Advertisement

ರಾಜ್ಯದಲ್ಲಿ ಕೈಕೊಟ್ಟ ಪೂರ್ವ ಮುಂಗಾರು

10:32 PM May 17, 2019 | Lakshmi GovindaRaj |

ಮಂಗಳೂರು: ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಿಂದ ಮೇ ಅಂತ್ಯದವರೆಗೆ ರಾಜ್ಯದಲ್ಲಿ ಸುರಿಯುವ ಪೂರ್ವ ಮುಂಗಾರು ಮಳೆ, ಪ್ರಸಕ್ತ ವರ್ಷ ತೀರಾ ಕಡಿಮೆಯಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಶೇ.44ರಷ್ಟು ಕೊರತೆಯಾಗಿದೆ. ಇದರಿಂದಾಗಿ ಬರದ ತೀವ್ರತೆ ಮತ್ತಷ್ಟು ಹೆಚ್ಚಿದೆ.

Advertisement

ಪ್ರತಿ ವರ್ಷ ಕರಾವಳಿ ಸಹಿತ ಮಲೆನಾಡು ಪ್ರದೇಶಗಳಲ್ಲಿ ಪೂರ್ವ ಮುಂಗಾರು, ಮುಂಗಾರು ಮತ್ತು ಹಿಂಗಾರು ಉತ್ತಮವಾಗಿರುತ್ತದೆ. ಆದರೆ, ಈ ಬಾರಿ ಇಡೀ ರಾಜ್ಯದಲ್ಲಿಯೇ ಪೂರ್ವ ಮುಂಗಾರು ದುರ್ಬಲವಾಗಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆ ಹೊರತುಪಡಿಸಿದರೆ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣದಲ್ಲಿ ಕೊರತೆ ಇದೆ.

ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಾರ್ಚ್‌ನಿಂದ ಮೇ 19ರ ವರೆಗೆ ವಾಡಿಕೆಗಿಂತ ಶೇ.5ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ. 88.3 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, 92.6 ಮಿ.ಮೀ. ಮಳೆ ಸುರಿದಿದೆ. ಕೋಲಾರ ಜಿಲ್ಲೆಯಲ್ಲಿ 66 ಮಿ.ಮೀ.ವಾಡಿಕೆ ಮಳೆಯಾಗಬೇಕಿತ್ತು. 73.9 ಮಿ.ಮೀ.ಮಳೆಯಾಗಿ ಶೇ.12ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ.

2018ರಲ್ಲಿ ಕರಾವಳಿ ಭಾಗದಲ್ಲಿಯೇ ಅತಿ ಹೆಚ್ಚು ಪೂರ್ವ ಮುಂಗಾರು ಮಳೆ ಸುರಿದಿತ್ತು. 178.8 ಮಿ.ಮೀ.ವಾಡಿಕೆ ಮಳೆಯಾಗಬೇಕಿದ್ದು, 334.9 ಮಿ.ಮೀ.ಮಳೆಯಾಗಿ ಶೇ.87ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಶೇ.172 ಹೆಚ್ಚುವರಿ ಮಳೆಯಾಗಿತ್ತು. ರಾಯಚೂರಿನಲ್ಲಿ ಶೇ.45ರಷ್ಟು ಮಳೆ ಕೊರತೆ ಉಂಟಾಗಿತ್ತು.

ಮೊದಲ ಸ್ಥಾನದಲ್ಲಿದೆ ಬೀದರ್‌ ಜಿಲ್ಲೆ: ಈ ವರ್ಷ ಪೂರ್ವ ಮುಂಗಾರು ಮಳೆ ಕೊರತೆ ಉಂಟಾಗಿರುವ ರಾಜ್ಯದ ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ಉತ್ತರ ಒಳನಾಡಿನ ಬೀದರ್‌ ಜಿಲ್ಲೆ ಮೊದಲನೇ ಸ್ಥಾನದಲ್ಲಿದ್ದು, 41.4 ಮಿ.ಮೀ. ವಾಡಿಕೆ ಮಳೆಯಾಗುವಲ್ಲಿ ಕೇವಲ 11.7 ಮಿ.ಮೀ.ಮಳೆಯಾಗಿ ಶೇ.72ರಷ್ಟು ಮಳೆ ಕೊರತೆ ಎದುರಿಸುತ್ತಿದೆ.

Advertisement

ಎರಡನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆ ಇದ್ದು, 58.4 ಮಿ.ಮೀ.ವಾಡಿಕೆ ಮಳೆಯಾಗಬೇಕು. ಆದರೆ, ಸುರಿದದ್ದು ಕೇವಲ 17 ಮಿ.ಮೀ., ಇದರಿಂದ ಶೇ 71 ರಷ್ಟು ಮಳೆ ಕೊರತೆ ಇದೆ. ಮೂರನೇ ಸ್ಥಾನದಲ್ಲಿ ರಾಯಚೂರು ಜಿಲ್ಲೆ ಇದ್ದು, 35.1 ಮಿ.ಮೀ. ವಾಡಿಕೆ ಮಳೆಯಲ್ಲಿ 10.5 ಮಿ.ಮೀ. ಮಳೆ ಸುರಿದು ಶೇ 70ರಷ್ಟು ಮಳೆ ಕೊರತೆ ಇದೆ. ಉಡುಪಿ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದ್ದು, ಇಲ್ಲಿ 66.8 ಮಿ.ಮೀ. ವಾಡಿಕೆ ಮಳೆಯಾಗಬೇಕು. ಕೇವಲ 21.8 ಮಿ.ಮೀ. ಮಳೆ ಸುರಿದು ಶೇ. 67ರಷ್ಟು ಮಳೆ ಕೊರತೆ ಉಂಟಾಗಿದೆ.

ಗರಿಷ್ಠ ಉಷ್ಣಾಂಶದಿಂದ ಮೀನುಗಾರಿಕೆಗೆ ತೊಂದರೆ: ಕರಾವಳಿ ಭಾಗದಲ್ಲಿ ಈಗಿನ ಹವಾಮಾನ ವೈಪರಿತ್ಯದಿಂದಾಗಿ ಮೀನುಗಾರಿಕೆಗೂ ಪೆಟ್ಟು ಬಿದ್ದಿದೆ. ಬಿಸಿಲಿನ ಬೇಗೆಯಿಂದ ಆಳ ಸಮುದ್ರದಲ್ಲಿ ಅಂದುಕೊಂಡಷ್ಟು ಮೀನು ಸಿಗುತ್ತಿಲ್ಲ. ಉಷ್ಣಾಂಶದ ಏರಿಕೆಯಿಂದ ಆಳದಲ್ಲಿರುವ ಮೀನು ಮೇಲೆ ಬರುತ್ತಿಲ್ಲ. ಇದರಿಂದಾಗಿ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಮೀನುಗಾರ ಮುಖಂಡರು.

ಈ ಬಾರಿಯ ಪೂರ್ವ ಮುಂಗಾರು ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಕ್ಷೀಣಿಸಿದೆ. ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಇದ್ದು, ಗಾಳಿಯ ಒತ್ತಡ ಕಡಿಮೆ ಇರುವ ಕಾರಣದಿಂದಾಗಿ ಬೆಂಗಳೂರು ಸಹಿತ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ.
-ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ

ವಿಭಾಗವಾರು ಮಳೆ ಕೊರತೆ
ವಿಭಾಗ ವಾಡಿಕೆ ಮಳೆ (ಮಿ.ಮೀ.) ಸುರಿದ ಮಳೆ (ಮಿ.ಮೀ.) ಮಳೆ ಕೊರತೆ (ಶೇ.ವಾರು)
-ದಕ್ಷಿಣ ಒಳನಾಡು 85.9 63.5 26
-ಉತ್ತರ ಒಳನಾಡು 47.8 20.9 56
-ಮಲೆನಾಡು 106.9 54.7 49
-ಕರಾವಳಿ 66.8 30.7 54
-ರಾಜ್ಯ 69.9 39.4 44

* ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next