ಚಿಕ್ಕಮಗಳೂರು : ಹೂ ಎತ್ತಿದ್ದಷ್ಟು ಸುಲಭದಲ್ಲಿ ಆಗುವ ಕೆಲಸಕ್ಕೆ ಕಾಂಗ್ರೆಸ್ ನವರು ಕೊಡಲಿ ಏಕೆ ತೆಗೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಶನಿವಾರ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಕುರಿತು ಮಾತನಾಡಿದ ಅವರು ,ಸುಲಭದ ಕೆಲಸಕ್ಕೆ ಕಾಂಗ್ರೆಸ್ಸಿಗರು ಕಷ್ಟ ಪಡುತ್ತಿದ್ದಾರೆ
ಮೇಕೆದಾಟುವಿಗೆ ಬಿಜೆಪಿ ಅಡ್ಡಿಯಾಗಿಲ್ಲ, ಕೇಂದ್ರವೂ ಒಪ್ಪಿಗೆ ನೀಡಿದೆ. ಮೇಕೆದಾಟುವಿಗೆ ಅಡ್ಡಿಯಾಗಿರೋದು ತಮಿಳುನಾಡು ಸರ್ಕಾರ. ಅಲ್ಲಿ ಡಿಎಂಕೆ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರಿಕೆಯೂ ಇದೆ. ಕಾಂಗ್ರೆಸ್ ನಾಯಕರು ತಮಿಳುನಾಡು ಸರ್ಕಾರದ ಕಾಂಗ್ರೆಸ್ ನಾಯಕರು ಮನವೊಲಿಸಲಿ ಎಂದರು.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮಾತನ್ನು ತಮಿಳುನಾಡಿನವರು ಕೇಳುತ್ತಾರೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬಂದಿತ್ತು. ಡಿ.ಕೆ.ಶಿವಕುಮಾರ್ ಅವರು ಕೇಂದ್ರದ ನಾಯಕರುಗಳಿಗೆ ಸಹಾಯ ಮಾಡಿದ್ದಾರೆ. ತಮಿಳುನಾಡು ಸರ್ಕಾರದ ಮನವೊಲಿಸಿದರೆ ಪಾದಯಾತ್ರೆ ನಡೆಸುವ ಅಗತ್ಯವೇ ಇಲ್ಲ.ನಿಯಮ ಉಲ್ಲಂಘಿಸುವುದು, ಕೊರೊನ ಬರಿಸಿಕೊಳ್ಳುವುದು ಎಲ್ಲವೂ ತಪ್ಪುತ್ತದೆ ಎಂದರು.
ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ
ನನ್ನನ್ನ ಜ್ಯೋತಿಷಿ ಅಂತಾ ಬೇಕಾದರೂ ಕರೆಯಿರಿ, ರಾಜಕೀಯ ವಿಚಾರದಲ್ಲಿ ಆಳವಾದ ಜ್ಞಾನವಿರುವವನು ಎಂದಾದರೂ ಕರೆಯಿರಿ ಇಲ್ಲಾ ಸಾಮಾನ್ಯ ಮತದಾರ ಎಂದಾದರೂ ಕರೆಯಿರಿ ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ , ಬಿಜೆಪಿ ಸುಧಾರಿಸುತ್ತದೆ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಪಂಚರಾಜ್ಯ ಚುನಾವಣೆ ಕುರಿತು ಭವಿಷ್ಯ ನುಡಿದರು.