂಧೆಗೆ ಇಳಿದಿದ್ದ.
ಪ್ಯಾಲೇಸ್ ಕಾರ್ಯಕ್ರಮಗಳಿಗೆ ವಿತರಣೆ: ಆಕ್ಟೋಬರ್ ವೇಳೆಗೆ ನಕಲಿ ತುಪ್ಪದ ದಂಧೆ ಆರಂಬಿಸಿದ ಅಯ್ಯಪ್ಪಸ್ವಾಮಿ ಹೆಚ್ಚು ಲಾಭಗಳಿಸಲು ಬೆಂಗಳೂರು ಪ್ಯಾಲೇಸ್‌ನಲ್ಲಿ ಅದ್ದೂರಿ ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳ ಆಯೋಜಕರು ಹಾಗೂ ಅಡುಗೆ ಗುತ್ತಿಗೆದಾರರನ್ನು ಸಂಪರ್ಕಿಸಿ, ಇಲ್ಲಿಯೂ ನಂದಿನಿ ತುಪ್ಪ ಎಂದು ನಕಲಿ ತುಪ್ಪವನ್ನು ಮಾರಾಟ ಮಾಡಿದ್ದ. ಇದುವರೆಗೆ 100ಕ್ಕೂ ಅಧಿಕ ಕೆ.ಜಿ. ತುಪ್ಪ ಮಾರಾಟ ಮಾಡಿದ್ದ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.
ಗ್ರಾಹಕರೊಬ್ಬರ ಮಾಹಿತಿ: ಕೆಲ ದಿನಗಳ ಹಿಂದೆ ಗ್ರಾಹಕರೊಬ್ಬರು ನಂದಿನಿ ಪಾರ್ಲರ್‌ನಲ್ಲಿ ನಂದಿನಿ ತುಪ್ಪ ಖರೀದಿಸಿದ್ದರು. ಬಳಸಿದಾಗ ವ್ಯತ್ಯಾಸ ಕಂಡು ಪಾರ್ಲರ್ ಮಾಲೀಕರಿಗೆ ದೂರು ನೀಡಿದ್ದರು. ಪಾರ್ಲರ್‌ನವರು ಕೆಎಂಎಫ್ ಅಧಿಕಾರಿಗಳಿಗೆ ದೂರಿತ್ತಿದ್ದರು. ಅದರಂತೆ ಕೆಎಂಎಫ್ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಎಂ.ಟಿ.ಕುಲಕರ್ಣಿ ಆಡುಗೋಡಿ ಠಾಣೆಯಲ್ಲಿ ನ.24ರಂದು ಪ್ರಕರಣ ದಾಖಲಿಸಿದ್ದರು. ಬಳಿಕ ಡಿಸಿಪಿ ಬೋರಲಿಂಗಯ್ಯ ಸೂಚನೆಯಂತೆ ತಂಡ ರಚನೆಯಾಗಿ ಕಾರ್ಯಾಚರಣೆ ನಡೆಸಲಾಗಿತ್ತು.
ರಾಜಕಾಲುವೆಗೆ ತುಪ್ಪ!: ಪ್ರಕರಣ ದಾಖಲಾಗುತಿದ್ದಂತೆ ಆಡುಗೋಡಿ ಪೊಲೀಸರು ಈಗಲ್ ಎಂಟರ್ ಪ್ರೈಸಸ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಮಾರುತಿ, ನಂದಿನಿ ಪಾರ್ಲರ್ ಮಾಲೀಕ ಶಿವಕುಮಾರ್‌ನನ್ನು ಬಂಧಿಸಿದ್ದರು. ಈ ವಿಚಾರ ತಿಳಿದ ಆರೋಪಿ ನಕಲಿ ತುಪ್ಪವನ್ನು ತನ್ನ ಮನೆ ಬಳಿಯಿರುವ ರಾಜಕಾಲುವೆಗೆ ಸುರಿದು ಪರಾರಿಯಾಗಲು ಯತ್ನಿಸಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.
15-18 ಲಕ್ಷ ಬಂಡವಾಳ ಹೂಡಿಕೆ: ಪ್ಯಾಕಿಂಗ್ ಮಾಡುವ ಯಂತ್ರ, ನಂದಿನಿ ತುಪ್ಪದ ಚೆಹ್ನೆ ಹೊಂದಿರುವ ಕವರ್‌ಗಳು, ಕಾಟನ್ ಬಾಕ್ಸ್‌ಗಳು, ಅಂಟಿಸುವ ಟೇಪ್‌ನ ಬಂಡಲ್, ತೂಕದ ಯಂತ್ರ ಹಾಗೂ 200 ಎಂ.ಎಲ್, 500 ಎಂಎಲ್ ಹಾಗೂ ಒಂದು ಲೀಟರ್‌ನ ತಲಾ 5 ಪ್ರಿಂಟಿಂಗ್ ಸಿಲಿಂಡರ್ ಹಾಗೂ ಅಚ್ಚುಗಳು, ಟೆಂಪೋ ಟ್ರಾವೆಲ್ಲರ್ ಖರೀದಿಗಾಗಿ 15ರಿಂದ 18 ಲಕ್ಷ ರೂ. ಹೂಡಿಕೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.