Advertisement
ಹೊಸ ಮರಳು ನೀತಿ ಪ್ರಕಾರ, ಗ್ರಾಮಗಳಲ್ಲಿ ನಾನ್ ಸಿಆರ್‌ಝಡ್ ವ್ಯಾಪ್ತಿಯ ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿ (ಅಂದರೆ ಹಳ್ಳ/ ತೊರೆ/ ತೋಡು/ ಕೆರೆ)ಗಳಲ್ಲಿ ಗುರುತಿಸಲಾದ ನಿಕ್ಷೇಪಗಳಿಂದ ಮರಳು ತೆಗೆಯಬಹುದು.
Related Articles
Advertisement
ಗ್ರಾಮ ಮಟ್ಟದಲ್ಲಿ ಮರಳು ಪಡೆಯುವವರು lಪಂಚಾಯತ್‌ಗೆ 1 ಟನ್‌ಗೆ 300 ರೂ. (150 ರೂ. ಸರಕಾರಕ್ಕೆ, ಬಾಕಿ ಪಂಚಾಯತ್‌ಗೆ) ಪಾವತಿಸಬೇಕು. 2 ಟನ್‌ಗೆ 600 ರೂ., 3 ಟನ್ (1 ಯೂನಿಟ್)ಗೆ 900 ರೂ. ಪಾವತಿಸಬೇಕು. ದಿಬ್ಬ ಅಥವಾ ಮಾರುಕಟ್ಟೆಯ ದರ ಪ್ರತೀ ಟನ್‌ಗೆ 600 ರೂ. ಇದೆ.
ಎಷ್ಟು ಮರಳು ಸಿಗುತ್ತದೆ?
ಒಂದು ಗ್ರಾಮದಲ್ಲಿ ಎಷ್ಟು ಜನರಿಗೆ ಅಗತ್ಯವಿದೆ? ಒಬ್ಬರಿಗೆ ಎಷ್ಟು ಟನ್ ನೀಡಬಹುದು? ಎಂದು ಲೆಕ್ಕಾಚಾರ ಮಾಡಿ ಕೊಡಲಾಗುತ್ತದೆ. ನಿಕ್ಷೇಪ ಇರುವ ಗ್ರಾಮಸ್ಥರಿಗೆ ಪ್ರಥಮ ಆದ್ಯತೆ. ಉಳಿದರೆ ಅಕ್ಕಪಕ್ಕದ ಗ್ರಾಮಸ್ಥರೂ ಪಡೆಯಬಹುದು.
ಅಗತ್ಯದಷ್ಟು ಸಿಗಬಹುದೇ? :
ಗ್ರಾಮದಲ್ಲಿ ಅಗತ್ಯವಿರುವ ಎಲ್ಲರಿಗೂ ಮರಳು ಕೊಡಬೇಕಿದ್ದು, ಹೊಸ ಮನೆ ಕಟ್ಟುವವರಿಗೆ ಈ ನಿಕ್ಷೇಪಗಳ ಮರಳು ಸಾಕಾಗಬಹುದೇ ಎನ್ನುವ ಪ್ರಶ್ನೆಯೂ ಇದೆ. ಯಾಕೆಂದರೆ ಗ್ರಾಮ ಮಟ್ಟದಲ್ಲಿ ಒಂದೆರಡು ಯೂನಿಟ್ ಮಾತ್ರ ಸಿಗಬಹುದಷ್ಟೇ. ಎಂಜಿನಿಯರ್‌ಗಳ ಪ್ರಕಾರ 1 ಸಾವಿರ ಚದರ ಅಡಿಯ ಮನೆಗೆ ಅಂದಾಜು 36 ಯೂನಿಟ್, ಒಂದೂವರೆ ಸಾವಿರ ಚ. ಅಡಿಯ ಮನೆಗೆ 48 ಯೂನಿಟ್, 2 ಸಾವಿರ ಚ. ಅಡಿ ಮನೆಗಾದರೆ 60 ಯೂನಿಟ್ ಮರಳು ಅಗತ್ಯ.
ಉಡುಪಿಯಲ್ಲಿ 34 ನಿಕ್ಷೇಪ :
ಕುಂದಾಪುರ ತಾಲೂಕು: ಕಾಳಾವರ, ಬೇಳೂರು, ಆಲೂರು ಗ್ರಾಮ ಪಂಚಾಯತ್‌ಗಳಲ್ಲಿ ತಲಾ 2
ಬೈಂದೂರು: ಶಿರೂರು 2, ಕಾಲ್ತೋಡು 1
ಹೆಬ್ರಿ: ಶಿವಪುರ, ವರಂಗ ತಲಾ 4, ಮುದ್ರಾಡಿ ಗ್ರಾಮ ಪಂಚಾಯತ್‌ಗಳಲ್ಲಿ 1
ಕಾರ್ಕಳ: ಶಿರ್ಲಾಲು 3, ಬೈಲೂರು, ಸೂಡಾ ತಲಾ 2, ಕಡ್ತಲ, ಹೆರ್ಮುಂಡೆ, ಮರ್ಣೆ, ಇನ್ನಾ, ಮುಡಾರು, ಕೆರ್ವಾಶೆ, ಎರ್ಲಪಾಡಿ, ಪಳ್ಳಿ, ಸಾಣೂರು ತಲಾ 1.
ದ.ಕ.: 15 ಕಡೆ ಗುರುತು :
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 3 ಕಡೆಗಳಲ್ಲಿ ನಿಕ್ಷೇಪಗಳನ್ನು ಗುರುತಿಸಿ, ಜಿಲ್ಲಾಧಿಕಾರಿ ಮಟ್ಟದ ಸಮಿತಿಗೆ ಅನುಮೋದನೆಗಾಗಿ ಕಳುಹಿಸಲಾಗಿದೆ. ಪುತ್ತೂರು, ಸುಳ್ಯ ತಾಲೂಕಿನ 15 ಕಡೆ ಗುರುತಿಸಲಾಗಿದ್ದು, ತಾಲೂಕು ಸಮಿತಿಯಲ್ಲಿದೆ. ಜಿಲ್ಲೆಯಲ್ಲಿ ಸುಮಾರು 30 ಮರಳು ನಿಕ್ಷೇಪಗಳು ಸಿಗಬಹುದು ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಏನೆಲ್ಲ ನಿಯಮಗಳು?
ಮರಳು ತೆಗೆಯುವವರು ಗ್ರಾ.ಪಂ.ಗೆ ರಾಯಧನ ಪಾವತಿಸಬೇಕು.
ಟಿಪ್ಪರ್, ಲಾರಿಗಳಲ್ಲಿ ಸಾಗಿಸುವಂತಿಲ್ಲ. 2 ಟನ್‌ಗಿಂತ ಕಡಿಮೆ ತೂಕದ (ಎತ್ತಿನಗಾಡಿ, ಟ್ರ್ಯಾಕ್ಟರ್, ರಿಕ್ಷಾ) ವಾಹನಗಳಲ್ಲಿ ಮಾತ್ರ ಸಾಗಿಸಬಹುದು.
ಒಂದು ವಾಹನದಲ್ಲಿ 3 ಟನ್‌ಗಿಂತ ಹೆಚ್ಚು ಮರಳು ಸಾಗಿಸುವಂತಿಲ್ಲ.
ಮರಳು ಪಡೆಯುವವರು ಜಾಗದ ಆರ್‌ಟಿಸಿ, ಮನೆಗೆ ಸಂಬಂಧಿಸಿದ ದಾಖಲೆಗಳು, ತೆರಿಗೆ ರಶೀದಿ, ಇತರ ಕಟ್ಟಡವಾದರೆ ಸಂಬಂಧಿಸಿದ ದಾಖಲೆ ಸಲ್ಲಿಸಬೇಕು.
ಮನೆಯ ಅಗತ್ಯಕ್ಕೆ ಮಾತ್ರ ಒಯ್ಯಬೇಕು. ಮಾರುವಂತಿಲ್ಲ, ಸಂಗ್ರಹಿಸಿಡುವಂತೆಯೂ ಇಲ್ಲ.
ಕೊಂಡೊಯ್ಯಲು ಅಗತ್ಯವಿರುವವರೇ ಬರಬೇಕು.
ತಾಲೂಕು ಸಮಿತಿಯಿಂದ ಗ್ರಾಮಗಳಲ್ಲಿ ಮರಳು ನಿಕ್ಷೇಪಗಳನ್ನು ಗುರುತಿಸಿ, ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ಅನುಮೋದನೆಗೆ ಕಳುಹಿಸಲಾಗುತ್ತದೆ. ಅವರು ಅನುಮೋದನೆ ಕೊಟ್ಟ ಬಳಿಕ ಮರಳು ತೆಗೆಯಲು ಆಯಾ ಗ್ರಾ.ಪಂ.ಗಳಿಗೆ ಆಶ್ರಯ ಪತ್ರ ನೀಡಲಾಗುವುದು. – ಡಾ| ನವೀನ್ ಭಟ್ ಮತ್ತು ಡಾ| ಆರ್. ಸೆಲ್ವಮಣಿ, ಜಿ.ಪಂ. ಸಿಇಒಗಳು, ಉಡುಪಿ, ದ.ಕ.