Advertisement

ರೈತರ ಮನೆ ಬಾಗಿಲಿಗೆ ಬರುತ್ತಿದೆ ಕೃಷಿ ಸೌಲಭ್ಯ: ಶೆಟ್ಟಿ

02:52 PM Jun 29, 2019 | Team Udayavani |

ಹೊನ್ನಾವರ: ಜಿಪಂ ಉತ್ತರಕನ್ನಡ, ಕೃಷಿ ಇಲಾಖೆ ಮತ್ತು ಕೃಷಿ ಸಂಬಧಿತ ಇಲಾಖೆ ಸಹಯೋಗದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ದಿನಕರ ಶೆಟ್ಟಿ ಹಳದೀಪುರ ಗ್ರಾಪಂ ಸಭಾಭವನದಲ್ಲಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರ ಮನೆ ಬಾಗಿಲಿಗೆ ಕೃಷಿ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಧಿಕಾರಿಗಳು ಸರ್ಕಾರದ ಸೌಲಭ್ಯವನ್ನು ರೈತರಿಗೆ ತಲುಪಿಸುವ ಕೆಲಸವನ್ನು ಚುರುಕಾಗಿ ಮಾಡಬೇಕು. ರೇಷ್ಮೆ ಇಲಾಖೆ ತಾಲೂಕಿನಲ್ಲಿ ಹೆಸರಿಗೆ ಮಾತ್ರ ಇದೆ. ಕೃಷಿ ಇಲಾಖೆ ರೈತರ ಕುರಿತು ಗಮನ ಹರಿಸುವಂತೆ ಸಲಹೆ ನೀಡಿದರು. ಗ್ರಾಪಂ ಅಧ್ಯಕ್ಷ ಗುಣಮಾಲ ಜೈನ್‌ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಜಯರಾಮ ಹೆಬ್ಟಾರ ಪ್ರಾಸ್ತವಿಕ ಮಾತನಾಡಿದರು.

ಮುಗ್ವಾ ಗ್ರಾಪಂ ಅಧ್ಯಕ್ಷ ಟಿ.ಎಸ್‌. ಹೆಗಡೆ, ಸುರೇಶ ಶೆಟ್ಟಿ, ಉಪಾಧ್ಯಕ್ಷ ಗಣೇಶ ಪೈ, ಇಲಾಖೆ ಅಧಿಕಾರಿಗಳಾದ ಲಕ್ಷ್ಮೀ ದಳವಾಯಿ, ಎಂ.ಜಿ. ಗೌಡ, ಎಂ.ಎಸ್‌. ನಾಯ್ಕ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಲಕ್ಷ್ಮಿ ದಳವಾಯಿ ಸ್ವಾಗತಿಸಿದರು. ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಕೃಷಿ ಅಭಿಯಾನ ಕಾಗದದಲ್ಲಿ ಮಾತ್ರ:

ಬೆರಳಣಿಕೆಯಷ್ಟು ರೈತರು ಹಾಜರಿದ್ದರು. ಇದನ್ನು ಪ್ರಶ್ನಿಸಿದ ಶಾಸಕರು ಹಳದೀಪುರದಲ್ಲಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕೃಷಿ ಇಲಾಖೆ ಕೇಂದ್ರ ಪಾಳು ಬಿದ್ದಿದೆ. ಭತ್ತದ ಬೆಳೆಗೆ ಉಪ್ಪು ನೀರು ಬಂದು ನಾಶವಾದರೂ ಇಲಾಖಾಧಿಕಾರಿಗಳು ತಲೆ ಹಾಕುವುದಿಲ್ಲ. 100 ಎಕರೆಗೂ ಅಧಿಕ ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಳೆದ 10 ವರ್ಷದಿಂದ ರೈತ ಸಂಪರ್ಕ ಕೇಂದ್ರ ಪುನಃ ಸ್ಥಾಪಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಂದು ಅಧಿಕಾರಿಗಳು ಪೇಪರ್‌ ಕೃಷಿ ಅಭಿಯಾನಕ್ಕೆ ಬಂದಿದ್ದಾರೆ. ರೈತರಿಗೆ ಮಾಹಿತಿ ನೀಡಿಯೇ ಇಲ್ಲ. ಜನಪ್ರತಿನಿಧಿಗಳಿಗೆ 3 ದಿನದ ಮೊದಲು ಮಾಹಿತಿ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next