Advertisement

ಕರಾವಳಿಯಾದ್ಯಂತ ಈಸ್ಟರ್‌ ಆಚರಣೆ

12:14 AM Apr 22, 2019 | sudhir |

ಮಂಗಳೂರು/ ಕಲ್ಲುಗುಂಡಿ/ಉಡುಪಿ: ಕ್ರೈಸ್ತರು ಎ. 21ರಂದು ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರನ್ನು ಚರ್ಚ್‌ಗಳಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿದರು.

Advertisement

ಚರ್ಚ್‌ಗಳಲ್ಲಿ ಶನಿವಾರ ರಾತ್ರಿ ಮತ್ತು ರವಿವಾರ ಬೆಳಗ್ಗೆ ಈಸ್ಟರ್‌ ಹಬ್ಬದ ಬಲಿಪೂಜೆಗಳು ನಡೆದವು. ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಶನಿವಾರ ರಾತ್ರಿ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಹಾಗೂ ರವಿವಾರ ಬೆಳಗ್ಗೆ ಸುಳ್ಯ ತಾಲೂಕು ಸಂಪಾಜೆ ಸೈಂಟ್‌ ಫ್ರಾನ್ಸಿಸ್‌ ಝೇವಿಯರ್‌ ಚರ್ಚ್‌ನಲ್ಲಿ ಹಬ್ಬದ ಬಲಿ ಪೂಜೆಯ ನೇತೃತ್ವ ವಹಿಸಿದ್ದರು.

ಆಯಾ ಚರ್ಚ್‌ ಗಳಲ್ಲಿ ಸ್ಥಳೀಯ ಧರ್ಮಗುರುಗಳ ಮುಖಂಡತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಕಾರ್ಯ ಕ್ರಮ ಆರಂಭವಾಯಿತು. ಹೊಸ ಅಗ್ನಿಯಿಂದ ಈಸ್ಟರ್‌ ಮೊಂಬತ್ತಿಯನ್ನು ಧರ್ಮಾಧ್ಯಕ್ಷರು/ ಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಕ್ರೈಸ್ತರು ಆ ಅಗ್ನಿಯ ಮೂಲಕ ಮೇಣದ ಬತ್ತಿಗಳನ್ನು ಉರಿಸಿ ಪ್ರಾರ್ಥನೆ ಸಲ್ಲಿಸಿದರು. ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಬಿಷಪರು/ ಧರ್ಮಗುರುಗಳು ಪ್ರವಚನ ಮತ್ತು ಸಂದೇಶ ನೀಡಿದರು.

ಪವಿತ್ರ ಜಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸದ ಸತ್ಯದ ಮರು ದೃಢೀಕರಣ ಈ ಸಂದರ್ಭದಲ್ಲಿ ನಡೆಯಿತು. ಕ್ರೈಸ್ತ ಸಂತರನ್ನು ಸ್ಮರಿಸಿ ಅವರ ಶುಭಾಶೀರ್ವಾದಗಳನ್ನು ಕೋರಲಾಯಿತು.

Advertisement

ಸಂಭ್ರಮದ ಬಲಿ ಪೂಜೆಯ ಬಳಿಕ ಕ್ರೆಸ್ತ ಬಾಂಧವರು ಈಸ್ಟರ್‌ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ರವಿವಾರ ಕ್ರೈಸ್ತ ಬಾಂಧವರು ಮನೆಗಳಲ್ಲಿ ಈಸ್ಟರ್‌ ಹಬ್ಬದ ಊಟವನ್ನು ಸವಿದರು.

ಉಡುಪಿಯ ಶೋಕಮಾತಾ ಇಗರ್ಜಿಯಲ್ಲಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರು ರವಿವಾರ ಬೆಳಗ್ಗೆ ವಿಶೇಷ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಕ್ರೈಸ್ತ ಸಭೆಯು ವಿಭೂತಿ ಬುಧವಾರದಿಂದ ಮೊದಲ್ಗೊಂಡು ಈಸ್ಟರ್‌ ಹಬ್ಬದವರೆಗಿನ 40 ದಿನಗಳ ತನಕ ವ್ರತಾಚರಣೆಗೆ ಕರೆ ನೀಡುತ್ತದೆ. ಈ ಅವಧಿಯ ಕೊನೆಯ 7 ದಿನಗಳನ್ನು ಪವಿತ್ರ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ. ಗರಿಗಳ ರವಿವಾರದೊಂದಿಗೆ ಪ್ರಾರಂಭಗೊಳ್ಳುವ ಈ ಸಪ್ತಾಹ ಈಸ್ಟರ್‌ ರವಿವಾರದಂದು ಮುಕ್ತಾಯಗೊಳ್ಳುತ್ತದೆ. ಈ ಸಪ್ತಾಹದ ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನ, ಶುಕ್ರವಾರ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನ, ಶನಿವಾರ ಈಸ್ಟರ್‌ ಹಬ್ಬದ ಜಾಗರಣೆ ಹಾಗೂ ರವಿವಾರ ಈಸ್ಟರ್‌ ಅಥವಾ ಯೇಸು ಕ್ರಿಸ್ತರು ಮರಣವನ್ನು ಜಯಿಸಿ ಪುನರುತ್ಥಾನಗೊಂಡ ಹಬ್ಬವನ್ನು ಆಚರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next