Advertisement

ಸುಲಭದ ವಿಮಾ ಯೋಜನೆ: ಜನರಲ್ಲಿ ಅರಿವಿನ ಕೊರತೆ

01:52 AM Mar 29, 2021 | Team Udayavani |

ಉಡುಪಿ: ಉಡುಪಿ ಜಿಲ್ಲೆಯ ಜನಸಂಖ್ಯೆ 2011ರ ಜನಗಣತಿ ಪ್ರಕಾರ 11 ಲಕ್ಷ. ಬ್ಯಾಂಕುಗಳಲ್ಲಿರುವ ಒಟ್ಟು ಖಾತೆಗಳ ಸಂಖ್ಯೆ 20,01,243. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ (ಪಿಎಂಎಸ್‌ಬಿವೈ) ಹೆಸರು ನೋಂದಾಯಿಸಿದ ಖಾತಾದಾರರು 3,27,617, ಪ್ರಧಾನಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆಯಡಿ (ಪಿಎಂಜೆಜೆಬಿವೈ) ನೋಂದಾಯಿಸಿದ ಖಾತಾದಾರರು 2,98,812. ಈ ಸಾಮಾಜಿಕ ಭದ್ರತಾ ಯೋಜನೆಯಡಿ ವಿಮಾ ಕ್ಲೇಮ್‌ ಮಾಡಿದವರ ಸಂಖ್ಯೆ 1,086. ಆರ್ಥಿಕ ಮಾನದಂಡಗಳಿಲ್ಲ
ಸಾಮಾಜಿಕ ಭದ್ರತಾ ಯೋಜನೆಯಡಿ ನೋಂದಾಯಿಸಲು ಯಾವುದೇ ಆರ್ಥಿಕ ಮಾನದಂಡಗಳಿಲ್ಲ. ಕೇವಲ ವಯಸ್ಸಿನ ಮಾನದಂಡ ಮಾತ್ರ ಇದೆ. ಪಿಎಂಎಸ್‌ಬಿವೈ ನೋಂದಣಿಗೆ 18ರಿಂದ 70 ವರ್ಷ, ಪಿಎಂಜೆಜೆಬಿವೈಗೆ ನೋಂದಣಿಯಾಗಲು 18ರಿಂದ 50 ವರ್ಷದವರು ಅರ್ಹರು ಮತ್ತು 55 ವರ್ಷದವರೆಗೆ ನವೀಕರಿಸ ಬಹುದು. ಪಿಎಂಎಸ್‌ಬಿವೈ ಪ್ರೀಮಿಯಂ ಮೊತ್ತ ವಾರ್ಷಿಕ ಕೇವಲ 12 ರೂ., ಪಿಎಂಜೆಜೆಬಿವೈ ಪ್ರೀಮಿಯಂ ಮೊತ್ತ ವಾರ್ಷಿಕ 330 ರೂ. ಈ ಮೊತ್ತ ಖಾತಾದಾರರಿಂದ ವಿಮಾ ಕಂಪೆನಿಗೆ ವರ್ಷಕ್ಕೊಮ್ಮೆ ಜಮೆಯಾಗುತ್ತದೆ. ಇಷ್ಟು ಮೊತ್ತ ಖಾತೆಯಲ್ಲಿ ಇರಬೇಕಷ್ಟೆ. ಪಿಎಂಜೆಜೆಬಿವೈ ನಲ್ಲಿ ಯಾವುದೇ ರೀತಿಯ ಮರಣ
ಹೊಂದಿದರೂ ವಿಮಾ ಮೊತ್ತ ಕ್ಲೇಮ್‌ ಮಾಡಬಹುದು. ಪಿಎಂಎಸ್‌ಬಿವೈನಲ್ಲಿ ಅಪಘಾತದ ಮರಣಕ್ಕೆ ಮಾತ್ರ ವಿಮಾ ಮೊತ್ತ ಕ್ಲೇಮ್‌ ಮಾಡಬಹುದು. ಎರಡೂ ಕ್ರಮಗಳಲ್ಲಿಯೂ 2 ಲ.ರೂ. ಮೊತ್ತ ಮೃತಪಟ್ಟವರ ವಾರಸುದಾರರಿಗೆ ಸಿಗುತ್ತದೆ.

Advertisement

ಪಿಎಂಎಸ್‌ಬಿವೈನಡಿ ಅಪಘಾತದಿಂದ ಸಂಪೂರ್ಣ/ ಆಂಶಿಕ ಅಂಗವಿಕಲರಾದರೂ ವಿಮೆ ಸೌಲಭ್ಯವಿದೆ. ಅವಧಿ
ಮುಗಿದ ಬಳಿಕ ಮೃತಪಟ್ಟರೆ, ಅವಘಡ ಸಂಭವಿಸಿದರೆ ವಿಮಾ ಮೊತ್ತ ಸಿಗುವುದಿಲ್ಲ. ಒಬ್ಬರೇ ವ್ಯಕ್ತಿ 50 ವರ್ಷದೊಳಗಿದ್ದರೆ ಎರಡೂ ವಿಮೆಗಳಿಗೆ ನೋಂದಣಿ ಮಾಡಬಹುದು. ಒಬ್ಬರೇ ವ್ಯಕ್ತಿ ಬೇರೆ ಬ್ಯಾಂಕ್‌ಗಳಲ್ಲಿ ಮಾಡಿಸುವಂತಿಲ್ಲ.

ಕ್ಲೇಮ್‌ ಕಡಿಮೆ ಏಕೆ?
ಮೃತಪಟ್ಟ ಬಳಿಕ ವಾರಸುದಾರರಿಗೆ ಈ ವಿಷಯ ಗೊತ್ತಿರುವುದಿಲ್ಲ. ಹೀಗಾಗಿ ವಿಮೆಯ ಕ್ಲೇಮ್‌ ಆಗುತ್ತಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿ ಲಿಖೀತ ದಾಖಲೆಗಳಿಲ್ಲದಿರುವುದೂ ಒಂದು ಕಾರಣವಾಗಿದೆ. ಖಾತಾ ಪುಸ್ತಕಗಳಲ್ಲಿ ಸೀಲು ಹಾಕಿದ್ದರೂ ಇದನ್ನು ವಾರಸುದಾರರು ಗಮನಿಸಿರುವುದಿಲ್ಲ.

ಜನಜಾಗೃತಿ ರೂಪಿಸಲು ಸೂಚನೆ
ಎಲ್ಲ ಆರ್ಥಿಕ ವಲಯದವರು ಅರ್ಹ ರಾದರೂ ನರೇಗಾ ಕಾರ್ಮಿಕರು, ಸ್ವತ್ಛತಾ ನೌಕರರು, ಕೊರಗ ಸಮುದಾಯ ಹೀಗೆ ಕಡು ಬಡ ವರ್ಗಗಳ ಎಲ್ಲರನ್ನೂ ಯೋಜನೆಯಡಿ ಹೆಸರು ನೋಂದಾಯಿಸ ಬೇಕು ಎನ್ನುತ್ತಾರೆ ಬ್ಯಾಂಕಿಂಗ್‌ ಸಮಿತಿಯ ಜಿಲ್ಲಾಧ್ಯಕ್ಷರಾದ ಜಿ.ಪಂ. ಸಿಇಒ ಉಡುಪಿಯ ಡಾ| ನವೀನ್‌ ಭಟ್‌.

ಇನ್ನೂ ಕಾಲ ಮಿಂಚಿಲ್ಲ
ಈಗಾಗಲೇ ಬ್ಯಾಂಕ್‌ ಖಾತೆ ಹೊಂದಿದವರೂ ಬ್ಯಾಂಕ್‌ಗೆ ತೆರಳಿ ಅರ್ಜಿ ನಮೂನೆಯನ್ನು ತುಂಬಿಸಿ ಕೊಡಬಹುದು. ಜತೆಗೆ ಆಧಾರ್‌ ಕಾರ್ಡ್‌ನ್ನು ನೀಡಬೇಕು. ಹೆಚ್ಚು ಸಂಖ್ಯೆಯಲ್ಲಿ ನೋಂದಣಿ ಮಾಡಲು ಬ್ಯಾಂಕ್‌ ಪ್ರಬಂಧಕರಿಗೆ ತಿಳಿಸಲಾಗಿದೆ. ಬ್ಯಾಂಕ್‌ನ ವಿತ್ತೀಯ ಸಾಕ್ಷರತಾ ಕೇಂದ್ರಗಳ ಸಭೆಗಳಲ್ಲಿ ಇದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಮರಣ ಸಂಭವಿಸಿದ ಬಳಿಕ ಒಂದು ತಿಂಗಳೊಳಗೆ ಯಾವ ಬ್ಯಾಂಕ್‌ನಲ್ಲಿ ನೋಂದಣಿ ಮಾಡಿದ್ದಾರೋ ಅಲ್ಲಿ ಅರ್ಜಿಯನ್ನು ತುಂಬಿಸಿ ಮರಣ ಪ್ರಮಾಣಪತ್ರದೊಂದಿಗೆ ಸಲ್ಲಿಸಬೇಕು.
-ರುದ್ರೇಶ್‌ ಡಿ.ಸಿ., ಪ್ರವೀಣ್‌ ಎಂ.ಪಿ., ಜಿಲ್ಲಾ ಅಗ್ರಣಿ ಬ್ಯಾಂಕ್‌ ಪ್ರಬಂಧಕರು, ಉಡುಪಿ ಮತ್ತು ದ.ಕ. ಜಿಲ್ಲೆ.

Advertisement

ನೋಂದಣಿಗೆ ಬ್ಯಾಂಕ್‌ ಆಸಕ್ತಿ ವಹಿಸಲಿ
ನೋಂದಣಿ ಸಂಖ್ಯೆಯನ್ನು ಹೆಚ್ಚಿಸಿದಲ್ಲಿ ಮರಣ ಪ್ರಮಾಣಪತ್ರದಲ್ಲಿ ವಾರಸುದಾರರ ಗಮನ ಸೆಳೆಯುವಂತೆ ಟಿಪ್ಪಣಿ ಹಾಕಿಸಲು ಸರಕಾರವನ್ನು ಕೇಳಬಹುದು. ಮುಖ್ಯವಾಗಿ ಕಡು ಬಡವರ್ಗಗಳ ಸದಸ್ಯರ ನೋಂದಣಿಗೆ ಬ್ಯಾಂಕ್‌ನವರು ಆಸಕ್ತಿ ವಹಿಸಬೇಕು.
-ಡಾ|ನವೀನ್‌ ಭಟ್‌, ಜಿ.ಪಂ. ಸಿಇಒ, ಉಡುಪಿ.

ಯೋಜನೆಯ ತಿಳಿವಳಿಕೆ ಅಗತ್ಯ
ಖಾತೆಗಳನ್ನು ತೆರೆಯುವಾಗಲೇ ಖಾತಾದಾರರಿಗೆ ಯೋಜನೆ ಕುರಿತು ತಿಳಿವಳಿಕೆ ಮೂಡಿಸುವಂತೆ ಶಾಖೆಗಳ ಪ್ರಬಂಧಕರಿಗೆ ತಿಳಿಸಿದ್ದೇವೆ. ಯಾರೂ ಸಹ 12 ರೂ. ಪ್ರೀಮಿಯಂ ಮೊತ್ತ ಪಾವತಿಸಲು ಹಿಂದೇಟು ಹಾಕುವುದಿಲ್ಲ. 330 ರೂ. ಪ್ರೀಮಿಯಂ ಯೋಜನೆಗೆ ಮಾತ್ರ ಅವರ ಗಮನಕ್ಕೆ ತರಬಹುದು.
-ಡಾ| ವಾಸಪ್ಪ, ಪ್ರಾದೇಶಿಕ ಪ್ರಬಂಧಕರು, ಯೂನಿಯನ್‌ ಬ್ಯಾಂಕ್‌, ಉಡುಪಿ.

2015ರಿಂದ ಯೋಜನೆ ಜಾರಿ
ಎಲ್ಲ ಖಾತಾದಾರರೂ (ವಯೋಮಾನ ಮಾನದಂಡ ದೊಳಗೆ ಬರುವವರು ಮಾತ್ರ) ಯೋಜನೆಯಡಿ ಹೆಸರು ನೋಂದಾಯಿಸಲು ಅರ್ಹರು. 2015ರಿಂದ ಯೋಜನೆ ಜಾರಿಯಲ್ಲಿದ್ದರೂ ಜನರಲ್ಲಿ ಯೋಜನೆಯ ಕುರಿತು ಅರಿವು, ಜಾಗೃತಿ ಇಲ್ಲದಿರುವುದು ಇದಕ್ಕೆ ಕಾರಣ. ಬ್ಯಾಂಕ್‌ ಖಾತೆ ತೆರೆಯುವಾಗ ಜನಧನ್‌ ಮತ್ತು ಶೂನ್ಯ ಶುಲ್ಕದ ಖಾತೆ ಎಂಬೆರಡು ವಿಧಗಳಿದ್ದರೂ ಎಲ್ಲ ಖಾತೆದಾರರೂ ಹೆಸರನ್ನು ನೋಂದಾಯಿಸಬಹುದಾಗಿದೆ ಎಂಬ ಅರಿವೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next