Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ: ಪೂರ್ವ ವಲಯಕ್ಕೆ ಪ್ರಶಸ್ತಿ

03:45 AM Feb 19, 2017 | Team Udayavani |

ಮುಂಬಯಿ: ಪಶ್ಚಿಮ ವಲಯ ತಂಡವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಪೂರ್ವ ವಲಯ ತಂಡವು ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಅಂತರ್‌ ವಲಯ ಕ್ರಿಕೆಟ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದೆ.

Advertisement

ಶನಿವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಶ್ಚಿಮ ವಲಯ ತಂಡವು 20- ಓವರ್‌ಗಳಲ್ಲಿ 5 ವಿಕೆಟಿಗೆ 149 ರನ್‌ ಪೇರಿಸಿತು. ಇದಕ್ಕುತ್ತರವಾಗಿ ವಿರಾಟ್‌ ಸಿಂಗ್‌ ಮತ್ತು ಇಶಾಂಕ್‌ ಜಗ್ಗಿ ಅವರ ಅರ್ಧಶತಕದಿಂದಾಗಿ ಪೂರ್ವ ವಲಯ ತಂಡವು 13.4 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 153 ರನ್‌ ಪೇರಿಸಿ ಗೆಲುವು ಸಾಧಿಸಿತು. ಈ ಗೆಲುವಿನಿಂದ ಪೂರ್ವ ವಲಯ ತಂಡವು ಆಡಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿ ಒಟ್ಟು 16 ಅಂಕಗಳೊಂದಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ದಿನದ ಎರಡನೇ ಪಂದ್ಯದಲ್ಲಿ ದಕ್ಷಿಣ ವಲಯ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿದ ಮಧ್ಯ ವಲಯ ತಂಡವು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ 12 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ದಕ್ಷಿಣ, ಉತ್ತರ ಮತ್ತು ಪಶ್ಚಿಮ ವಲಯ ತಂಡಗಳು ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿದ್ದವು.

ವಿರಾಟ್‌, ಜಗ್ಗಿ ಅರ್ಧಶತಕ
ಗೆಲ್ಲಲು 150 ರನ್‌ ಗಳಿಸುವ ಗುರಿ ಪಡೆದ ಪೂರ್ವ ವಲಯ ತಂಡವು ಉತ್ತಮ ಆರಂಭ ಪಡೆಯಿತು. ಅರುಣ್‌ ಕಾರ್ತಿಕ್‌ ಮತ್ತು ವಿರಾಟ್‌ ಸಿಂಗ್‌ ಕೇವಲ 5.2 ಓವರ್‌ಗಳಲ್ಲಿ 61 ರನ್‌ ಪೇರಿಸಿದರು. ಆಬಳಿಕ ವಿರಾಟ್‌ ಅವರನ್ನು ಸೇರಿಕೊಂಡ ಇಶಾಂಕ್‌ ಜಗ್ಗಿ ಭರ್ಜರಿ ಆಟವಾಡಿ ತಂಡದ ಅಮೋಘ ಗೆಲುವಿಗೆ ಕಾರಣರಾದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 80 ರನ್‌ ಪೇರಿಸಿದರು. ಗೆಲ್ಲಲು 9 ರನ್‌ ಇರುವಾಗ ಜಗ್ಗಿ ಔಟಾದರು. ಕೇವಲ 30 ಎಸೆತ ಎದುರಿಸಿದ ಜಗ್ಗಿ 3 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 56 ರನ್‌ ಸಿಡಿಸಿದರೆ ವಿರಾಟ್‌ 34 ಎಸೆತಗಳಿಂದ 58 ರನ್‌ ಗಳಿಸಿ ಅಜೇಯರಾಗಿ ಉಳಿದರು. 5 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next