Advertisement

ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ : ನೀರಿನ ಬರಕ್ಕೆ ಶಾಶ್ವತ ಪರಿಹಾರ ಯೋಜನೆ

07:59 PM Jan 16, 2020 | Sriram |

ಕಾಸರಗೋಡು: ಮಲಬಾರ್‌ ಪ್ರದೇಶದ ಬಲುದೊಡ್ಡ ಜಲನಿಧಿ ಯೋಜನೆ ಜಿಲ್ಲೆಯ ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ನಲ್ಲಿ ಜಾರಿಗೊಳ್ಳಲಿದೆ. ಇಡೀ ಗ್ರಾಮ ಅನುಭವಿಸುತ್ತಿರುವ ನೀರಿನ ಬರಕ್ಕೆ ಶಾಶ್ವತ ಪರಿಹಾರ ಈ ಮೂಲಕ ಲಭಿಸಲಿದ್ದು, ಮೊದಲ ಹಂತದಲ್ಲಿ 2.450 ಕುಟುಂಬಗಳಿಗೆ ಕುಡಿಯುವ ನೀರಿನ ಪೂರೈಕೆ ನಡೆಯಲಿದೆ.

Advertisement

ಈ ಯೋಜನೆ ಅನುಷ್ಠಾನದ ಪರಿಣಾಮ ಎಂತಹ ಕಠಿನ ಬೇಸಗೆ ಯಲ್ಲೂ ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ನಲ್ಲಿ ಕುಡಿಯುವ ನೀರಿನ ಬರ ತಲೆದೋರದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ. ಜಲನಿಧಿ ಯೋಜನೆಯ ನಿರ್ಮಾಣ ಕಾಮಗಾರಿ ಈಗ ಅಂತಿಮ ಹಂತದಲ್ಲಿದೆ. ಜಲಪ್ರಾಧಿಕಾರ ಮತ್ತು ರಾಜ್ಯ ಜಲನಿಧಿ ಯೋಜನೆ ಜಂಟಿ ವತಿಯಿಂದ ಈ ಯೋಜನೆ ಜಾರಿಗೊಳಿಸುತ್ತಿದೆ. ಇಲ್ಲಿನ ಪ್ರಧಾನ ಟ್ಯಾಂಕ್‌ನಲ್ಲಿ 5 ಲಕ್ಷ ಲೀಟರ್‌ ನೀರು ತುಂಬ ಬಹುದಾಗಿದೆ. 25 ಕಿರು ಟ್ಯಾಂಕ್‌ಗಳೂ ಇದ್ದು, ಇವು 20 ಸಾವಿರ, 10 ಸಾವಿರ, 5 ಸಾವಿರ ಲೀಟರ್‌ ನೀರು ತುಂಬುವ ಸಾಮರ್ಥ್ಯ ಹೊಂದಿವೆ. ಇದಕ್ಕೆ ಬೇಕಾದ ತಲಾ ಮೂರು ಸೆಂಟ್ಸ್‌ ಜಾಗವ‌ನ್ನು ಸಾರ್ವಜನಿಕರು ಉಚಿತವಾಗಿ ಒದಗಿಸಿದ್ದಾರೆ. ಗ್ರಾಮ ಪಂಚಾಯತ್‌ ಗಡಿಯಲ್ಲಿ ಹರಿಯುತ್ತಿರುವ ಕಾರ್ಯಂಗೋಡು ಹೊಳೆಯ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪಂಪ್‌ ಹೌಸ್‌ ನಿರ್ಮಿಸಲಾಗುತ್ತಿದೆ. ಇಲ್ಲಿ ಸಂಗ್ರಹಿಸಲಾಗುವ ನೀರನ್ನು ಒಂದು ಕಿ.ಮೀ. ದೂರದ ತವಳಕುಂಡ್‌ ಮಲೆಯಲ್ಲಿರುವ ಜಲಶುದ್ಧೀಕರಣ ಘಟಕಕ್ಕೆ ರವಾನಿಸಿ ಅಲ್ಲಿ ಶುದ್ಧೀಕರಿಸಿ, ಗ್ರಾಮ ಪಂಚಾಯತ್‌ನ ವಿವಿಧೆಡೆಗಳಿಗೆ ಸರಬರಾಜು ನಡೆಸಲಾಗುವುದು. ಸರಬರಾಜಿಗಾಗಿ 350 ಕಿ.ಮೀ. ಉದ್ದದ ಪೈಪ್‌ಲೈನ್‌ ಇಲ್ಲಿ ಸ್ಥಾಪಿಸಲಾಗಿದೆ. ಪ್ರಯೋಗ ದೃಷ್ಟಿಯಿಂದ ಈಗಾಗಲೇ ನೀರು ಸರಬರಾಜು ಆರಂಭಿಸಲಾಗಿದೆ. ಜನವರಿ ತಿಂಗಳಿಂದ ಪಂಚಾಯತ್‌ನಲ್ಲೇ ಅತಿ ಎತ್ತರದ ಪ್ರದೇಶವಾಗಿರುವ ಮೀನಾಂಜೇರಿಗೆ ನೀರು ಸರಬರಾಜಾಗುತ್ತಿದೆ.

ಈ ಯೋಜನೆಯ ಪ್ರಧಾನ ಟ್ಯಾಂಕ್‌, 25 ಕಿರು ಟ್ಯಾಂಕ್‌, ಪೈಪ್‌ಲೈನ್‌ ಇತ್ಯಾದಿಗಳಿಗಾಗಿ ರಾಜ್ಯ ಜಲನಿಧಿ ಯೋಜನೆ 13.36 ಕೋಟಿ ರೂ., ಜಲಪ್ರಾಧಿಕಾರ 12.12 ಕೋಟಿ ರೂ., ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ ಒಟ್ಟು ಮೊಬಲಗಿನ ಶೇ.15, ಫಲಾನುಭವಿಗಳ ಪಾಲು ರೂಪದಲ್ಲಿ ಶೇ.10 ಒದಗಿಸಿದೆ.

ಈಸ್ಟ್‌ ಏಳೇರಿ ಗ್ರಾಮ ಪಂಚಾಯತ್‌ ಯೋಜನೆಯ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದೆ. ನೌಕರರ ನೇಮಕಾತಿಯನ್ನೂ ಪಂಚಾಯತ್‌ ನಡೆಸಲಿದೆ. ತಿಂಗಳಿಗೆ ಎರಡೂವರೆ ಲಕ್ಷ ರೂ. ವಿದ್ಯುತ್‌ ಶುಲ್ಕ ಪಾವತಿಸಬೇಕಾದೀತು ಎಂದು ಅಂದಾಜಿಸಲಾಗಿದೆ. ಯೋಜನೆಯ ದ್ವಿತೀಯ ಹಂತದಲ್ಲಿ ಈಗ ಅರ್ಜಿ ಸಲ್ಲಿಸದೇ ಇದ್ದವರಿಗೆ ಸಲ್ಲಿಸುವ ಅವಕಾಶಗಳಿವೆ. ಯೋಜನೆ ಉಸ್ತುವಾರಿ ಸಂಬಂಧ ಸಮಿತಿಯೊಂದನ್ನು ರಚಿಸಲು ಪಂಚಾಯತ್‌ ಪದಾಧಿಕಾರಿಗಳು ಅಂದಾಜಿಸಿದ್ದು, ಉದ್ಘಾಟನೆಯ ನಂತರ ಈ ಸಮಿತಿ ಉಸ್ತುವಾರಿ ವಹಿಸಿಕೊಳ್ಳಲಿದೆ.

ಶೀಘ್ರದಲ್ಲಿ ಉದ್ಘಾಟನೆ
2014ರಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಶೇ.99 ಕಾಮಗಾರಿ ಪೂರ್ಣವಾಗಲಿದೆ. ಶೀಘ್ರದಲ್ಲೇ ಯೋಜನೆಯ ಉದ್ಘಾಟನೆ ನಡೆಯಲಿದ್ದು, ತದನಂತರ 2450 ಕುಟುಂಬಗಳಿಗೆ ಕುಡಿಯುವ ನೀರು ವಿತರಣೆಗೊಳ್ಳಲಿದೆ. ಯೋಜನೆಯ ದ್ವಿತೀಯ ಹಂತದಲ್ಲಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಮತ್ತು ಬಿ.ಪಿ.ಎಲ್‌. ಕುಟುಂಬಗಳಿಗೆ ಈ ನೀರಿನ ಸರಬರಾಜು ಪೂರ್ಣರೂಪದಲ್ಲಿ ಉಚಿತವಾಗಿರುವುದು.
– ಜೇಸಿ ಟಾಂ, ಅಧ್ಯಕ್ಷ,
ಈಸ್ಟ್‌ ಏಳೇರಿ ಗ್ರಾ. ಪಂ..

Advertisement
Advertisement

Udayavani is now on Telegram. Click here to join our channel and stay updated with the latest news.

Next